ಪರಭಾಷೆಗೆ ಹೊರಟಿದ್ದಾರೆ ಚೈತ್ರಾ ಆಚಾರ್, ಮಾಡಿಕೊಳ್ಳುತ್ತಿದ್ದಾರೆ ತಯಾರಿ
Chaithra J Achar: ನಟಿ ಚೈತ್ರಾ ಜೆ ಆಚಾರ್ ಕನ್ನಡದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾ ಬಳಿಕ ಈಗ ಪರಭಾಷೆಯಿಂದಲೂ ಆಫರ್ಗಳು ಬರುತ್ತಿವೆ.
ನಟಿ ಚೈತ್ರಾ ಜೆ ಆಚಾರ್ (Chaithra Achar), ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಅವರ ಪ್ರತಿಭೆಯನ್ನು ನೆಚ್ಚಿ ಹಲವು ಸಿನಿಮಾ ಅವಕಾಶಗಳು ಅವರನ್ನರಿಸಿ ಬರುತ್ತಿವೆ. ಕನ್ನಡದ ಹಲವು ಸಿನಿಮಾಗಳಲ್ಲಿ ಚೈತ್ರಾ ಆಚಾರ್ ಬ್ಯುಸಿಯಾಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕವಂತೂ ಚೈತ್ರಾ ಆಚಾರ್ಗೆ ಪರಭಾಷೆಗಳಿಂದಲೂ ಅವಕಾಶಗಳು ಬರಲು ಆರಂಭವಾಗಿವೆ. ಚೈತ್ರಾ ಆಚಾರ್ ಪರಭಾಷೆ ಸಿನಿಮಾನಲ್ಲಿ ನಟಿಸುವುದು ಖಾತ್ರಿಯಾಗಿದ್ದು, ಅದಕ್ಕಾಗಿ ತಯಾರಿಯನ್ನು ಸಹ ನಟಿ ಆರಂಭಿಸಿದ್ದಾರೆ.
ಚೈತ್ರಾ ಆಚಾರ್ ನಟಿಸಿರುವ ‘ಬ್ಲಿಂಕ್’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚೈತ್ರಾ ಆಚಾರ್ ತೊಡಗಿಸಿಕೊಂಡಿದ್ದಾರೆ. ‘ಬ್ಲಿಂಕ್’ ಸಿನಿಮಾದ ಕಂಟೆಂಟ್ ಬಗ್ಗೆ ಚೈತ್ರಾಗೆ ಭರವಸೆ ಇದೆ. ‘ಬ್ಲಿಂಕ್’ ಮಾತ್ರವೇ ಅಲ್ಲದೆ ಚೈತ್ರಾ ಆಚಾರ್ ನಟಿಸಿರುವ ‘ಸ್ಟ್ರಾಬೆರ್ರಿ’, ‘ಹ್ಯಾಪಿ ಬರ್ತ್ ಡೇ ಟು ಮೀ’ ಸಿನಿಮಾಗಳ ಚಿತ್ರೀಕರಣವು ಸಹ ಮುಗಿದಿದ್ದು ಸಿನಿಮಾ ಬಿಡುಗಡೆಗೆ ರೆಡಿಯಾಗಿವೆ. ಇದರ ನಡುವೆ ಚೈತ್ರಾಗೆ ಪರಭಾಷೆಗಳಿಂದ ಕೆಲವು ಒಳ್ಳೆಯ ಆಫರ್ಗಳು ಬಂದಿವೆ.
ಇದನ್ನೂ ಓದಿ:ಪ್ರೀತಿ ಬಗ್ಗೆ ಚೈತ್ರಾ ಆಚಾರ್ ಮಾತು, ನಟಿಯ ಫಸ್ಟ್ ಕ್ರಶ್ ಯಾರು ಗೊತ್ತೆ?
ಈ ವಿಷಯವನ್ನು ಸ್ವತಃ ಚೈತ್ರಾ ಆಚಾರ್ ಹೇಳಿಕೊಂಡಿದ್ದಾರೆ. ‘ಪರಭಾಷೆಗಳ ಸಿನಿಮಾ ಆಫರ್ ಬಂದಿವೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಯಾವುದೇ ಸಿನಿಮಾದಲ್ಲಿ ನಟಿಸಲು ಭಾಷೆ ಬರುವುದು ಬಹಳ ಮುಖ್ಯ. ನನಗೆ ಈಗಾಗಲೇ ತೆಲುಗು ಹಾಗೂ ತಮಿಳು ಭಾಷೆ ಬರುತ್ತದೆ. ಮಲಯಾಳಂ ಅರ್ಥವಾಗುತ್ತದೆ ಆದರೆ ಮಾತನಾಡಲು ಬರುವುದಿಲ್ಲ. ಹಾಗಾಗಿ ಅದನ್ನು ಕಲಿಯುತ್ತಿದ್ದೇನೆ. ಆದಷ್ಟು ಬೇಗ ನೀವು ನನ್ನನ್ನು ಪರಭಾಷೆ ಸಿನಿಮಾಗಳಲ್ಲಿಯೂ ನೋಡಬಹುದು’ ಎಂದಿದ್ದಾರೆ ಚೈತ್ರಾ ಆಚಾರ್.
ಚೈತ್ರಾ ಆಚಾರ್ 2019ರಲ್ಲಿ ‘ಮಿಹಿರ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸಹ ನಟಿಸಿದ್ದರು. 2023ರಲ್ಲಿ ಬಿಡುಗಡೆ ಆದ ‘ಟೋಬಿ’ ಸಿನಿಮಾ ಚೈತ್ರಾಗೆ ಹೆಚ್ಚಿನ ಗುರುತು ತಂದುಕೊಟ್ಟಿತು. ಬಳಿಕ ಬಿಡುಗಡೆ ಆದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ನಲ್ಲಿ ಚೈತ್ರಾ ಅದ್ಭುತ ನಟನೆಯಿಂದ ಹಲವು ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ‘ಬ್ಲಿಂಕ್’, ‘ಹ್ಯಾಪಿ ಬರ್ತ್ ಡೇ ಟು ಮೀ’, ‘ಸ್ಟ್ರಾ ಬೆರ್ರಿ’ ಸಿನಿಮಾಗಳಲ್ಲಿ ಚೈತ್ರಾ ನಟಿಸಿದ್ದಾರೆ. ಉತ್ತಮ ಗಾಯಕಿಯೂ ಆಗಿರುವ ಚೈತ್ರಾ ಆಚಾರ್, ‘ಗರುಡಗಮನ ವೃಷಭ ವಾಹನ’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಮಾಯಾಬಜಾರ್’, ಇನ್ನೂ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ