ನಟ ಕಿಚ್ಚ ಸುದೀಪ್ ಅವರು ಸದ್ಯ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಆ ಸಲುವಾಗಿ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಹತ್ತು-ಹಲವು ವಿಚಾರಗಳ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ನಡುವೆ ಟ್ವಿಟರ್ ಸಮರ ಏರ್ಪಟ್ಟಿತ್ತು. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್ ನೀಡಿದ್ದ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಜಯ್ ದೇವಗನ್ ಅವರು ವಿವಾದ ಹುಟ್ಟುಹಾಕಿದ್ದರು. ಆ ವಿಚಾರದ ಬಗ್ಗೆ ಸುದೀಪ್ (Kichcha Sudeep) ಈಗ ಮತ್ತೆ ಮಾತನಾಡಿದ್ದಾರೆ. ಈ ವಿವಾದ ಶುರುವಾಗಲು ಮೂರನೇ ವ್ಯಕ್ತಿ ಕಾರಣ ಎಂದು ಅವರು ಹೇಳಿದ್ದಾರೆ. ‘ಹಿಂದುಸ್ತಾನ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ರಾಷ್ಟ್ರ ಭಾಷೆಯ ಕುರಿತಾದ ಚರ್ಚೆಯಲ್ಲಿ ಅಜಯ್ ದೇವಗನ್ ಮತ್ತು ಸುದೀಪ್ ನಡುವೆ ಟ್ವಿಟರ್ನಲ್ಲಿ ಜಟಾಪಟಿ ನಡೆಯಿತು. ಆರಂಭದಲ್ಲಿ ಇಬ್ಬರೂ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದರು. ಆದರೆ ಅಜಯ್ ದೇವಗನ್ ಏಕಾಏಕಿ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ದಕ್ಷಿಣ ಭಾರತದವರನ್ನು ಕೆಣಕಿದರು. ಈ ಕುರಿತು ಸುದೀಪ್ ಮಾತನಾಡಿದ್ದಾರೆ. ‘ಅಜಯ್ ದೇವಗನ್ ಆ ರೀತಿ ಮಾಡುವವರಲ್ಲ ಎಂಬುದು ನನಗೆ ಖಚಿತವಾಗಿ ತಿಳಿದಿದೆ. ಅವರು ಹಾಗೆ ಹಿಂದಿಯಲ್ಲಿ ಟ್ವೀಟ್ ಮಾಡುವಂತೆ ಐಡಿಯಾ ನೀಡಿದ ಮೂರನೇ ವ್ಯಕ್ತಿ ಯಾರೋ ಇದ್ದಾರೆ. ಅದು ಯಾರು ಅಂತ ತಿಳಿಯಲು ಕೂಡ ನಾನು ಇಷ್ಟಪಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ದಕ್ಷಿಣ ಭಾರತದವರಾದ ನಾವೆಲ್ಲರೂ ಶಾಲೆಗೆ ಹೋಗಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಯುವುದಕ್ಕಿಂತ ಮುನ್ನವೇ ಹಿಂದಿ ಸಿನಿಮಾಗಳನ್ನು ನೋಡಿ ಆ ಭಾಷೆ ಕಲಿತೆವು. ಕಿಶೋರ್ ಕುಮಾರ್ ಮತ್ತು ಅಮಿತಾಭ್ ಬಚ್ಚನ್ ಅವರೇ ನಮಗೆ ಶಿಕ್ಷಕರು. ಅವರಿಂದಾಗಿಯೇ ನಾವು ಹಿಂದಿ ಕಲಿತಿದ್ದು’ ಎಂದು ಸುದೀಪ್ ಹೇಳಿದ್ದಾರೆ.
ಸುದೀಪ್ ಅವರ ಗಮನವೆಲ್ಲ ಈಗ ‘ವಿಕ್ರಾಂತ್ ರೋಣ’ ಸಿನಿಮಾದ ಮೇಲಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಸೂಪರ್ ಹಿಟ್ ಆಗಿವೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.