ಅಬ್ದುಲ್ ಕಲಾಂ ಕಾರು ಚಾಲಕನಾಗಿದ್ದ ನಂದನ ಪ್ರಭು ನಿರ್ದೇಶನದಲ್ಲಿ ‘ಓರಿಯೋ’ ಸಿನಿಮಾ: ಏನಿದರ ಕಥೆ?
ಅಬ್ದುಲ್ ಕಲಾಂ ಅವರು ಹೇಳಿದ್ದ ಮಾತುಗಳೇ ‘ಓರಿಯೋ’ ಕನ್ನಡ ಚಿತ್ರಕ್ಕೆ ಸ್ಫೂರ್ತಿ. ಈ ಸಿನಿಮಾಗೆ ನಂದನ ಪ್ರಭು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಕ್ಷೇತ್ರ ಎಲ್ಲರನ್ನೂ ಆಕರ್ಷಿಸುತ್ತದೆ. ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಜನರು ಚಿತ್ರರಂಗಕ್ಕೆ ಬಂದು ಕಾರ್ಯನಿರತರಾದ ಅನೇಕ ಉದಾಹರಣೆಗಳಿವೆ. ಎ.ಪಿ.ಜೆ. ಅಬ್ದುಲ್ ಕಲಾಂ (APJ Abdul Kalam) ಅವರ ಕಾರು ಚಾಲಕನಾಗಿದ್ದ ನಂದನ ಪ್ರಭು ಅವರು ಕೂಡ ಸಿನಿಮಾರಂಗಕ್ಕೆ ಕಾಲಿಟ್ಟರು. ಬಿಎಂಟಿಸಿ ಕಂಡಕ್ಟರ್ ಆಗಿಯೂ ಕೆಲಸ ಮಾಡಿರುವ ಅವರು, ಈಗಾಗಲೇ ‘ಪ್ರೀತಿಯ ಲೋಕ’, ‘ಲವ್ ಈಸ್ ಪಾಯಿಸನ್’ ಚಿತ್ರ ಮಾಡಿದ್ದಾರೆ. ಈಗ ‘ಓರಿಯೋ’ ಸಿನಿಮಾ ನಿರ್ದೇಶಿಸಿದ್ದಾರೆ. ಅಬ್ದುಲ್ ಕಲಾಂ ಅವರು ಹೇಳಿದ ಕೆಲವು ಮಾತುಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಂದನ ಪ್ರಭು (Director Nandana Prabhu) ಅವರು ಈ ಸಿನಿಮಾ ಮಾಡಿದ್ದಾರೆ ಎಂಬುದು ವಿಶೇಷ. ಅಬ್ದುಲ್ ಕಲಾಂ ಹೇಳಿದ ಆ ವಿಚಾರಗಳು ಏನು? ಅವು ತೆರೆ ಮೇಲೆ ಹೇಗೆ ಮೂಡಿಬಂದಿವೆ? ಈ ಪ್ರಶ್ನೆಗಳಿಗೆ ‘ಓರಿಯೋ’ ಸಿನಿಮಾ (Oriyo Kannada Movie) ನೋಡಿ ಉತ್ತರ ಪಡೆಯಬೇಕು. ಸದ್ಯಕ್ಕೆ ಈ ಸಿನಿಮಾಗೆ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ. ಸುದ್ದಿಗೋಷ್ಠಿ ನಡೆಸಿ ಒಟ್ಟಾರೆ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಂದನ ಪ್ರಭು ಮತ್ತು ಅವರ ತಂಡದವರು.
ಏನಿದು ‘ಓರಿಯೋ’? ಈ ಪ್ರಶ್ನೆ ಮೂಡುವುದು ಸಹಜ. ‘ಈ ಪದಕ್ಕೆ ಒಂದು ಅರ್ಥ ಇಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಅರ್ಥ ಇದೆ. ಎಲ್ಲವನ್ನೂ ಒಟ್ಟಾಗಿ ನೋಡಿದಾಗ ಕತ್ತಲು ಮತ್ತು ಬೆಳಕು ಎಂಬ ಅರ್ಥ ಸಿಗುತ್ತದೆ. ಈ ಕಥೆ ಕೂಡ ಕತ್ತಲು ಮತ್ತು ಬೆಳಕಿನ ನಡುವೆ ನಡೆಯುವಂಥದ್ದು. ಹಾಗಾಗಿ ಓರಿಯೋ ಎಂಬ ಶೀರ್ಷಿಕೆ ಹೆಚ್ಚು ಸೂಕ್ತ ಆಗುತ್ತದೆ’ ಎಂದಿದ್ದಾರೆ ನಿರ್ದೇಶಕ ನಂದನ ಪ್ರಭು.
‘ನಾನು ಅಬ್ದುಲ್ ಕಲಾಂ ಜೊತೆ ಇದ್ದಾಗ ನನಗೆ ಅವರು ಒಂದಷ್ಟು ಮಾತುಗಳನ್ನು ಹೇಳಿದ್ದರು. ಅದನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಕಥೆ ಬರೆದೆ. 6 ವರ್ಷಗಳ ಕಾಲ ಅಧ್ಯಯನ ನಡೆಸಿ, ಚಿತ್ರಕಥೆ ಬರೆದು ಸಿನಿಮಾ ಮಾಡಿದ್ದೇನೆ. ರಿವರ್ಸ್ ಸ್ಕ್ರೀನ್ಪ್ಲೇ ರೀತಿಯಲ್ಲಿ ಕಥೆ ಹೇಳುತ್ತೇವೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಆದರೆ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯ ಆಗುವಂತಹ ಮೆಸೇಜ್ ಇದೆ. ಸದ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ’ ಎಂದು ನಂದನ ಪ್ರಭು ಹೇಳಿದ್ದಾರೆ.
ಈ ಚಿತ್ರದ ಪೋಸ್ಟರ್ ಗಮನ ಸೆಳೆಯುವಂತಿದೆ. ಐದು ಹೆಡೆಯ ಸರ್ಪ, ಅದರಲ್ಲಿ ಮನುಷ್ಯರ ಮುಖ ಕಾಣುವ ರೀತಿಯಲ್ಲಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ತಕ್ಷಣಕ್ಕೆ ನೋಡಿದರೆ ಸೂಪರ್ ನ್ಯಾಚುರಲ್ ಅಥವಾ ಹಾರರ್ ಶೈಲಿಯ ಸಿನಿಮಾ ಎನಿಸುತ್ತದೆ. ಆ ಅಂಶಗಳು ಕೂಡ ಸಿನಿಮಾದಲ್ಲಿ ಇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ವಿಜಯಶ್ರೀ ಎಂ.ಆರ್. ಮತ್ತು ವೈಶಾಲಿ ವೈ.ಜೆ. ಅವರು ಈ ಸಿನಿಮಾದ ನಿರ್ಮಾಪಕರು. ಸಾಯಿ ಕಿರಣ್ ಸಂಗೀತ, ಬ್ಯಾಟಪ್ಪ ಗೌಡ, ಪ್ರಭಾಕರ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಮತ್ತು ಚಂದ್ರು ಬಂಡೆ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಮಾಡುವುದರ ಜೊತೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಕೂಡ ನಂದನ ಪ್ರಭು ಅವರೇ ಬರೆದಿದ್ದಾರೆ.
ಸುಚಿತ್, ಶುಭಿ, ಯುಕ್ತಾ, ನಿತಿನ್ ಗೌಡ, ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೆಹಲಿ ಮೂಲದ ನಟಿ ಶುಭಿ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಮಾಡಲಿಂಗ್ನಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಮುಂಬೈ ಮೂಲದ ನಟಿ ಯುಕ್ತಾ ಅವರು 6 ತಿಂಗಳಲ್ಲಿ ಕನ್ನಡ ಕಲಿತು ಭೇಷ್ ಎನಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.