7 ಗಂಟೆ ಇತ್ತು ‘ಗೇಮ್ ಚೇಂಜರ್’ ಸಿನಿಮಾ ಅವಧಿ; ಶಂಕರ್ ಕೆಟ್ಟ ನಿರ್ದೇಶಕ ಎಂದ ಎಡಿಟರ್
'ಗೇಮ್ ಚೇಂಜರ್' ಸಿನಿಮಾದ ಸಂಪಾದಕ ಶಮೀರ್ ಮಹ್ಮದ್ ಅವರು ನಿರ್ದೇಶಕ ಶಂಕರ್ ಅವರ ಕೆಲಸದ ಶೈಲಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 7.5 ಗಂಟೆಗಳಷ್ಟು ಅವಧಿಯ ಚಿತ್ರವನ್ನು 3 ಗಂಟೆಗಳಿಗೆ ಇಳಿಸುವಲ್ಲಿ ಅವರು ಒಂದು ವರ್ಷ ಕಳೆದಿದ್ದಾರೆ ಎಂದು ಹೇಳಿದ್ದಾರೆ. ಶಂಕರ್ ಅವರ ಅನಿಯಮಿತ ಕೆಲಸದ ವೇಳಾಪಟ್ಟಿ ಮತ್ತು ವಿಳಂಬದ ಕಾರಣ ಅವರಿಗೆ ಕೆಟ್ಟ ಅನುಭವವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ನಿರ್ದೇಶಕ ಶಂಕರ್ (Shankar) ಅವರು ಇತ್ತೀಚೆಗೆ ಲಯ ತಪ್ಪಿರುವುದು ಗೊತ್ತೇ ಇದೆ. ಜನರ ಟೇಸ್ಟ್ಗೆ ತಕ್ಕಂತೆ ಅವರಿಗೆ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರ ಜೊತೆ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಅವರಿಂದ ನಿರ್ಮಾಪಕರಿಗೆ ನಷ್ಟ ಖಚಿತ ಎಂಬ ಪರಿಸ್ಥಿತಿಯು ಚಿತ್ರರಂಗದಲ್ಲಿ ನಿರ್ಮಾಣ ಆಗಿದೆ. ಹೀಗಿರುವಾಗಲೇ ಅವರ ಕೆಲಸದ ಬಗ್ಗೆ ‘ಗೇಮ್ ಚೇಂಜರ್’ ಚಿತ್ರದ ಸಂಕಲನಕಾರ ಶಮೀರ್ ಮಹ್ಮದ್ ಅವರು ಮಾತನಾಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಕೆಟ್ಟ ಅನುಭವ ಎಂದಿದ್ದಾರೆ.
ಶಂಕರ್ ಅವರು ‘ಗೇಮ್ ಚೇಂಜರ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರವು ಇತ್ತೀಚೆಗೆ ರಿಲೀಸ್ ಆಗಿ ಹೀನಾಯ ಸೋಲು ಕಂಡಿತು. ಇದು ರಾಮ್ ಚರಣ್ ವೃತ್ತಿ ಜೀವನಕ್ಕೆ ಹಿನ್ನಡೆ ಉಂಟು ಮಾಡಿತು. ಅಷ್ಟೇ ಅಲ್ಲ, ಶಂಕರ್ ಅವರ ಬಳಿ ಒಳ್ಳೆಯ ಸಿನಿಮಾ ಕೊಡಲು ಸಾಧ್ಯವಿಲ್ಲ ಎನ್ನುವ ಭಾವನೆ ಮೂಡಿಸಿತು. ಈ ಬಗ್ಗೆ ಶಮೀರ್ ಮಾತನಾಡಿದ್ದಾರೆ.
ಎರಡು ಗಂಟೆ ಐವತ್ತು ನಿಮಿಷಗಳ ಸಿನಿಮಾ ಮಾಡಲು ಇಡೀ ವರ್ಷ ಎಡಿಟಿಂಗ್ ಮಾಡಬೇಕಾಯಿತು ಎಂದು ಶಮೀರ್ ಹೇಳಿದ್ದಾರೆ. ‘ನಾನು ಒಂದು ವರ್ಷ ಆ ಚಿತ್ರದೊಂದಿಗೆ ಕಳೆದಿದ್ದೇನೆ. ನಾನು ಮೂರು ವರ್ಷಗಳ ಕಾಲ ಅಲ್ಲಿಗೆ ಹೋಗಿದ್ದೆ. ಕೊನೆಯ ಆರು ತಿಂಗಳಲ್ಲಿ ನಾನು ಅವರೊಂದಿಗೇ ಇದ್ದೆ. ಇನ್ನೂ ಒಂದು ತಿಂಗಳು ಇರಬೇಕಾಗಿ ಬರಬಹುದು ಎಂದರು. ನಾನು ಎಡಿಟಿಂಗ್ ಮಾಡುವಾಗ ಸಿನಿಮಾದ ಅವಧಿ ಏಳೂವರೆ ಗಂಟೆ ಇತ್ತು, ನಾನು ಅದನ್ನು ಮೂರುವರೆ ಗಂಟೆ ಇಳಿಸಿದೆ. ಆ ಬಳಿಕ ಹೊಸ ಎಡಿಟರ್ ಬಂದು ಅದನ್ನು ಮೂರುಗಂಟೆಗೆ ಇಳಿಸಿದರು’ ಎಂದಿದ್ದಾರೆ ಶಮೀರ್.
‘ಶಂಕರ್ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಭಯಾನಕ ಅನುಭವವಾಗಿತ್ತು. ನಾನು ಬಹಳ ಉತ್ಸಾಹದಿಂದ ಅಲ್ಲಿಗೆ ಹೋದೆ. ಆದರೆ ಅಲ್ಲಿ ಏನೋ ಬೇರೆ ಲೋಕದಲ್ಲಿ ನಡೆಯುತ್ತಿತ್ತು. ಅವರು ಎಡಿಟಿಂಗ್ಗೆ ಒಂದು ದಿನಾಂಕವನ್ನು ನಿಗದಿಪಡಿಸುತ್ತಿದ್ದರು. ಆದರೆ ಹತ್ತು ದಿನಗಳ ನಂತರವೇ ಅವರು ಬರುತ್ತಿದ್ದರು. ಅದೇ ಮಾದರಿಯು ಹಲವಾರು ದಿನಗಳವರೆಗೆ ಮುಂದುವರೆಯಿತು. ನಾನು 300-350 ದಿನಗಳ ಕಾಲ ಚೆನ್ನೈನಲ್ಲಿಯೇ ಇದ್ದೆ’ ಎಂದಿದ್ದಾರೆ ಶಮೀರ್.
ಇದನ್ನೂ ಓದಿ: ಮೂರೇ ದಿನಕ್ಕೆ ಹೀನಾಯ ಸ್ಥಿತಿಯಲ್ಲಿ ‘ಗೇಮ್ ಚೇಂಜರ್’ ಗಳಿಕೆ; ನಿರ್ಮಾಪಕರಿಗೆ ಆಗೋ ನಷ್ಟವೆಷ್ಟು?
‘ನಾನು ಸಿನಿಮಾ ತೊರೆದೆ. ಗೇಮ್ ಚೇಂಜರ್ ಚಿತ್ರಕ್ಕಾಗಿ ಮಾರ್ಕೋ ಸಿನಿಮಾನ ಕೈ ಬಿಟ್ಟಿದ್ದರೆ ನಾನು ದೊಡ್ಡ ತಪ್ಪು ಮಾಡಿದಂತೆ ಆಗುತ್ತಿತ್ತು’ ಎಂದು ಅವರು ಹೇಳಿದ್ದಾರೆ. ಶಂಕರ್ ಕೆಲಸದ ರೀತಿ ನೋಡಿದವರಿಗೆ ಶಾಕ್ ಆಗಿದೆ. ಏಳೂವರೆ ಗಂಟೆ ಸಿನಿಮಾ ಶೂಟ್ ಮಾಡುತ್ತಾರೆ ಎಂದರೆ ನಿರ್ಮಾಪಕರ ದುಡ್ಡನ್ನು ಅದೆಷ್ಟು ದುಂದುವೆಚ್ಚ ಮಾಡಿರಬೇಡ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







