ಡ್ರಗ್ಸ್ ಪ್ರಕರಣದಲ್ಲಿ ಹೆಸರು ಮುನ್ನೆಲೆಗೆ: ಕೈ ಮುಗಿದು ಬೇಡಿಕೊಂಡ ನಟಿ ಸುರೇಖಾ

KP Chowdary: ಟಾಲಿವುಡ್ ನಿರ್ಮಾಪಕ ಕೆಪಿ ಚೌಧರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದು ಈ ಪ್ರಕರಣದಲ್ಲಿ ನಟಿ ಸುರೇಖಾ ವಾಣಿ ಹೆಸರು ಕೇಳಿ ಬರುತ್ತಿದೆ. ಇದೀಗ ಸುರೇಖಾ ವಾಣಿ ವಿಡಿಯೋ ಮಾಡಿ ಮನವಿಯೊಂದನ್ನು ಮಾಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಮುನ್ನೆಲೆಗೆ: ಕೈ ಮುಗಿದು ಬೇಡಿಕೊಂಡ ನಟಿ ಸುರೇಖಾ
ಸುರೇಖಾ ವಾಣಿ
Follow us
ಮಂಜುನಾಥ ಸಿ.
|

Updated on: Jun 25, 2023 | 8:23 PM

ತೆಲುಗು ಚಿತ್ರರಂಗದಲ್ಲಿ ಮತ್ತೆ ಡ್ರಗ್ಸ್ ಪ್ರಕರಣ (Drugs Case) ಬಯಲಾಗಿದೆ. ರಜನೀಕಾಂತ್​ರ ಕಬಾಲಿ ಸಿನಿಮಾದ ನಿರ್ಮಾಪಕ ಕೆಪಿ ಚೌಧರಿಯನ್ನು (KP Chowdary) ಹೈದರಾಬಾದ್ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಕೆಪಿ ಚೌಧರಿ ಬಂಧನದ ಬಳಿಕ ಅವರಿಗೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರೊಟ್ಟಿಗೆ ಆಪ್ತ ಬಂಧ ಇರುವುದು ಗೊತ್ತಾಗಿದೆ. ಕೆಪಿ ಚೌಧರಿ ಡ್ರಗ್ಸ್ ಪ್ರಕರಣದಲ್ಲಿ ತೆಲುಗು ಚಿತ್ರರಂಗದ ಇನ್ನೂ ಕೆಲವು ನಟ-ನಟಿಯರ ಹೆಸರು ಹೊರಗೆ ಬಂದಿದೆ. ಅದರಲ್ಲಿ ಆಶು ರೆಡ್ಡಿ ಹಾಗೂ ಹಿರಿಯ ನಟಿ ಸುರೇಖಾ ವಾಣಿ ಪ್ರಮುಖರು. ಇದೀಗ ನಟಿ ಸುರೇಖಾ ವಾಣಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ಸುರೇಖಾ ವಾಣಿ, ”ಕಳೆದ ಕೆಲವು ದಿನಗಳಿಂದಲೂ ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ನಿಜವಲ್ಲ. ದಯವಿಟ್ಟು ನನ್ನ ಮೇಲೆ ನನ್ನ ಕುಟುಂಬ ಸದಸ್ಯರ ಮೇಲೆ ಮಾಡುತ್ತಿರುವ ಆರೋಪಗಳನ್ನು ನಿಲ್ಲಿಸಿ. ನೀವು ಮಾಡುತ್ತಿರುವ ಆರೋಪಗಳಿಂದ ನಮ್ಮ ವೃತ್ತಿ, ನಮ್ಮ ಭವಿಷ್ಯ ಮುಖ್ಯವಾಗಿ ನನ್ನ ಮಕ್ಕಳ ವೃತ್ತಿ ಮತ್ತು ಭವಿಷ್ಯಕ್ಕೆ ಧಕ್ಕೆ ಆಗುತ್ತಿದೆ. ಮಾತ್ರವಲ್ಲದೆ ಕೌಟುಂಬಿಕ ಆರೋಗ್ಯವೂ ಹದಗೆಡುತ್ತಿದೆ. ಬೇರೆ ಬೇರೆ ವಿಧದಲ್ಲಿ ಈ ಆರೋಪಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ದಯವಿಟ್ಟು ನಮ್ಮ ಅರ್ಥ ಮಾಡಿಕೊಳ್ಳಿ” ಎಂದು ಸುರೇಖಾ ಕೈಮುಗಿದಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಪಿ ಚೌಧರಿ ಜೊತೆ ಸುರೇಖಾ ಹಾಗೂ ಅವರ ಮಗಳಿಗೆ ಆಪ್ತ ಗೆಳೆತನ ಇತ್ತು. ಇಬ್ಬರೂ ಜೊತೆಯಾಗಿರುವ ಕೆಲವು ಫೊಟೊಗಳು ಕೆಪಿ ಚೌಧರಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಂತೂ ನಟಿ ಸುರೇಖಾ, ಕೆಪಿ ಚೌಧರಿಗೆ ಮುತ್ತು ನೀಡುತ್ತಿದ್ದಾರೆ. ಸುರೇಖಾ ಮಗಳು ಸಹ ಕೆಪಿ ಚೌಧರಿ ಜೊತೆಗೆ ಆಪ್ತವಾಗಿ ಫೊಟೊಗಳನ್ನು ತೆಗೆಸಿಕೊಂಡು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿರುವ ನಿರ್ಮಾಪಕನ ಐಶಾರಾಮಿ ಬದುಕು ಹೀಗಿತ್ತು

ಪೊಲೀಸರ ತನಿಖೆಯಂತೆ ಸುಮಾರು 12 ಜನರಿಗೆ ಕೆಪಿ ಚೌಧರಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಅದರಲ್ಲಿ ಮಾಜಿ ಬಿಗ್​ಬಾಸ್ ಸ್ಪರ್ಧಿ ಆಶು ರೆಡ್ಡಿ ಸೇರಿದಂತೆ ಇನ್ನೂ ಕೆಲವರ ಹೆಸರು ಇದೆ. ರವಿ ತೇಜ ಸಹೋದರ ರಘು ತೇಜ, ಆಶು ರೆಡ್ಡಿ, ಸನಾ ಮಿಶ್ರಾ, ಸುಶ್ರಾಂತ್ ರೆಡ್ಡಿ, ಶ್ವೇತಾ ಠಾಗೂರ್, ನಿತಿನೇಶ್, ಬೆಜವಾಡ ಭರತ್, ಪ್ರಸಾದ್ ಎಂಬುವರಿಗೆ ಬಂಧಿತ ನಿರ್ಮಾಪಕ ಕೆಪಿ ಚೌಧರಿ ಡ್ರಗ್ಸ್ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಕೆಪಿ ಚೌಧರಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ತಾನು ಡ್ರಗ್ಸ್ ಸೇವಿಸುತ್ತಿದುದಾಗಿಯೂ, ತನ್ನ ಸೇವನೆಗೆಂದು ದೊಡ್ಡ ಮೊತ್ತದ ಕೊಕೇನ್ ಖರೀದಿಸಿದ್ದಾಗಿಯೂ ಹೇಳಿದ್ದಾನೆ. ತಾನು ಯಾರಿಗೂ ಮಾದಕ ವಸ್ತು ಮಾರಾಟ ಮಾಡಿಲ್ಲವೆಂದು ಚೌಧರಿ ಹೇಳಿದ್ದಾನೆ.

ಇನ್ನು ನಟಿ ಸುರೇಖಾ ವಾಣಿ ಹಲವು ವರ್ಷಗಳಿಂದಲೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಸುರೇಖಾ ವಾಣಿ ಅಕ್ಕ, ಅತ್ತಿಗೆ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿಯೂ ಸುರೇಖಾ ವಾಣಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ