ಯಶ್ ತಾಯಿ ಪುಷ್ಪಾ ಸೈಟ್ ವಿವಾದ: ಇಷ್ಟು ದಿನಗಳ ಬಳಿಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಲಕ್ಷ್ಮಮ್ಮ
‘ರಾಕಿಂಗ್ ಸ್ಟಾರ್’ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಹಾಸನದಲ್ಲಿನ ನಿವೇಶನಕ್ಕೆ ಸಂಬಂಧಿಸಿದಂತೆ ಸುದ್ದಿ ಆಗುತ್ತಿದ್ದಾರೆ. ಆ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿವಾದಿತ ಸೈಟ್ನ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಈಗ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿದ್ದಾರೆ.

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರ ನಿವೇಶನದ ಗಲಾಟೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಈಗ ಒಂದು ಟ್ವಿಸ್ಟ್ ಸಿಕ್ಕಿದೆ. ಈ ನಿವೇಶನದ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಪ್ರತ್ಯಕ್ಷರಾಗಿದ್ದಾರೆ. ‘ಪುಷ್ಪ ಅರುಣ್ ಕುಮಾರ್ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ಕಟ್ಟಿಸಿದ್ದರು. ಅದನ್ನು ತೆಗೆಸಿದ್ದೇವೆ’ ಎಂದು ಲಕ್ಷ್ಮಮ್ಮ (Lakshmamma) ಅವರು ಹೇಳಿದ್ದಾರೆ. ಸದ್ಯಕ್ಕೆ ಲಕ್ಷ್ಮಮ್ಮ ಅವರು ಮೈಸೂರಿನಲ್ಲಿ ಇದ್ದಾರೆ.
‘ನನಗೆ 93 ವರ್ಷ. ನಾನು ಮೈಸೂರಿನಲ್ಲಿ ಇರುವುದು. ಹಾಸನಕ್ಕೆ ಬರುವುದು ಸ್ವಲ್ಪ ತಾಪತ್ರಯ ಆಗುತ್ತದೆ. ಅದಕ್ಕಾಗಿ ದೇವರಾಜ್ ಅವರಿಗೆ ಜಿಪಿಎ ಹೋಲ್ಡರ್ ಮಾಡಿದ್ದೇನೆ. ಪುಷ್ಪಾ ಅವರ ಜಾಗಕ್ಕೂ ನಮಗೂ ಸಂಬಂಧವೇ ಇಲ್ಲ. ಅವರದ್ದು ಆ ರಸ್ತೆಯಲ್ಲಿದೆ, ನಮ್ಮದು ಈ ರಸ್ತೆಯಲ್ಲಿದೆ. ಯಶ್ ತಾಯಿ ಅಲ್ಲಿಗೆ ಯಾಕೆ ಹೋಗುತ್ತಾರೆ ಅಂತ ಗೊತ್ತಿಲ್ಲ’ ಎಂದಿದ್ದಾರೆ ಲಕ್ಷ್ಮಮ್ಮ.
ಈ ಬಗ್ಗೆ ಪುಷ್ಪಾ ಅರುಣ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಲಕ್ಷ್ಮಮ್ಮ ಎಂಬುವವರು ಇದ್ದಾರೆ ಎಂಬುದನ್ನು ಕೇಳಿ ತಿಳಿದಿದ್ದೆ. ದಾಖಲೆ ತೆಗೆದಾಗ ಲಕ್ಷ್ಮಮ್ಮ ಅವರಿಂದ ಬೇರೆಯವರಿಗೆ ಹಸ್ತಾಂತರ ಆಗಿ 45 ವರ್ಷಗಳು ಕಳೆದಿವೆ. ಈಗ ಅವರನ್ನು ಟಿವಿಯಲ್ಲಿ ನೋಡಿದೆ. ಖಾತೆ ಮಾಡಿರುವುದು ನಾನು, ಕಂದಾಯ ಕಟ್ಟಿರುವುದು ನಾನು. ಅವರ ಹೆಸರಿನಲ್ಲಿ ಯಾಕೆ ಕಂದಾಯ ಬಂದಿಲ್ಲ? ದೇವರಾಜ್ ಅವರ ಜೊತೆ ಲಕ್ಷ್ಮಮ್ಮ ಅವರು ಭಾಗಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತದೆ’ ಎಂದು ಪುಷ್ಪಾ ಅರುಣ್ ಕುಮಾರ್ ಅವರು ಹೇಳಿದ್ದಾರೆ.
‘ನಮಗೆ ಏನೂ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಹಿಂದೆ ಇರುವ ಎರಡು ಸೈಟ್ಗಳಿಗೂ ಇದೇ ರೀತಿ ಮಾಡಿದ್ದಾರೆ. ಸತೀಶ್ ಪಟೇಲ್, ಲಾಯರ್ ಶೇಖರ್, ಡಿಪಿಒ ನಟರಾಜ್, ದೇವರಾಜೇಗೌಡ ಎಲ್ಲರೂ ಸೇರಿ ಹಾಸನದಲ್ಲಿ ಈ ರೀತಿ ದಂಧೆ ಮಾಡಿದ್ದಾರೆ. ಇದನ್ನು ನಾನು ಬಯಲಿಗೆ ಎಳೆಯುತ್ತೇವೆ. ಪ್ರತಿಯೊಬ್ಬರಿಗೂ ತೊಂದರೆ ಆಗಿದೆ ಅಂತ ಜನರು ನನಗೆ ಮಾಹಿತಿ ಕೊಡುತ್ತಿದ್ದಾರೆ’ ಎಂದಿದ್ದಾರೆ ಪುಷ್ಪಾ ಅರುಣ್ ಕುಮಾರ್.
ಇದನ್ನೂ ಓದಿ: ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
‘ಸರ್ಕಾರ ಅವರಿಗೆ ಮೋಸ ಮಾಡಿದ್ದರೆ ಅವರು ಸರ್ಕಾರವನ್ನು ಕೇಳಬೇಕು. ನಮ್ಮ ಮೇಲೆ ಫೈಟ್ ಮಾಡೋದಲ್ಲ. ನಾನು 2020ಕ್ಕೂ ಮುಂಚೆ ಈ ನಿವೇಶನ ತೆಗೆದುಕೊಂಡಿದ್ದೆ. ಈ ಹಿಂದೆ ತಪ್ಪು ಏನಾದರೂ ಆಗಿತ್ತಾ ಎಂಬುದನ್ನು ವಿಚಾರಿಸಿದ್ದೇನೆ. ಆ ರೀತಿ ಆಗಿಲ್ಲ. ದೇವರಾಜ್, ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ಹೀನಾಮಾನ ಮಾತಾಡಿದ್ದಾರೆ. ಅದನ್ನು ನಾನು ಮಹಿಳಾ ಆಯೋಗಕ್ಕೆ ನೀಡುತ್ತೇನೆ’ ಎಂದು ಪುಷ್ಪಾ ಅವರು ಗರಂ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



