O Manase: ‘ಓ ಮನಸೇ’ ಚಿತ್ರದ ಆಡಿಯೋ ರಿಲೀಸ್; ವಿಜಯ್ ರಾಘವೇಂದ್ರ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ
Vijay Raghavendra | O Manase Movie: ವಿಜಯ್ ರಾಘವೇಂದ್ರ ಅವರು ‘ಓ ಮನಸೇ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಟ್ರೇಲರ್ ಬಳಿಕ ಈಗ ಈ ಚಿತ್ರದ ಹಾಡುಗಳು ಗಮನ ಸೆಳೆಯುತ್ತಿವೆ.
ವಿಜಯ ರಾಘವೇಂದ್ರ (Vijay Raghavendra), ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಅವರು ನಟಿಸಿರುವ ‘ಓ ಮನಸೇ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ‘A2 ಮ್ಯೂಸಿಕ್’ ಮೂಲಕ ಹೊರಬಂದಿರುವ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಮುಂತಾದವರು ಅಥಿತಿಗಳಾಗಿ ಆಗಮಿಸಿದ್ದರು. ಕವಿರಾಜ್, ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. 2 ಗೀತೆಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಓ ಮನಸೇ’ (O Manase Movie) ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ.
‘ಶ್ರೀ ಫ್ರೆಂಡ್ಸ್ ಮೂವೀ ಮೇಕರ್ಸ್’ ಬ್ಯಾನರ್ ಮೂಲಕ ಎಂ.ಎನ್. ಭೈರೆಗೌಡ, ಕೆ.ಹೆಚ್. ಧನಂಜಯ, ಕೆ. ವೆಂಕಟೇಶ್, ಸು.ಕಾ. ರಾಮು, ಯುವರಾಜ್ ಕೆ.ಎ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ಗೆ ಜನಮೆಚ್ಚುಗೆ ಸಿಕ್ಕಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ. ಹಾಡುಗಳು ಕೂಡ ಈಗ ಗಮನ ಸೆಳೆಯುತ್ತಿವೆ.
ಇದನ್ನೂ ಓದಿ: ‘ಸರ್ಕಾರದ ನಿರ್ಧಾರಗಳ ಹಿಂದೆ ಒಂದು ಅರ್ಥ ಇರುತ್ತದೆ’; ವಿಜಯ್ ರಾಘವೇಂದ್ರ
ಉಮೇಶ್ ಗೌಡ ಅವರು ‘ಓ ಮನಸೇ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಇದೆ. ನೈಜ ಘಟನೆ ಆಧರಿಸಿ ಈ ಚಿತ್ರ ಮೂಡಿಬಂದಿದೆ ಎಂಬುದು ವಿಶೇಷ. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ತುಂಬ ಖುಷಿ ಇದೆ ಎಂದಿದ್ದಾರೆ ನಾಯಕಿ ಸಂಚಿತಾ ಪಡುಕೋಣೆ. ನಟ ಧರ್ಮ ಕೀರ್ತಿರಾಜ್ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೊರೊನಾ ಸಮಯದಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಇದನ್ನು ನನ್ನ ಕಮ್ ಬ್ಯಾಕ್ ಚಿತ್ರ ಎನ್ನಬಹುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಶ್ವಿನಿ, ತಾರಾ ಅನುರಾಧಾ, ವಿಜಯ್ ಕಿರಗಂದೂರು ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ವಿಶೇಷ ಪ್ರಶಸ್ತಿ
ವಿಜಯ್ ರಾಘವೇಂದ್ರ ಅವರು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ‘ಸಿನಿಮಾ ಪ್ರಚಾರದಲ್ಲಿ ಆಡಿಯೋ ಬಿಡುಗಡೆ ಎಂಬುದು ಬಹಳ ಮುಖ್ಯವಾದ ಹಂತ. ಸಿನಿಮಾ ಮಾಡೋದು ಮುಖ್ಯವಲ್ಲ, ಅದನ್ನು ಜನರಿಗೆ ತಲುಪಿಸುವುದು ಮುಖ್ಯ. ನಿರ್ಮಾಪಕರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಕಾಮಿಡಿ, ಆ್ಯಕ್ಷನ್, ಲವ್ ಮುಂತಾದ ಎಲ್ಲಾ ಅಂಶಗಳು ಇವೆ. ಹಾಗಾಗಿ ನನಗೆ ಈ ಸಿನಿಮಾ ಸ್ಪೆಷಲ್’ ಎಂದಿದ್ದಾರೆ ವಿಜಯ್ ರಾಘವೇಂದ್ರ.
ಇದನ್ನೂ ಓದಿ: ‘ಗಂಧದ ಗುಡಿ’ ಬಗ್ಗೆ ಪುನೀತ್ ಏನು ಹೇಳಿದ್ದರು? ವಿಜಯ್ ರಾಘವೇಂದ್ರ ವಿವರಿಸಿದ್ದು ಹೀಗೆ
ಬಂಡೆ ಚಂದ್ರು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಎಂ.ಆರ್. ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ ಹಾಗೂ ಧನಂಜಯ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.