
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ (Rakesh Poojary) ಅವರು ನಿಧನರಾಗಿದ್ದು ಇಡೀ ಚಿತ್ರರಂಗಕ್ಕೆ ನೋವು ತಂದಿದೆ. ಅವರ ಪ್ರತಿಭೆ ಮತ್ತು ವ್ಯಕ್ತಿತ್ವದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಮಲ್ಪೆ ಸಮೀಪದ ಹೂಡೆಗೆ ಆಗಮಿಸಿದ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಬಂದು ಕಣ್ಣೀರು ಸುರಿಸಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಕೇಶ್ ಪೂಜಾರಿ ಜೊತೆಗಿನ ನೆನಪುಗಳನ್ನು ಅವರು ಮೆಲುಕು ಹಾಕಿದರು. ರಕ್ಷಿತಾ ಪ್ರೇಮ್ (Rakshita Prem) ಮೇಲೆ ರಾಕೇಶ್ ಪೂಜಾರಿ ಅವರು ಅಪಾರ ಅಭಿಮಾನ ಹೊಂದಿದ್ದರು. ಅದನ್ನೆಲ್ಲ ನೆನಪಿಸಿಕೊಂಡು ರಕ್ಷಿತಾ ಅವರು ಕಣ್ಣೀರು ಹಾಕಿದ್ದಾರೆ.
‘ತುಂಬ ವರ್ಷಗಳಿಂದ ನನಗೆ ರಾಕೇಶ್ ಪರಿಚಯ. ಅವನು ಕಾಮಿಡಿ ಕಿಲಾಡಿಗಳು ಗೆದ್ದ. ಅಷ್ಟೇ ಪ್ರತಿಭಾವಂತ ಕೂಡ. ತೆರೆ ಹಿಂದೆ ಅಷ್ಟೇ ಒಳ್ಳೆಯ ಹುಡುಗ ಕೂಡ ಹೌದು. ನಮ್ಮ ಕಾಮಿಡಿ ಕಿಲಾಡಿಗಳು ತಂಡ ಒಂದು ಕುಟುಂಬದ ರೀತಿ ಇರುತ್ತಿತ್ತು. ಇಷ್ಟು ಬೇಗ ಅವನು ಹೋಗಬಾರದಿತ್ತು. ಅವನಿಗೆ ತುಂಬ ಸಣ್ಣ ವಯಸ್ಸು. ಅವರ ತಂದೆ ಕೂಡ ಎರಡು ವರ್ಷಗಳ ಹಿಂದೆ ತೀರಿ ಹೋಗಿದ್ದರು’ ಎಂದಿದ್ದಾರೆ ರಕ್ಷಿತಾ ಪ್ರೇಮ್.
‘ಅವರ ಮನೆಯಲ್ಲಿ ರಾಕೇಶ್ ಒಬ್ಬನೇ ದುಡಿಯುವವನು ಇದ್ದಿದ್ದು. ಈಗ ಅವರ ಅಮ್ಮ ಮತ್ತು ತಂಗಿಯನ್ನು ನೋಡಿದರೆ ನಿಜವಾಗಿಯೂ ಬೇಜಾರು ಆಗುತ್ತದೆ. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಕ್ಷಿತಾ ಪ್ರೇಮ್ ಅವರು ಕಂಬನಿ ಮಿಡಿದಿದ್ದಾರೆ. ಆ್ಯಂಕರ್ ಅನುಶ್ರೀ, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದಿದ್ದಾರೆ.
‘ಈಗ ಎಲ್ಲವೂ ನೆನಪಾಗುತ್ತಿದೆ. ರಾಕೇಶ್ ಬಗ್ಗೆ ಏನು ನೆನಪಾಗಲ್ಲ ಅಂತ ಹೇಳೋಕೆ ಆಗಲ್ಲ. ಆರು ತಿಂಗಳ ಹಿಂದೆ ಅವನಿಗೆ ಅಪಘಾತ ಆಗಿತ್ತು. ಆಗ ನಾವೆಲ್ಲ ಅವನಿಗೆ ತುಂಬ ಬೈಯ್ದಿದ್ದೆವು. ತುಂಬ ಹುಷಾರಾಗಿ ಇರಬೇಕು, ಹೀಗೆಲ್ಲ ಗಾಡಿ ಓಡಿಸಬಾರದು ಅಂತ ಹೇಳಿದ್ದೆವು. ಹಲವಾರು ಬಾರಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದ. ಜೊತೆಯಾಗಿ ನಕ್ಕಿದ್ದೇವೆ. ಅದನ್ನೆಲ್ಲ ಯಾವತ್ತೂ ಮರೆಯೋಕೆ ಆಗಲ್ಲ’ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
‘ರಾಕೇಶ್ ತುಂಬ ಒಳ್ಳೆಯ ಹುಡುಗ. ಅಂಥವನು ಇಷ್ಟು ಬೇಗ ಹೋಗಿದ್ದು ತುಂಬ ಬೇಜಾರಾಗುತ್ತದೆ. ಅವನು ಮೊದಲ ದಿನದಿಂದಲೂ ಇನ್ಸ್ಟಾಗ್ರಾಮ್ನಲ್ಲಿ ನನ್ನ ಜೊತೆ ಇರುವ ಫೋಟೋದ ಡಿಪಿಯನ್ನೇ ಹಾಕಿಕೊಂಡಿದ್ದ. ಇವತ್ತು ಬೆಳಿಗ್ಗೆ ದರ್ಶನ್ ಕೂಡ ಫೋನ್ ಮಾಡಿ ಕೇಳಿದರು. ನಮಗೆಲ್ಲರಿಗೂ ಈ ಘಟನೆಯಿಂದ ತುಂಬ ನೋವಾಗಿದೆ’ ಎಂದಿದ್ದಾರೆ ರಕ್ಷಿತಾ ಪ್ರೇಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.