ರವಿ ಬಸ್ರೂರು ಮಾತ್ರವಲ್ಲ: ಟಾಕ್ಸಿಕ್ ಚಿತ್ರಕ್ಕೆ 5 ಸಂಗೀತ ನಿರ್ದೇಶಕರು; ಜೀ ಮ್ಯೂಸಿಕ್ ತೆಕ್ಕೆಗೆ ಆಡಿಯೋ ಹಕ್ಕು

ಟೀಸರ್ ಮೂಲಕ ಸಖತ್ ಸದ್ದು ಮಾಡಿರುವ ‘ಟಾಕ್ಸಿಕ್’ ಚಿತ್ರತಂಡ ಹಾಡುಗಳಿಂದಲೂ ನಿರೀಕ್ಷೆ ಹೆಚ್ಚಿಸಲಿದೆ. ಈ ಸಿನಿಮಾಗೆ ರವಿ ಬಸ್ರೂರು ಸೇರಿ ಐವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ. ‘ಜೀ ಮ್ಯೂಸಿಕ್’ ಮೂಲಕ ಹಾಡುಗಳು ಬಿಡುಗಡೆ ಆಗಲಿದೆ. ಆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

ರವಿ ಬಸ್ರೂರು ಮಾತ್ರವಲ್ಲ: ಟಾಕ್ಸಿಕ್ ಚಿತ್ರಕ್ಕೆ 5 ಸಂಗೀತ ನಿರ್ದೇಶಕರು; ಜೀ ಮ್ಯೂಸಿಕ್ ತೆಕ್ಕೆಗೆ ಆಡಿಯೋ ಹಕ್ಕು
Toxic Move Crew

Updated on: Feb 22, 2026 | 2:44 PM

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಹಳ ದೊಡ್ಡದಾಗಿ ನಿರ್ಮಾಣ ಆಗುತ್ತಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡದಿಂದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಹಾಡುಗಳ ಬಿಡುಗಡೆ ಆಗಲಿವೆ. ಪ್ರತಿಷ್ಠಿತ ‘ಜೀ ಮ್ಯೂಸಿಕ್’ (Zee Music) ಕಂಪನಿಯು ಈ ಸಿನಿಮಾದ ಆಡಿಯೋ ರೈಟ್ಸ್ ಪಡೆದುಕೊಂಡಿದೆ. ಅಂದಹಾಗೆ, ‘ಟಾಕ್ಸಿಕ್’ ಸಿನಿಮಾಗಾಗಿ ರವಿ ಬಸ್ರೂರು (Ravi Basrur) ಸೇರಿದಂತೆ ಒಟ್ಟು 5 ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ! ಆ ಕಾರಣದಿಂದ ಯಶ್ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

‘ಟಾಕ್ಸಿಕ್’ ಸಿನಿಮಾದ ಆಲ್ಬಂ ಯಾವ ರೀತಿ ಇರಲಿದೆ ಎಂಬ ಮಾಹಿತಿ ಸಿಕ್ಕಿದೆ. ಸಿನಿಮಾದ ಮೆರುಗು ಹೆಚ್ಚಿಸಲು ಐವರು ಪ್ರತಿಭಾವಂತ ಸಂಗೀತ ನಿರ್ದೇಶಕರ ಸಮಾಗಮ ಆಗಿದೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳು ಇರಲಿವೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತದ ಜತೆಗೆ ಕೇವಲ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ, ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ಈ ಎಲ್ಲ ಪ್ರತಿಭಾವಂತರ ಸಂಗಮ ಆಗಿರುವುದರಿಂದ ‘ಟಾಕ್ಸಿಕ್’ ಸಿನಿಮಾದ ಹಾಡುಗಳ ಮೇಲೆ ಹೈಪ್ ಹೆಚ್ಚಾಗಿದೆ.

ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡಿದ್ದು, ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ಗಳು ಧೂಳೆಬ್ಬಿಸಿವೆ. ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: 2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ರವಿ ಬಸ್ರೂರು: ತೆಲುಗು ವೇದಿಕೆಯಲ್ಲಿ ಎಮೋಷನಲ್ ಮಾತು

‘ಟಾಕ್ಸಿಕ್’ ಸಿನಿಮಾದ ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ವರ್ಷನ್​ಗಳ ಆಡಿಯೋ ಹಕ್ಕುಗಳನ್ನು ‘ಜೀ ಮ್ಯೂಸಿಕ್’ ಕಂಪನಿ ಪಡೆದುಕೊಂಡಿದೆ. ಈ ಬಗ್ಗೆ ಕಂಪನಿಯ ಸುಜಲ್ ಪರೇಕ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಇದು ಕೆವಿನ್ ಮತ್ತು ಜೀ ಮ್ಯೂಸಿಕ್ ನಡುವಿನ ದೀರ್ಘಾವಧಿ ಸಂಬಂಧದ ಆರಂಭ’ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:06 pm, Sun, 22 February 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us