Karnataka Ratna: ಪುನೀತ್ ರಾಜ್ಕುಮಾರ್ಗೆ ನವೆಂಬರ್ 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ ಘೋಷಣೆ
Puneeth Rajkumar | Karnataka Ratna: ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಯಿತು. ಅವರ ಪರವಾಗಿ ಕುಟುಂಬದವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಿದ್ದ ಸುದ್ದಿ ಈಗ ಹೊರಬಿದ್ದಿದೆ. ಪುನೀತ್ ಅವರಿಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪದಾನ ಮಾಡುವ ದಿನಾಂಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಘೋಷಿಸಿದ್ದಾರೆ. ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕುರಿತು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ‘ಕನ್ನಡ ಚಿತ್ರರಂಗದ ಮೇರುನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನವೆಂಬರ್ 1ರಂದು ಪ್ರದಾನ ಮಾಡಲು ತಿರ್ಮಾನಿಸಲಾಗಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪುನೀತ್ಗೆ ಮರಣೋತ್ತರವಾಗಿ ಈ ಪ್ರಶಸ್ತಿ ಘೋಷಿಸಲಾಯಿತು. ಅವರ ಪರವಾಗಿ ಕುಟುಂಬದವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕನ್ನಡ ಚಿತ್ರರಂಗದ ಮೇರುನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತಿರ್ಮಾನಿಸಲಾಗಿದೆ. #PuneethRajkumar pic.twitter.com/zAoEwOW5CG
ಇದನ್ನೂ ಓದಿ— Basavaraj S Bommai (@BSBommai) August 5, 2022
ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್‍ಕುಮಾರ್ ನೀಡಿದ ಕೊಡುಗೆ ಅಪಾರ. ಬಾಲ ನಟನಾಗಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಾಲಕನಾಗಿದ್ದಾಗಲೇ ‘ಭಕ್ತ ಪ್ರಹ್ಲಾದ’ ರೀತಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಕರುನಾಡಿಗೆ ಹೆಮ್ಮೆ ತಂದರು. ಹೀರೋ ಆದ ಬಳಿಕವೂ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹಲವರಿಗೆ ಅವಕಾಶ ಕೊಟ್ಟರು. ಸಿನಿಮಾ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಜನಮನ ಗೆದ್ದರು. ಈ ಎಲ್ಲ ಸಾಧನೆಯನ್ನು ಪರಿಗಣಿಸಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ.
ಕರುನಾಡಿನ ಬಗ್ಗೆ ಪುನೀತ್ ರಾಜ್‍ಕುಮಾರ್ ಅಪಾರ ಗೌರವ ಹೊಂದಿದ್ದರು. ಇಲ್ಲಿನ ಅರಣ್ಯ ಮತ್ತು ವನ್ಯ ಜೀವಿಗಳ ಕುರಿತು ವಿಶ್ವದರ್ಜೆಯ ಗುಣಮಟ್ಟದಲ್ಲಿ ಸಾಕ್ಷ್ಯಚಿತ್ರ ಮಾಡಬೇಕು ಎಂಬುದು ಅವರ ಕನಸಾಗಿತ್ತು. ‘ಗಂಧದ ಗುಡಿ’ ಶೀರ್ಷಿಕೆಯಲ್ಲಿ ಮೂಡಿಬರುತ್ತಿದ್ದ ಆ ಡಾಕ್ಯುಮೆಂಟರಿ ಕೆಲಸಗಳು ಅರ್ಧದಲ್ಲಿ ಇರುವಾಗಲೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅಕ್ಟೋಬರ್ 28ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಅದರ ಬೆನ್ನಲೇ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಆಗಲಿರುವುದು ವಿಶೇಷ. ಈ ಎರಡೂ ಖುಷಿಯ ದಿನವನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Fri, 5 August 22