‘ಕಾಂತಾರ’ ಹಾಡಿನ ಟ್ಯೂನ್ ಕದ್ದಿದ್ದು ಎಂದವರಿಗೆ ಉತ್ತರ ಕೊಟ್ಟ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
‘ಕಾಂತಾರ’ ಸಿನಿಮಾದಲ್ಲಿ ಬರುವ ‘ವರಾಹ ರೂಪಂ..’ ಹಾಡಿನ ಟ್ಯೂನ್ ಬೇರೆ ಹಾಡಿನಿಂದ ಕದಿಯಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅಜನೀಶ್ ಅವರು ಉತ್ತರ ನೀಡಿದ್ದಾರೆ.
ಅಜನೀಶ್ ಲೋಕನಾಥ್ (Ajaneesh Loknath) ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಸಂಗೀತ ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅಜನೀಶ್ ಲೋಕನಾಥ್ ಅವರ ಖ್ಯಾತಿ ದುಪ್ಪಟ್ಟಾಗಿದೆ. ಈ ಸಿನಿಮಾದಲ್ಲಿ ಬರುವ ‘ವರಾಹ ರೂಪಂ..’ (Varaha Roopam) ಹಾಡಿನ ಟ್ಯೂನ್ ಮಲಯಾಳಂ ವೆಬ್ ಸೀರಿಸ್ನಿಂದ ಕದಿಯಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅಜನೀಶ್ ಅವರು ಉತ್ತರ ನೀಡಿದ್ದಾರೆ.
‘ಕಂಪೋಸಿಷನ್ ವಿಚಾರದಲ್ಲಿ ವರಾಹ ರೂಪಂ ಹಾಡು ಬೇರೆ, ಜನರು ಹೇಳುತ್ತಿರುವ ಹಾಡು ಬೇರೆ. ಮೂಲ ಹಾಡಿನಲ್ಲಿರುವ ರಾಕ್ ಶೈಲಿ ನಮಗೆ ಸ್ಫೂರ್ತಿ ಮಾಡಿತು ಅಷ್ಟೇ. ನನ್ನ ಕಂಪೋಸಿಷನ್ ಬೇರೆಯದೇ ರೀತಿಯಲ್ಲಿದೆ. ನಮ್ಮ ಹಾಡಿನ ರಾಗಗಳು ಬೇರೆ. ತೋಡಿ, ವರಾಳಿ, ಮುಖಾರಿ ರಾಗ ಆಯ್ಕೆ ಮಾಡಿಕೊಂಡಿದ್ದೇನೆ. ಇದನ್ನು ಹಾಡಿದಾಗ ಒಂದೇ ರೀತಿ ಕೇಳುತ್ತದೆ. ಸಂಗೀತ ಬಲ್ಲವರಿಗೆ ಇದನ್ನು ಕೇಳಿದರೆ ಆ ಹಾಡೇ ಬೇರೆ ಈ ಹಾಡೇ ಬೇರೆ ಎಂದು ಹೇಳುತ್ತಾರೆ’ ಎಂಬುದಾಗಿ ಅವರು ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.
ತೆಲುಗು ಸ್ಟಾರ್ ನಟನ ಸಿನಿಮಾಗೆ ಅಜನೀಶ್ ಸಂಗೀತ ಸಂಯೋಜನೆ
ಅಜನೀಶ್ ಅವರಿಗೆ ಟಾಲಿವುಡ್ನಿಂದಲೂ ಆಫರ್ ಬರುತ್ತಿದೆ. ಸಾಯಿ ಧರಮ್ ತೇಜ್ ಅವರ 15ನೇ ಚಿತ್ರಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ವಿಚಾರವನ್ನು ತಂಡ ಖುಷಿಯಿಂದ ಇಂದು (ಅಕ್ಟೋಬರ್ 12 ) ಅನೌನ್ಸ್ ಮಾಡಿದೆ. ಅಜನೀಶ್ ಲೋಕನಾಥ್ ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಮೊದಲು ಸಂಗೀತ ಸಂಯೋಜನೆ ಮಾಡಿದ ಸಿನಿಮಾ ‘ಶಿಶಿರ’. ಆ ಬಳಿಕ ಹಲವು ಆಫರ್ಗಳು ಅವರನ್ನು ಅರಸಿ ಬಂದವು. 2014ರಲ್ಲಿ ರಿಲೀಸ್ ಆದ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಅಜನೀಶ್ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. 2015ರ ಸೂಪರ್ ಹಿಟ್ ಚಿತ್ರ ‘ರಂಗಿ ತರಂಗ’ ಚಿತ್ರಕ್ಕೆ ಅಜನೀಶ್ ಅವರು ಹಿನ್ನೆಲೆ ಸಂಗೀತ ನೀಡಿದ್ದರು. ‘ಕಿರಿಕ್ ಪಾರ್ಟಿ’, ‘ಬೆಲ್ ಬಾಟಂ’ ಸೇರಿ ಅನೇಕ ಚಿತ್ರಗಳು ಅಜನೀಶ್ ಅವರ ಬತ್ತಳಿಕೆಯಿಂದ ಮೂಡಿ ಬಂದಿದೆ.
Delighted to welcome Musical wizard ? @AJANEESHB on board for #SDT15 @IamSaiDharamTej @Iamsamyuktha_ @karthikdandu86 @bkrsatish @BvsnP @aryasukku @SVCCofficial @SukumarWritings pic.twitter.com/2pwL9SQbN6
— SVCC (@SVCCofficial) October 12, 2022
2022 ಅಜನೀಶ್ ಪಾಲಿಗೆ ತುಂಬಾನೇ ವಿಶೇಷವಾಗಿದೆ. ‘ವಿಕ್ರಾಂತ್ ರೋಣ’, ‘ಕಾಂತಾರ’ ಚಿತ್ರಗಳು ಹಿಟ್ ಆಗಿವೆ. ಇವೆರಡೂ ಚಿತ್ರಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರ ಕೈಯಲ್ಲಿ, ಉಪೇಂದ್ರ ನಟನೆಯ ‘ಯುಐ’ ಸೇರಿ 10ಕ್ಕೂ ಅಧಿಕ ಸಿನಿಮಾಗಳು ಇವೆ.
Published On - 5:45 pm, Wed, 12 October 22