ರಾಕ್ಷಸರ ಲಂಕೆಯಲ್ಲಿ ‘ರಾಮ’ನ ಮದುವೆ: ದಗ್ಗುಬಾಟಿ ಕುಟುಂಬದ ಮದುವೆ ಬಗ್ಗೆ ಶ್ರೀರೆಡ್ಡಿ ವಿವಾದಾತ್ಮಕ ಪೋಸ್ಟ್
SriReddy: ತೆಲುಗು ಚಿತ್ರರಂಗದ ವಿವಾದಾತ್ಮಕ ನಟಿ ಶ್ರೀರೆಡ್ಡಿ, ದಗ್ಗುಬಾಟಿ ಅಭಿರಾಮ್ ಮದುವೆ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀರೆಡ್ಡಿ (SriReddy) ತೆಲುಗು ಚಿತ್ರರಂಗದ ಕಾಂಟ್ರವರ್ಸಿ ಕ್ವೀನ್ ಎಂದೇ ಜನಪ್ರಿಯ. ತೆಲುಗು ಹಾಗೂ ತಮಿಳು ಚಿತ್ರರಂಗದ ಹಲವು ಪ್ರಮುಖ ನಟರು, ತಂತ್ರಜ್ಞರ ವಿರುದ್ಧ ಶ್ರೀರೆಡ್ಡಿ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು. ಒಮ್ಮೆಯಂತೂ ರಸ್ತೆ ಮಧ್ಯೆ ಅರೆಬೆತ್ತಲಾಗಿ ಪ್ರತಿಭಟನೆಯನ್ನು ಸಹ ಶ್ರೀರೆಡ್ಡಿ ಮಾಡಿದ್ದರು. ಆ ಬಳಿಕವೂ ಸಾಮಾಜಿಕ ಜಾಲತಾಣದ ಮೂಲಕ ತೆಲುಗು ಚಿತ್ರರಂಗದ ‘ದೊಡ್ಡವರ’ ಬಗ್ಗೆ ಅವಹೇಳನಕಾರಿ ಕಮೆಂಟ್ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತೆಲುಗು ಚಿತ್ರರಂಗದ ಪ್ರಮುಖ ಕುಟುಂಬವಾದ ದಗ್ಗುಬಾಟಿ ಕುಟುಂಬದ ವ್ಯಕ್ತಿಯೊಬ್ಬರ ಬಗ್ಗೆ ಶ್ರೀರೆಡ್ಡಿ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಟ, ನಿರ್ಮಾಪಕ ರಾಣಾ ದಗ್ಗುಬಾಟಿಯ ಕಿರಿ ಸಹೋದರ ಅಭಿರಾಮ್ ದಗ್ಗುಬಾಟಿಯ ವಿವಾಹ ಇತ್ತೀಚೆಗಷ್ಟೆ ಶ್ರೀಲಂಕಾದಲ್ಲಿ ನಡೆದಿದೆ. ವಿವಾಹದ ದಿನ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಟಿ ಶ್ರೀರೆಡ್ಡಿ, ‘ಸೀತೆಯನ್ನೂ ರಾಮನನ್ನು ದೂರ ಮಾಡಿದ ದೇಶ, ಸೀತೆಗೆ ನಾನಾ ಕಷ್ಟಗಳನ್ನು ಕೊಟ್ಟ ದೇಶ, ಆಂಜನೇಯನ ಕೋಪಾಗ್ನಿಗೆ ಭಗ್ನವಾದ ದೇಶ, ರಾಕ್ಷಸ ರಾವಣನ ಲಂಕಾ, ಶ್ರೀಲಂಕಾನಲ್ಲಿ ‘ದಗ್ಗುಬಾಟಿ ಅಭಿರಾಮ’ನ ಮದುವೆ. ನಮ್ಮ ದೇಶದ ಆದರ್ಶ ದಂಪತಿ ರಾಮ-ಸೀತೆಯನ್ನು ದೂರ ಮಾಡಿದ ದೇಶದಲ್ಲಿ ನಿನ್ನ ಮದುವೆಯಾ? ಆದರೂ ಆ ದೈವನಿರ್ಣಯವನ್ನು ಗೌರವಿಸುತ್ತೇನೆ. ರಾಕ್ಷಸರು ಎಂದಿಗೂ ರಾಕ್ಷಸರೇ’’ ಎಂದಿದ್ದಾರೆ ಶ್ರೀರೆಡ್ಡಿ.
ಇದನ್ನೂ ಓದಿ:ಸೋನಂ ನಟನೆ ಟೀಕೆ ಮಾಡಿದ ರಾಣಾ ದಗ್ಗುಬಾಟಿ; ಹೇಳಿಕೆ ವೈರಲ್ ಆದ ಬಳಿಕ ಕ್ಷಮೆ ಕೇಳಿದ ಹೀರೋ
ಶ್ರೀರೆಡ್ಡಿ ಈ ಹಿಂದೆಯೂ ದಗ್ಗುಬಾಟಿ ಅಭಿರಾಮ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಅಭಿರಾಮ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ ಒಂದನ್ನು ಸಹ ಬಿಡುಗಡೆ ಮಾಡಿದ್ದರು. ಫೋಟೊನಲ್ಲಿ ಅಭಿರಾಮ್ ಹಾಗೂ ಶ್ರೀರೆಡ್ಡಿ ಪರಸ್ಪರ ಮುತ್ತಿಕ್ಕುತ್ತಿರುವ ಚಿತ್ರವಿತ್ತು. ಆ ಫೋಟೊ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿತ್ತು.
ಈಗ ಅಭಿರಾಮ್, ಪ್ರತ್ಯುಷಾ ಜೊತೆಗೆ ವಿವಾಹವಾಗಿದ್ದಾರೆ. ತೆಲುಗಿನ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾದ ನಿರ್ಮಾಪಕ ಸುರೇಶ್ ಬಾಬು ಪುತ್ರ ದಗ್ಗುಬಾಟಿ ಅಭಿರಾಮ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯಲ್ಲಿ ಹೆಚ್ಚಿಗೆ ಜನಪ್ರಿಯತೆ ಗಳಿಸಿಲ್ಲವಾದರೂ ತಂದೆಯವರ ನಿರ್ಮಾಣ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಶ್ರೀರೆಡ್ಡಿ, ಮೀ ಟೂ ಅಭಿಯಾನಕ್ಕೆ ಮುಂಚೆಯೇ ತೆಲುಗು, ತಮಿಳಿನ ಹಲವು ನಾಯಕ ನಟರು, ತಂತ್ರಜ್ಞರ ಬಗ್ಗೆ ಆರೋಪಗಳನ್ನು ಮಾಡಿದ್ದರು. ಕೆಲವರ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದ್ದರು. ತಮಿಳಿನ ಸ್ಟಾರ್ ನಟ ಧನುಶ್, ಸಂಗೀತ ನಿರ್ದೇಶಕ ಅನಿರುದ್ಧ್, ಅಭಿರಾಮ್ ದಗ್ಗುಬಾಟಿ ಇನ್ನೂ ಹಲವು ನಟರು, ಕೆಲವು ನಿರ್ಮಾಪಕರ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ