‘ವಿಕ್ರಾಂತ್ ರೋಣ’ ಚಿತ್ರ ನೋಡುವಾಗ ಕಿರಿಕ್; ಥಿಯೇಟರ್ನಲ್ಲೇ ಝಳಪಿಸಿದ ಮಚ್ಚು, ಲಾಂಗ್
ಎಲ್ಲ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಗುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಸಿನಿಮಾ ಪ್ರದರ್ಶನದ ವೇಳೆಯೆ ಮಾರಾಮಾರಿ ಆಗಿದೆ.
‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಇಂದು (ಜುಲೈ 28) ವಿಶ್ವಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಎಲ್ಲ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಗುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ (Chikkamagaluru) ಸಿನಿಮಾ ಪ್ರದರ್ಶನದ ವೇಳೆಯೆ ಮಾರಾಮಾರಿ ಆಗಿದೆ. ಎರಡು ಗುಂಪುಗಳು ಮಚ್ಚುಗಳಿಂದ ಹೊಡೆದಾಡಿಕೊಂಡಿವೆ. ಇದರಿಂದ ಉಳಿದ ಪ್ರೇಕ್ಷಕರಿಗೆ ತೊಂದರೆ ಆಗಿದೆ.
ಚಿಕ್ಕಮಗಳೂರು ನಗರದ ಮಿಲನ ಥಿಯೇಟರ್ನಲ್ಲಿ ಈ ಘಟನೆ ನಡೆದಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ವ್ಯಕ್ತಿಯೋರ್ವ ಪದೇಪದೇ ಹೊರಗೆ ಹೋಗುವುದು, ಒಳಗೆ ಬರುವುದು ಮಾಡುತ್ತಿದ್ದ. ಇದರಿಂದ ಚಿತ್ರಮಂದಿರದ ಪರದೆಗೆ ಪದೇಪದೇ ಬೆಳಕು ಬೀಳುತ್ತಿತ್ತು. ಇದು ಆ ವ್ಯಕ್ತಿಯ ಹಿಂದಿನ ಸಾಲಿನಲ್ಲಿ ಕುಳಿತವರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಇಬ್ಬರ ನಡುವೆ ಕಿರಿಕ್ ಆಗಿದೆ.
ನಂತರ ಎರಡೂ ಗುಂಪಿನವರು ಸಿನಿಮಾ ಥಿಯೇಟರ್ನ ಆವರಣದಲ್ಲಿ ಮಚ್ಚು-ಲಾಂಗ್ನಿಂದ ಹೊಡೆದಾಡಿಕೊಂಡಿದ್ದಾರೆ. ಭರತ್ ಎಂಬುವವರಿಗೆ ಗಂಭೀರ ಗಾಯ ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಕ್ಕೆ ಬಿದ್ದರೂ ಯುವಕರು ಭರತ್ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಭರತ್ ಅವರನ್ನು ಹಾಸನಕ್ಕೆ ಕಳುಹಿಸಲಾಗಿದೆ. ಹಲ್ಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗುಂಪನ್ನು ಚದುರಿಸಿದ್ದಾರೆ. ನಂತರ ಪರಿಸ್ಥಿತಿ ತಿಳಿಯಾಗಿದೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರ ಆನ್ಲೈನ್ನಲ್ಲಿ ಸೋರಿಕೆ; ಸುದೀಪ್ ಹೇಳಿದ ಮಾತು ನೆನಪಿಸಿಕೊಂಡ ಫ್ಯಾನ್ಸ್
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ಅವರ ನಿರ್ದೇಶನ ಇದೆ. ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮೊದಲ ದಿನ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಾಗಿ, ಸಿನಿಮಾ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಇದೆ. ಇದಕ್ಕೆ, ಜುಲೈ 29ರಂದು ಉತ್ತರ ಸಿಗಲಿದೆ.
Published On - 4:52 pm, Thu, 28 July 22