AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ ನಟ ಪ್ರಜ್ವಲ್ ದೇವರಾಜ್: ಕಾರಣ?

Prajwal Devaraj: ಪ್ರಜ್ವಲ್ ದೇವರಾಜ್ ತಮ್ಮ ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ್ದಾರೆ. ಆದರೆ ಮನವಿಯೊಂದನ್ನು ಸಹ ಮಾಡಿದ್ದಾರೆ.

ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ ನಟ ಪ್ರಜ್ವಲ್ ದೇವರಾಜ್: ಕಾರಣ?
ಪ್ರಜ್ವಲ್ ದೇವರಾಜ್
Follow us
ಮಂಜುನಾಥ ಸಿ.
|

Updated on: Jun 23, 2023 | 10:25 PM

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್​ಗೆ (Prajwal Devaraj) ತಮ್ಮದೇ ಆದ ಅಭಿಮಾನಿ (Fan) ಬಳಗವಿದೆ. ಪೈಸಾ ವಸೂಲ್ ಸಿನಿಮಾಗಳನ್ನು ಮಾಡುತ್ತಾ ಸಾಗುತ್ತಿರುವ ಪ್ರಜ್ವಲ್​ ದೇವರಾಜ್ ಪ್ರಸ್ತುತ ನಾಲ್ಕಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಾ ತಮ್ಮದೇ ಮಾದರಿಯ ಸಿನಿಮಾಗಳನ್ನು ಮಾಡುತ್ತಾ ಮುನ್ನಡೆಯುತ್ತಿದ್ದಾರೆ ಪ್ರಜ್ವಲ್ ದೇವರಾಜ್. ಕನ್ನಡದ ಇತರ ನಟರಂತೆ ಅಭಿಮಾನಿಗಳಿಗೆ ವಿಪರೀತ ಅಕ್ಕರೆ, ಗೌರವ ತೋರುವ ಪ್ರಜ್ವಲ್, ಅಭಿಮಾನಿಗಳನ್ನು ಊಟಕ್ಕೆ ಆಹ್ವಾನಿಸಿದ್ದಾರೆ.

ಜುಲೈ ನಾಲ್ಕನೇ ತಾರೀಖು ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಕಳೆದ ಐದು ವರ್ಷಗಳಿಂದಲೂ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೋವಿಡ್, ಆಪ್ತ ಗೆಳೆಯ ಚಿರಂಜೀವಿ ಸರ್ಜಾ ಮರಣ, ಪುನೀತ್ ರಾಜ್​ಕುಮಾರ್ ನಿಧನ ಇನ್ನಿತರೆ ಕಾರಣಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಸಂಭ್ರಮಾಚರಣೆಯನ್ನು ಮುಂದೂಡಿದ್ದರು. ಆದರೆ ಈ ಬಾರಿ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಪ್ರಜ್ವಲ್ ದೇವರಾಜ್, ಜುಲೈ ನಾಲ್ಕು ನನ್ನ ಹುಟ್ಟುಹಬ್ಬ. ಕಳೆದ ಐದು ವರ್ಷಗಳಿಂದಲೂ ನಾನು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ನಿಮ್ಮನ್ನು ಭೇಟಿಯಾಗಿರಲಿಲ್ಲ. ಅದೇಕೆ ಎಂಬುದು ಎಲ್ಲರಿಗೂ ತಿಳಿದಿರುವಂಥಹುದೆ. ಎಂಥಹಾ ಕಠಿಣ ಪರಿಸ್ಥಿತಿಗಳಲ್ಲಿ ನಾವುಗಳೆಲ್ಲ ಇದ್ದೆವು ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಅಭಿಮಾನಿಗಳನ್ನು ಭೇಟಿಯಾಗಲಿದ್ದೇನೆ. ಜುಲೈ ನಾಲ್ಕರಂದು ಮನೆಯ ಹತ್ತಿರ ಎಲ್ಲರೂ ಬನ್ನಿ, ಊಟ ಮಾಡಿಕೊಂಡು ಹೋಗಿ, ನನಗೂ ನಿಮ್ಮೊಟ್ಟಿಗೆ ಹೆಚ್ಚು ಸಮಯ ಕಳೆಯುವ ಆಸೆಯಿದೆ” ಎಂದಿದ್ದಾರೆ.

ಇದನ್ನೂ ಓದಿ:ವೀರಂ ಹಿಂದೆಯೇ ಬರಲಿದೆ ಮಾಫಿಯಾ, ಒಂದರಹಿಂದೊಂದು ಪ್ರಜ್ವಲ್ ದೇವರಾಜ್ ಸಿನಿಮಾ

ಮುಂದುವರೆದು ಒಂದು ಮನವಿಯನ್ನೂ ಮಾಡಿರುವ ಪ್ರಜ್ವಲ್, ”ಆದರೆ ಹೀಗೆ ಬರುವಾಗ ದಯವಿಟ್ಟು ಯಾರೂ ಸಹ ಹಾರ, ಹೂಗುಚ್ಛ, ಕೇಕ್ ಅಥವಾ ಇನ್ಯಾವುದೇ ಉಡುಗೊರೆಗಳನ್ನು ತರಬೇಡಿ. ಅದರ ಬದಲಿಗೆ ಅದೇ ದುಡ್ಡಿನಲ್ಲಿ ಯಾರಾದರೂ ಬಡವರಿಗೆ, ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯ ಮಾಡಿ. ನನ್ನ ಪಾಲಿಗೆ ಅದೇ ನಿಮ್ಮ ಉಡುಗೊರೆ” ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್.

ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ್ ಗೌಡ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು ಅದಾದ ಬಳಿಕ ಪ್ರಜ್ವಲ್ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಪ್ರಜ್ವಲ್ ಕೈಯಲ್ಲಿ ಇದೀಗ ನಾಲ್ಕು ಸಿನಿಮಾಗಳಿವೆ. ಅಬ್ಬರ, ವೀರಂ, ಮಾಫಿಯಾ ಹಾಗೂ ಗಣಂ ಹೆಸರಿನ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ನಟಿಸುತ್ತಿದ್ದಾರೆ. ಪ್ರಜ್ವಲ್​ರ ಮತ್ತೊಂದು ಸಿನಿಮಾ ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆಯೂ ಇದೆ.

2007ರಲ್ಲಿ ಸಿಕ್ಸರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಜ್ವಲ್ ದೇವರಾಜ್, ಹದಿನಾರು ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ. ಈಗಲೂ ಬೇಡಿಕೆಯ ನಟರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್​ರ ಪತ್ನಿ ರಾಗಿಣಿ ಪ್ರಜ್ವಲ್ ದೇವರಾಜ್ ಸಹ ನಟಿಯಾಗಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ