ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಅವರು ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾದ ಬಿಡುಗಡೆ ಬಗ್ಗೆ ಗಮನ ಹರಿಸಿದ್ದಾರೆ. ಅವರ ಬಗ್ಗೆ ಈಗಾಗಲೇ ಎಲ್ಲ ಕಡೆ ಟಾಕ್ ಶುರುವಾಗಿದೆ. ಟ್ರೇಲರ್ ನೋಡಿದ ಪರಭಾಷೆ ಮಂದಿ ಕೂಡ ಅನೂಪ್ ಕೆಲಸಕ್ಕೆ ಭೇಷ್ ಎನ್ನುತ್ತಿದ್ದಾರೆ. ಅಂದಹಾಗೆ, ಅನೂಪ್ ಭಂಡಾರಿ ಅವರ ಪ್ರತಿಭೆಗೆ ಈ ಪರಿ ಮೆಚ್ಚುಗೆ ಸಿಕ್ಕಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ‘ರಂಗಿತರಂಗ’ (Rangi Taranga) ಚಿತ್ರ ನಿರ್ದೇಶಿಸಿದಾಗಲೂ ಇದೇ ರೀತಿ ಹವಾ ಸೃಷ್ಟಿ ಆಗಿತ್ತು. ‘ಬಾಹುಬಲಿ’ ಸಿನಿಮಾದ ಎದುರು ರಿಲೀಸ್ ಆದ ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸತತ ಒಂದು ವರ್ಷ ಪ್ರದರ್ಶನ ಕಂಡು ನಿರ್ಮಾಪಕರಿಗೆ ಲಾಭ ಮಾಡಿಕೊಟ್ಟಿತ್ತು. ಈಗ ಅದೇ ಸಿನಿಮಾ ಬಾಲಿವುಡ್ಗೆ ರಿಮೇಕ್ (Remake) ಆಗಲಿದೆ.
ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ‘ರಂಗಿತರಂಗ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಬಗ್ಗೆ ಅನೇಕ ದಿನಗಳಿಂದಲೂ ಗುಸುಗುಸು ಕೇಳಿಬರುತ್ತಿತ್ತು. ಈಗ ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಸೇರಿಕೊಂಡಿದೆ. ಬಾಲಿವುಡ್ನ ಸ್ಟಾರ್ ನಟರೊಬ್ಬರು ಹಿಂದಿ ರಿಮೇಕ್ನಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ‘ರಂಗಿತರಂಗ’ ಚಿತ್ರವನ್ನು ರಿಮೇಕ್ ಮಾಡಲು ಮುಂದೆ ಬಂದಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
‘ರಂಗಿತರಂಗ’ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. ರಾಧಿಕಾ ನಾರಾಯಣ್ ಹಾಗೂ ಆವಂತಿಕಾ ಶೆಟ್ಟಿ ನಾಯಕಿಯರಾಗಿದ್ದರು. ನಿರ್ದೇಶನದ ಜೊತೆ ಹಾಡುಗಳಿಗೆ ಸಂಗೀತ ಸಂಯೋಜನೆಯನ್ನೂ ಅನೂಪ್ ಭಂಡಾರಿ ಮಾಡಿದ್ದರು. ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತದಲ್ಲಿ ಚಿತ್ರದ ರೋಚಕತೆ ಹೆಚ್ಚಿತ್ತು. ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣ ಕೂಡ ಹೈಲೈಟ್ ಆಗಿತ್ತು.
‘ರಂಗಿತರಂಗ’ ಚಿತ್ರಕ್ಕೆ ಕೆಲಸ ಮಾಡಿದ್ದ ಅನೂಪ್ ಭಂಡಾರಿ, ಅಜನೀಶ್ ಲೋಕನಾಥ್, ವಿಲಿಯಮ್ ಡೇವಿಡ್ ಅವರು ಈಗ ‘ವಿಕ್ರಾಂತ್ ರೋಣ’ ಚಿತ್ರದಲ್ಲೂ ಒಂದಾಗಿರುವುದು ವಿಶೇಷ. ತಾಂತ್ರಿಕವಾಗಿ ಅದ್ದೂರಿತನದಿಂದ ಕೂಡಿರುವ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇದೆ. ಜುಲೈ 28ರಂದು ‘ವಿಕ್ರಾಂತ್ ರೋಣ’ ರಿಲೀಸ್ ಆಗಲಿದೆ.
ಇದನ್ನೂ ಓದಿ: ಹಿಂದಿಗೆ ಡಬ್, ಮರಾಠಿಗೆ ರಿಮೇಕ್ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Jersey Movie: ರಿಮೇಕ್ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?