ಶ್ವಾನ ಪ್ರೇಮಿಗಳಿಗೆ ಸಿಹಿಸುದ್ದಿ, ಬರುತ್ತಿದೆ ಮತ್ತೊಂದು ನಾಯಿ ಕುರಿತ ಸಿನಿಮಾ
Dong Lovers: ಶ್ವಾನ ಪ್ರೇಮಿಗಳಿಗೆ ಸಿಹಿ ಸುದ್ದಿ. ಈಗಾಗಲೇ 777 ಚಾರ್ಲಿ ಹಾಗೂ ನಾನೂ ಮತ್ತು ಗುಂಡ ಹೆಸರಿನ ನಾಯಿ ಕುರಿತ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದು ಈಗ ಮತ್ತೊಂದು ಶ್ವಾನದ ಕತೆ ತೆರೆಗೆ ಬರುತ್ತಿದೆ.
ಶ್ವಾನ (Dog) ಪ್ರಿಯರಿಗಾಗಿ ಕನ್ನಡದಲ್ಲಿ ಮತ್ತೊಂದು ನಾಯಿ ಪ್ರೇಮ ಕುರಿತಾದ ಸಿನಿಮಾ ತೆರೆಗೆ ಬರುತ್ತಿದೆ. ಇದಾಗಲೇ ನಾನು ಮತ್ತು ಗುಂಡ ಹಾಗೂ ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ (777 Charlie) ಸಿನಿಮಾಗಳು ಶ್ವಾನಪ್ರಿಯರ ಮನಸ್ಸು ಗೆದ್ದಿವೆ. ರಕ್ಷಿತ್ ಶೆಟ್ಟಿಯವರ (Rakshit Shetty) 777 ಚಾರ್ಲಿ ಸಿನಿಮಾ ಅಂತೂ ಪ್ಯಾನ್ ಇಂಡಿಯಾ ಸ್ಕೇಲ್ನಲ್ಲಿ ಬಿಡುಗಡೆ ಆಗಿ 100 ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದೆ. ಇದೀಗ ಮತ್ತೊಂದು ಶ್ವಾನ ಪ್ರೇಮದ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಸಿನಿಮಾಕ್ಕೆ ಯಾವ ಮೋಹನ ಮುರಳಿ ಕರೆಯಿತು ಎಂದು ಭಿನ್ನವಾದ ಹೆಸರು ಇಡಲಾಗಿದೆ.
‘ಯಾವ ಮೋಹನ ಮುರಳಿ ಕರೆಯಿತು’ ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಮೂರು ಹಾಡುಗಳಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರವೆಂದರು ನಿರ್ದೇಶಕ ವಿಶ್ವಾಸ್ ಕೃಷ್ಣ.
ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಹಾಡು ಬಹಳ ಜನಪ್ರಿಯ. ಈಗ ಈ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚಿಗೆ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಾನು ಉದ್ಯಮಿ. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದೇನೆ. ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದರು. ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ, ನಾಯಕ ಮಾಧವ, ನಾಯಕಿ ಸ್ವಪ್ನಾ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ಹಾಗೂ ಸಂಗೀತ ನಿರ್ದೇಶಕ ಅನಿಲ್ ಸಿ ಜೆ ಚಿತ್ರದ ಕುರಿತು ಮಾತನಾಡಿದರು. ಪತ್ರಿಕಾಗೋಷ್ಠಿಗೆ ರಾಕಿ(ಶ್ವಾನ) ಕೂಡ ಆಗಮಿಸಿತ್ತು. ರಾಕಿ ಟ್ರೈನರ್ ಸ್ವಾಮಿ, ರಾಕಿಯ ದಿನಚರಿ ಬಗ್ಗೆ ವಿವರಣೆ ನೀಡಿದರು.
ಸಿನಿಮಾದ ಟೀಸರ್ನಲ್ಲಿ ತೋರಿಸಿರುವಂತೆ ಯಾವ ಮೋಹನ ಮುರಳಿ ಕರೆಯಿತೊ ಸಿನಿಮಾವು ನಾಯಿ ಹಾಗೂ ಒಬ್ಬ ಅಂಗವಿಕಲ ಬಾಲಕಿಯ ನಡುವೆ ನಡೆವ ಕತೆಯಾಗಿದೆ. ಸಿನಿಮಾದಲ್ಲಿ ಕೆಲವು ಥ್ರಿಲ್ಲಿಂಗ್ ಅಂಶಗಳೂ ಇದ್ದು, ಬಂದೂಕುಗಳು ಸಹ ಸುದ್ದು ಮಾಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Sun, 4 June 23