ಬ್ರಹ್ಮಕಲಶ: 1 ಮಿಲಿಯನ್ ಇನ್‌ಸ್ಟಾಗ್ರಾಮ್ ರೀಲ್ಸ್ ಮೈಲಿಗಲ್ಲು ತಲುಪಿದ ಮೊದಲ ಕನ್ನಡ ಹಾಡು
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಾಡುಗಳು ಮಾಡಿದ ದಾಖಲೆ ಸಣ್ಣದಲ್ಲ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಈಗಲೂ ಸದ್ದು ಮಾಡುತ್ತಿವೆ. ಇನ್‌ಸ್ಟಾಗ್ರಾಮ್ ರೀಲ್ಸ್ನಲ್ಲಿ ಈಗಲೂ ‘ಬ್ರಹ್ಮಕಲಶ’ ಹಾಡು ಟ್ರೆಂಡಿಂಗ್ನಲ್ಲಿದೆ. 10 ಲಕ್ಷಕ್ಕೂ ಅಧಿಕ ರೀಲ್ಸ್ ಮೂಲಕ ಈ ಹಾಡು ದಾಖಲೆ ಬರೆದಿದೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಈವರೆಗಿನ ವೃತ್ತಿಜೀವನದಲ್ಲೇ ಅತಿ ದೊಡ್ಡ ಸಕ್ಸಸ್ ಎನಿಸಿಕೊಂಡ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಅಪರೂಪದ ಸಾಧನೆಯನ್ನು ಈ ಸಿನಿಮಾ ಮಾಡಿದೆ. ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆಯುತ್ತಿದ್ದರೂ ಇದರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ ಎಂಬುದಕ್ಕೆ ಈ ಹೊಸ ದಾಖಲೆಯೇ ಸಾಕ್ಷಿ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಸಂಯೋಜನೆಯ, ಚಿತ್ರದ ಅತ್ಯಂತ ಜನಪ್ರಿಯ ಭಕ್ತಿಗೀತೆ ‘ಬ್ರಹ್ಮಕಲಶ’ (Brahmakalasha) ಈಗ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ (10 ಲಕ್ಷಕ್ಕೂ ಹೆಚ್ಚು) ರೀಲ್ಸ್ ದಾಟಿದ ಮೊದಲ ಕನ್ನಡ ಚಲನಚಿತ್ರ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಬ್ರಹ್ಮಕಲಶ’ ಹವಾ:
ಚಿತ್ರದ ಬಿಡುಗಡೆಯ ದಿನದಿಂದಲೇ ‘ಬ್ರಹ್ಮಕಲಶ’ ಹಾಡು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಅವರ ನಟನೆ, ಅಜನೀಶ್ ಸಂಗೀತ, ಅಭಿ ವಿ. ಗಾಯನದಿಂದ ಈ ಹಾಡು ಪ್ರತಿಯೊಬ್ಬರನ್ನು ರೋಮಾಂಚನಗೊಳಿಸಿತ್ತು. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.
View this post on Instagram
‘ಬ್ರಹ್ಮಕಲಶ’ ಟ್ರ್ಯಾಕ್ ಬಳಸಿ ಈಗಲೂ ಹಲವಾರು ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನದ್ದೇ ಕಾರುಬಾರು ಜೋರಾಗಿದ್ದು, ಸದ್ಯದಲ್ಲೇ ಈ ದಾಖಲೆಯನ್ನು ಮುರಿಯುವುದು ಬೇರೆ ಯಾವುದೇ ಚಿತ್ರಕ್ಕೂ ಸುಲಭವಲ್ಲ ಎನ್ನಲಾಗುತ್ತಿದೆ. ಚಿತ್ರದಲ್ಲಿ ಕರಾವಳಿಯ ಸಂಸ್ಕೃತಿ ಮತ್ತು ದೈವಾರಾಧನೆಯ ಹಿನ್ನೆಲೆಯನ್ನು ಆಳವಾಗಿ ತೋರಿಸಲಾಗಿದೆ.
ಇದನ್ನೂ ಓದಿ: ಬಿಗ್ ಅಪ್ಡೇಟ್; ಕಾಂತಾರ: ಚಾಪ್ಟರ್ 2 ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ
ಚಿತ್ರದ ಭರ್ಜರಿ ಯಶಸ್ಸು ಮತ್ತು ಮ್ಯೂಸಿಕ್ ಹಿಟ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಡಿವೋಶನಲ್ ಚಿತ್ರವು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ಪ್ರಾಜೆಕ್ಟ್ ಆಗಿದೆ. ಕಥೆ, ಮೇಕಿಂಗ್, ವಿಶುವಲ್ಸ್ ಮಾತ್ರವಲ್ಲದೆ ಸಿನಿಮಾದ ಪ್ರತಿಯೊಂದು ಹಾಡುಗಳು ಮತ್ತು ಹಿನ್ನೆಲೆ ಸಂಗೀತವು ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಾಂತಾರ ಮೊದಲ ಭಾಗದ ‘ಸಿಂಗಾರ ಸಿರಿಯೇ’ ಹಾಡು ಹೇಗೆ ಮನೆಮಾತಾಗಿತ್ತೋ, ಅದೇ ರೀತಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




