‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ಏನಿದೆ? ‘ಉಂಡೆನಾಮ’ ಹಾಕೋದು ಯಾರಿಗೆ? ಚಿತ್ರಮಂದಿರದಲ್ಲಿ ಸಿಗುತ್ತೆ ಉತ್ತರ
Shaakuntalam | Shivaji Surathkal 2: ಕಾಮಿಡಿ ಇಷ್ಟಪಡುವವರಿಗೆ ‘ಉಂಡೆನಾಮ’ ಹಾಗೂ ಸ್ಪಸೆನ್ಸ್ ಪ್ರಿಯರಿಗಾಗಿ ‘ಶಿವಾಜಿ ಸುರತ್ಕಲ್ 2’ ರಿಲೀಸ್ ಆಗುತ್ತಿದೆ. ಪೌರಾಣಿಕ ಸಿನಿಮಾ ಬೇಕು ಎನ್ನುವವರಿಗಾಗಿ ‘ಶಾಕುಂತಲಂ’ ತೆರೆಕಾಣುತ್ತಿದೆ.
ಒಂದೆಡೆ ಚುನಾವಣೆಯ ರಂಗು ಜೋರಾಗಿದೆ. ಮತ್ತೊಂದೆಡೆ ಐಪಿಎಲ್ ಪಂದ್ಯಗಳ ಸಂಭ್ರಮ ಮನೆ ಮಾಡಿದೆ. ಈ ನಡುವೆ ಚಿತ್ರರಂಗದವರು ಸುಮ್ಮನೆ ಕೂತಿಲ್ಲ. ಪ್ರತಿ ವಾರದಂತೆ ಈ ವಾರ ಕೂಡ ಹೊಸ ಸಿನಿಮಾಗಳನ್ನು (New Movies) ಬಿಡುಗಡೆ ಮಾಡುವ ಪದ್ಧತಿ ಮುಂದುವರಿದಿದೆ. ಏಪ್ರಿಲ್ 14ರಂದು ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ರಮೇಶ್ ಅರವಿಂದ್ (Ramesh Aravind) ಅವರು ‘ಶಿವಾಜಿ ಸುರತ್ಕಲ್ 2’ ಚಿತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ. ಹಾಸ್ಯ ನಟ ಕೋಮಲ್ ಅವರು ‘ಉಂಡೇನಾಮ’ ಮೂಲಕ ನಗುವಿನ ಕಚಗುಳಿ ಇಡಲಿದ್ದಾರೆ. ಅಷ್ಟೇ ಅಲ್ಲದೇ, ಇನ್ನೂ ಕೆಲವು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಟಾಲಿವುಡ್ನಲ್ಲಿ ‘ಶಾಕುಂತಲಂ’ (Shaakuntalam) ಸಿನಿಮಾ ತೆರೆಗೆ ಬರುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಪೌರಾಣಿಕ.. ಹೀಗೆ ಹಲವು ಪ್ರಕಾರದ ಸಿನಿಮಾಗಳು ಈ ವಾರ ಚಿತ್ರಮಂದಿರದಲ್ಲಿ ಸದ್ದು ಮಾಡಲಿವೆ.
‘ಶಿವಾಜಿ ಸುರತ್ಕಲ್ 2’:
ರಮೇಶ್ ಅರವಿಂದ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದದವರು ನಟಿಸಿದ್ದಾರೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಉಂಡೆನಾಮ’:
ಬಹಳ ದಿನಗಳ ನಂತರ ನಟ ಕೋಮಲ್ ಕುಮಾರ್ ಹೀರೋ ಆಗಿ ನಟಿಸಿರುವ ‘ಉಂಡೆನಾಮ’ ಚಿತ್ರ ಏ.14ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಟಿ.ಆರ್. ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಮೂಲಕ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ. ಕೆ.ಎಲ್. ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಕೋಮಲ್ ಜೊತೆ ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವಾ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: Komal: ಆರು ವರ್ಷ ಸಿನಿಮಾದಿಂದ ದೂರವಿದ್ದ ಕೋಮಲ್ ಇಷ್ಟು ಸಮಯ ಏನು ಮಾಡಿದರು?
ಇವುಗಳ ಜೊತೆ ಕನ್ನಡದಲ್ಲಿ ‘ಮಾರಿಗುಡ್ಡದ ಗಡ್ಡದಾರಿಗಳು’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ದಿನೇಶ್ ಕುಮಾರ್, ಪ್ರವೀಣ್ ರಾಜ್, ನಮೃತಾ ಮುಂತಾದವರು ನಟಿಸಿದ್ದಾರೆ. ವಿಶಾಲ್ ಅಜಯ್ ನಿರ್ದೇಶನದ ‘ಸುರಾರಿ’ ಸಿನಿಮಾ ಸಹ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ.
‘ಶಾಕುಂತಲಂ’:
ನಟಿ ಸಮಂತಾ ರುತ್ ಪ್ರಭು ಪಾಲಿಗೆ ‘ಶಾಕುಂತಲಂ’ ಚಿತ್ರ ಬಹಳ ಮಹತ್ವದ್ದಾಗಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಅವರು ಶಕುಂತಲೆಯ ಪಾತ್ರ ಮಾಡಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದೆ. ಬೃಹತ್ ಸೆಟ್ಗಳನ್ನು ಹಾಕಿ ಶೂಟಿಂಗ್ ಮಾಡಲಾಗಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಹಾಗಾಗಿ ಹೈಪ್ ಹೆಚ್ಚಿದೆ. ಈ ಚಿತ್ರಕ್ಕೆ ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾಳೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.