Liger Movie: ಪುನೀತ್ ನಟನೆಯ ‘ಮೌರ್ಯ’ ಚಿತ್ರಕ್ಕೂ ‘ಲೈಗರ್’ ಸಿನಿಮಾ ಕಥೆಗೂ ಇದೆಯಾ ನಂಟು?
Liger | Vijay Devarakonda: ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ನಟಿಸಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆ ಮೂಲಕ ಅವರು ದೇಶಾದ್ಯಂತ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಕಲಾವಿದರ ಜತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ನಿರ್ದೇಶನ ಮಾಡಿರುವ ‘ಲೈಗರ್’ (Liger Movie) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕಥೆಯ ಬಗ್ಗೆ ಒಂದಷ್ಟು ಅನುಮಾನ ಸೃಷ್ಟಿ ಆಗಿದೆ. 2003ರಲ್ಲಿ ಪುರಿ ಜಗನ್ನಾಥ್ ಅವರು ‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಸಿನಿಮಾ ನಿರ್ದೇಶಿಸಿದ್ದರು. ಅದೇ ಸಿನಿಮಾವನ್ನು ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ‘ಮೌರ್ಯ’ ಶೀರ್ಷಿಕೆಯಲ್ಲಿ ರಿಮೇಕ್ ಮಾಡಿದ್ದರು. ಆ ಚಿತ್ರದ ಮುಂದುವರಿದ ಭಾಗವಾಗಿ ‘ಲೈಗರ್’ ಚಿತ್ರ ಮೂಡಿಬಂದಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಈಗ ವಿಜಯ್ ದೇವರಕೊಂಡ (Vijay Devarakonda) ಉತ್ತರ ನೀಡಿದ್ದಾರೆ.
‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಚಿತ್ರ ಕನ್ನಡಕ್ಕೆ ರಿಮೇಕ್ ಆದಾಗ ಪುನೀತ್ ರಾಜ್ ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದರು. ತಾಯಿ-ಮಗನ ಸೆಂಟಿಮೆಂಟ್ ಹಾಗೂ ಬಾಕ್ಸಿಂಗ್ ಆ ಚಿತ್ರದಲ್ಲಿ ಹೈಲೈಟ್ ಆಗಿತ್ತು. ಈಗ ‘ಲೈಗರ್’ ಸಿನಿಮಾದ ಟ್ರೇಲರ್ನಲ್ಲಿಯೂ ಆ ಎಲಿಮೆಂಟ್ ಕಾಣಿಸಿದೆ. ಅಮ್ಮ-ಮಗನ ಪಾತ್ರದಲ್ಲಿ ರಮ್ಯಾ ಕೃಷ್ಣನ್ ಹಾಗೂ ವಿಜಯ್ ದೇವರಕೊಂಡ ನಟಿಸಿದ್ದಾರೆ. ಬಾಕ್ಸರ್ ಗೆಟಪ್ನಲ್ಲಿ ದೇವರಕೊಂಡ ಮಿಂಚುತ್ತಿದ್ದಾರೆ. ಹಾಗಾಗಿ ‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಚಿತ್ರದ ಸೀಕ್ವೆಲ್ ಆಗಿ ‘ಲೈಗರ್’ ಚಿತ್ರ ಮೂಡಿಬಂದಿರಬಹುದು ಎಂಬುದು ಕೆಲವರ ಗುಮಾನಿ.
‘ಆ ಚಿತ್ರಕ್ಕೂ ಲೈಗರ್ ಸಿನಿಮಾಗೂ ಸಂಬಂಧ ಇಲ್ಲ. ಇದು ಬೇರಯದೇ ಕಥೆ. ರಿಮೇಕ್ ಅಥವಾ ಫ್ರೀಮೇಕ್ ಮಾಡಲು ನಾನು ಇಷ್ಟಪಡುವುದಿಲ್ಲ’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಆಗಸ್ಟ್ 25ರಂದು ‘ಲೈಗರ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ.
‘ಲೈಗರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ದೇಶದ ವಿವಿಧ ನಗರಗಳಿಗೆ ತೆರಳಿ ಇವರಿಬ್ಬರೂ ಪ್ರಮೋಷನ್ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಸಿನಿಮಾ ರಿಲೀಸ್ಗೂ ಮುನ್ನವೇ ಇದನ್ನು ಬ್ಲಾಕ್ ಬಸ್ಟರ್ ಹಿಟ್ ಎಂದು ವಿಜಯ್ ದೇವರಕೊಂಡ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Tue, 16 August 22