‘ಸಂಜು’ ಸಿನಿಮಾದ ಹಾಡುಗಳ ಬಿಡುಗಡೆಗೆ ಸಾಕ್ಷಿಯಾದ ಚಂದನವನದ ಸೆಲೆಬ್ರಿಟಿಗಳು
ಸ್ಯಾಂಡಲ್ವುಡ್ನ ಹಲವು ನಿರ್ದೇಶಕರು ‘ಸಂಜು’ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ವಿಜಯ್ ಹರಿತ್ಸ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ. ಆಡಿಯೋ ರಿಲೀಸ್ ಮಾಡಿದ ಚಿತ್ರರಂಗದ ಗಣ್ಯರಿಗೆ ನಿರ್ದೇಶಕ ಯತಿರಾಜ್ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮನ್ವೀತ್ ಹಾಗೂ ಶ್ರಾವ್ಯ ಅವರು ನಟಿಸಿದ್ದಾರೆ.
ಆರಂಭದಲ್ಲಿ ಪತ್ರಕರ್ತನಾಗಿದ್ದು, ಬಳಿಕ ಸಿನಿಮಾಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡ ಯತಿರಾಜ್ (Yathiraj) ಅವರು ಈಗ ಡೈರೆಕ್ಟರ್ ಆಗಿ ಸಕ್ರಿಯರಾಗಿದ್ದಾರೆ. ಅವರು ಆ್ಯಕ್ಷನ್-ಕಟ್ ಹೇಳಿರುವ ‘ಸಂಜು’ (Sanju) ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಿರ್ದೇಶಕ ಯೋಗರಾಜ್ ಭಟ್, ಗುರು ದೇಶಪಾಂಡೆ, ‘ಮಠ’ ಗುರುಪ್ರಸಾದ್, ರವಿ ಆರ್. ಗರಣಿ, ಪಿ. ಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber) ಅಧ್ಯಕ್ಷ ಎನ್.ಎಂ. ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಂತಾದ ಗಣ್ಯರ ಸಮ್ಮುಖದಲ್ಲಿ ‘ಸಂಜು’ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲ ಅತಿಥಿಗಳು ಈ ಸಿನಿಮಾ ತಂಡಕ್ಕೆ ಶುಭಕೋರಿದರು. ಈ ಚಿತ್ರದ ಮೂಲಕ ಮನ್ವೀತ್ ಹೀರೋ ಆಗುತ್ತಿದ್ದಾರೆ.
ವಿಜಯ್ ಹರಿತ್ಸ ಅವರು ‘ಸಂಜು’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡುಗಳು ಬಿಡುಗಡೆ ಆಗಿವೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್ ಮತ್ತು ನವೀನ್ ಸಜ್ಜು ಅವರು ಈ ಸಿನಿಮಾದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಮನ್ವೀತ್ ಮತ್ತು ಶ್ರಾವ್ಯ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ‘ನಾನು ಸಿನಿಮಾ ಅಥವಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬದಿಂದ ಬಂದಿಲ್ಲ. ಸಾಮಾನ್ಯ ರೈತರ ಮಗನಾದ ನನ್ನನ್ನು ಸಿನಿಮಾದಲ್ಲಿ ಹೀರೋ ಮಾಡಲು ಇಷ್ಟು ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಧನ್ಯವಾದಗಳು. ನಿರ್ದೇಶಕ ಯತಿರಾಜ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾದರು’ ಎಂದು ಮನ್ವೀತ್ ಹೇಳಿದ್ದಾರೆ.
ಇದನ್ನೂ ಓದಿ: ‘ಹಯಗ್ರೀವ’ನಾಗಿ ಧನ್ವೀರ್ ಗೌಡ, ಗೌಪ್ಯವಾಗಿರಲಿದೆ ಮತ್ತೊಬ್ಬ ನಾಯಕನ ಹೆಸರು ಧನ್ವೀರ್
ಸಂತೋಷ್ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ಯತಿರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. ‘ಈ ಸಿನಿಮಾಗೆ ‘ಅಗಮ್ಯ ಪಯಣಿಗ’ ಎಂಬ ಅಡಿಬರಹ ಇದೆ. ಯಾಕೆಂದರೆ, ಒಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ ಇದು. ಈ ಸಿನಿಮಾದ ಕಥಾನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವನ ಜೀವನದಲ್ಲಿ ಅನೇಕ ಏರಿಳಿತಗಳು ಉಂಟಾಗುತ್ತವೆ’ ಎಂದು ಯತಿರಾಜ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಈ ಸಿನಿಮಾದ ಬಹುತೇಕ ಶೂಟಿಂಗ್ ಮಾಡಲಾಗಿದೆ.
ಇದನ್ನೂ ಓದಿ: ‘ಯು/ಎ’ ಪ್ರಮಾಣಪತ್ರ ಪಡೆದ ‘ರವಿಕೆ ಪ್ರಸಂಗ’; ಫೆಬ್ರವರಿ 16ರಂದು ಸಿನಿಮಾ ಬಿಡುಗಡೆ
ಶ್ರಾವ್ಯ ಅವರು ‘ಸಂಜು’ ಸಿನಿಮಾದಲ್ಲಿ ಸರಸ್ವತಿ ಅಲಿಯಾಸ್ ಸರಸು ಎಂಬ ಪಾತ್ರ ಮಾಡಿದ್ದಾರೆ. ‘ಈ ಚಿತ್ರದ ಮೊದಲ 15 ದೃಶ್ಯಗಳಲ್ಲಿ ನನ್ನ ಪಾತ್ರಕ್ಕೆ ಮಾತುಗಳಿಲ್ಲ. ಬರೀ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕು’ ಎಂದು ಹೇಳುವ ಮೂಲಕ ಅವರು ತಮ್ಮ ಪಾತ್ರದ ಬಗ್ಗೆ ಕೌತುಕ ಮೂಡಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸಂತೋಷ್ ಡಿ.ಎಂ. ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾ ನಾಗೇಶ್ ಅವರ ಛಾಯಾಗ್ರಹಣ, ಮದನ್-ಹರಿಣಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ