‘ಗಜರಾಮ’ ಚಿತ್ರದ ಪೋಸ್ಟರ್ ರಿಲೀಸ್; ರಗಡ್ ಲುಕ್ನಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್
Rajavardhan | Gajarama Kannada Movie: ಸೆಪ್ಟೆಂಬರ್ ಕೊನೇ ವಾರದಲ್ಲಿ ‘ಗಜರಾಮ’ ಚಿತ್ರದ ಶೂಟಿಂಗ್ ಶುರುವಾಲಿದೆ. ಫಸ್ಟ್ಲುಕ್ ಪೋಸ್ಟರ್ನಲ್ಲಿ ರಾಜವರ್ಧನ್ ಅವರ ರಗಡ್ ಗೆಟಪ್ ಹೈಲೈಟ್ ಆಗಿದೆ.
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ (Dingri Nagaraj) ಅವರು ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೋ ಆಗಿ ಅವರು ಸ್ಯಾಂಡಲ್ವುಡ್ನಲ್ಲಿ ಗುರುಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ರಾಜವರ್ಧನ್ (Rajavardhan) ನಟಿಸುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್ಗಳಿಗೆ. ಅವುಗಳ ನಡುವೆ ರಾಜವರ್ಧನ್ ನಟಿಸುತ್ತಿರುವ ‘ಗಜರಾಮ’ (Gajarama) ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ. ಈಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಒಂದಷ್ಟು ಕಾರಣದಿಂದಾಗಿ ಈ ಚಿತ್ರ ಕೌತುಕ ಮೂಡಿಸಿದೆ.
‘ಗಜರಾಮ’ ಶೀರ್ಷಿಕೆಯೇ ಸಿನಿಪ್ರಿಯರ ಗಮನ ಸೆಳೆದಿದೆ. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ. ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಗೆಟಪ್ ಹೇಗಿರಲಿದೆ ಎಂಬುದನ್ನು ತಿಳಿಸಲು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಖತ್ ರಗಡ್ ಲುಕ್ನಲ್ಲಿ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್ ಹೀರೋ ಅವತಾರ ತಾಳಿದ್ದಾರೆ ಎಂಬುದಕ್ಕೆ ಪೋಸ್ಟರ್ನಲ್ಲೇ ಸಾಕ್ಷಿ ಸಿಗುತ್ತಿದೆ.
ನಿರ್ದೇಶಕ ಸುನೀಲ್ ಕುಮಾರ್ ಅವರಿಗೆ ‘ಗಜರಾಮ’ ಮೊದಲ ಸಿನಿಮಾ. ಈ ಹಿಂದೆ ಅವರು ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ‘ದುನಿಯಾ’ ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಸಹಾಯಕ ಹಾಗೂ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸ್ವತಂತ್ರ ನಿರ್ದೇಶಕನಾಗಿ ‘ಗಜರಾಮ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಅನುಭವಿ ತಂತ್ರಜ್ಞರು ಈ ಚಿತ್ರದ ತೆರೆ ಹಿಂದೆ ಕೆಲಸ ಮಾಡುತ್ತಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಆ್ಯಕ್ಷನ್ ಚಿತ್ರವಾಗಿ ‘ಗಜರಾಮ’ ಮೂಡಿಬರುತ್ತಿದೆ. ಮನೋಮೂರ್ತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣದ ಜವಾಬ್ದಾರಿ ಗೊತ್ತಿದ್ದಾರೆ. ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶಕ ಮಾಡಲಿದ್ದಾರೆ. ಚಿನ್ಮಯ್ ಭಾವಿಕೆರೆ ಮತ್ತು ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ಬರೆಯಲಿದ್ದಾರೆ.
ಸೆಪ್ಟೆಂಬರ್ ಕೊನೇ ವಾರದಲ್ಲಿ ‘ಗಜರಾಮ’ ಚಿತ್ರದ ಶೂಟಿಂಗ್ ಶುರುವಾಲಿದೆ. ‘ಲೈಫ್ ಲೈನ್ ಫಿಲ್ಮ್ಸ್’ ಬ್ಯಾನರ್ ಮೂಲಕ ನರಸಿಂಹ ಮೂರ್ತಿ ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ರಾಜವರ್ಧನ್ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಶೀಘ್ರದಲ್ಲೇ ತಿಳಿಸಲಿದೆ.
‘ಹಿರಣ್ಯ’, ‘ಪ್ರಣಯಂ’ ಮುಂತಾದ ಸಿನಿಮಾಗಳು ರಾಜವರ್ಧನ್ ಕೈಯಲ್ಲಿ ಇವೆ. ಅವುಗಳ ಸಾಲಿಗೆ ‘ಗಜರಾಮ’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.