‘ಎಸ್​ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು’: ಯಶ್

ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರು ಇತ್ತೀಚೆಗೆ ನಿಧನರಾಗಿದ್ದು ನೋವಿನ ಸಂಗತಿ. ಅವರು ಕೊನೆಯುಸಿರು ಎಳೆದಾಗ ನಟ ಯಶ್ ಅವರು ಬೆಂಗಳೂರಿನಲ್ಲಿ ಇರಲಿಲ್ಲ. ಈಗ ಅವರು ಬೆಂಗಳೂರಿಗೆ ಬಂದಿದ್ದು, ಎಸ್​ಎಂ ಕೃಷ್ಣ ಕುಟುಂಬವನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯಶ್​ ಅವರು ಎಸ್​ಎಂ ಕೃಷ್ಣ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.

‘ಎಸ್​ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು’: ಯಶ್
Yash

Updated on: Dec 23, 2024 | 7:25 PM

‘ರಾಕಿಂಗ್ ಸ್ಟಾರ್​’ ಯಶ್​ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಇಂದು (ಡಿಸೆಂಬರ್​ 23) ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರೋ ನಿವಾಸಕ್ಕೆ ಬಂದ ಯಶ್​ ಮತ್ತು ರಾಧಿಕಾ ಅವರು ಕೃಷ್ಣ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಎಸ್​ಎಂ ಕೃಷ್ಣ ನಿಧನರಾಗಿದ್ದು ಡಿಸೆಂಬರ್​ 10ರಂದು. ಆ ದಿನ ಯಶ್ ಅವರು ಬೆಂಗಳೂರಿನಲ್ಲಿ ಇರಲಿಲ್ಲ. ಶೂಟಿಂಗ್ ಸಲುವಾಗಿ ಮುಂಬೈನಲ್ಲಿ ಇದ್ದರು. ಹಾಗಾಗಿ ಅಂತಿಮ ದರ್ಶನ ಪಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಇಂದು (ಡಿ.23) ಕೃಷ್ಣ ಅವರ ಭಾವಚಿತ್ರಕ್ಕೆ ಯಶ್ ನಮನ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಯಶ್ ಮಾತನಾಡಿದರು. ‘ಈ ರಾಜ್ಯದಲ್ಲಿ ಎಸ್​ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು. ಅವರ ಕೊಡುಗೆ ಅಪಾರ. ಇವತ್ತು ಬೆಂಗಳೂರು ಹಾಗೂ ಇಡೀ ರಾಜ್ಯದಲ್ಲಿ ಅವರು ಮಾಡಿರುವ ಕೆಲಸಗಳು ನಮ್ಮ ಕಣ್ಣ ಮುಂದೆ ಇವೆ. ಅವರು ಎಷ್ಟು ಅದ್ಭುತವಾದ ಬದುಕನ್ನು ಬದುಕಿದ್ದರು ಎಂಬುದು ಎಲ್ಲರಿಗೂ ಗೊತ್ತು’ ಎಂದಿದ್ದಾರೆ ಯಶ್.

ಇದನ್ನೂ ಓದಿ: ಯಶ್​ಗೆ ಬಿಗ್ ರಿಲೀಫ್; ‘ಟಾಕ್ಸಿಕ್’ ಸಿನಿಮಾ ವಿರುದ್ಧ ಎಫ್​ಐಆರ್​ಗೆ ಹೈಕೋರ್ಟ್ ತಡೆ

‘ಎಸ್​ಎಂ ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವ. ಅವರು ನಿಧನರಾದಾಗ ನಾವು ಊರಲ್ಲಿ ಇರಲಿಲ್ಲ. ಹಾಗಾಗಿ ಈಗ ಖುದ್ದಾಗಿ ಬಂದಿದ್ದೇವೆ. ಅವರ ಆಶೀರ್ವಾದ ನನ್ನ ಮೇಲೆ ಯಾವಾಗಲೂ ಇತ್ತು. ನನ್ನ ಎಲ್ಲ ಬೆಳವಣಿಗೆಯಲ್ಲಿ ಅವರ ಹಾರೈಕೆ ಇತ್ತು. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಯಶ್ ಅವರು ಹೇಳಿದ್ದಾರೆ.

‘ಎಲ್ಲರಿಗೂ ಅವರು ಸದಾ ಒಳ್ಳೆಯದನ್ನೇ ಬಯಸುತ್ತಿದ್ದರು. ಬೆಳವಣಿಗೆಯನ್ನು ಅವರು ಯಾವಾಗಲೂ ಮೆಚ್ಚಿಕೊಳ್ಳುತ್ತಿದ್ದರು. ಅವರ ಮನಸ್ಥಿತಿಯೇ ಬೆಳವಣಿಗೆಯ ಕಡೆಗೆ ಇದ್ದಿದ್ದರಿಂದ ಯಾವಾಗಲೂ ನಮ್ಮ ಬೆಳವಣಿಗೆಯನ್ನು ನೋಡಿ ಹರಸುತ್ತಿದ್ದರು. ಅವರಾಗಿರಬಹುದು, ಅಮ್ಮ ಆಗಿರಬಹುದು.. ಅವರ ಇಡೀ ಕುಟುಂಬವೇ ಹಾಗೆ. ಕೊನೆಯದಾಗಿ ನಾನು ಅವರನ್ನು ಭೇಟ ಮಾಡಿದ್ದು ತುಂಬಾ ಹಿಂದೆ. ಅವರ ಜೊತೆ ಸಮಯ ಕಳೆದಿದ್ದು ಸ್ಮರಣೀಯವಾಗಿದೆ’ ಎಂದಿದ್ದಾರೆ ಯಶ್​. ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್​ನಲ್ಲಿ ಅವರು ತೊಡಗಿಕೊಂಡಿದ್ದು, ಅದರ ನಡುವೆ ಬಿಡುವು ಮಾಡಿಕೊಂಡು ಕೃಷ್ಣ ಮನೆಗೆ ಭೇಟಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:23 pm, Mon, 23 December 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us