ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್ಗೆ ಹೋದ ತಮನ್ನಾಗೆ ಹಿನ್ನಡೆ
ನಟಿ ತಮನ್ನಾ ಭಾಟಿಯಾ ಅವರು ಸೋಪ್ ಕಂಪನಿಯೊಂದರ ವಿರುದ್ಧ ಸಲ್ಲಿಸಿದ್ದ 1 ಕೋಟಿ ಪರಿಹಾರ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 2008ರ ಒಪ್ಪಂದದ ನಂತರವೂ ತಮ್ಮ ಫೋಟೋಗಳನ್ನು ಬಳಸಲಾಗಿದೆ ಎಂದು ತಮನ್ನಾ ಆರೋಪಿಸಿದ್ದರು. ಆದರೆ, ಒಪ್ಪಂದದ ಅವಧಿ ಮುಗಿದ ನಂತರ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿ, 16 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ.

ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಖಾಸಗಿ ಸೋಪ್ ಕಂಪನಿಯ ವಿರುದ್ಧ ಅವರು ಸಲ್ಲಿಸಿದ್ದ 1 ಕೋಟಿ ರೂ. ಪರಿಹಾರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಪ್ರಕರಣ ಸುಮಾರು 16 ವರ್ಷಗಳ ಹಿಂದಿನದು ಎಂದೆ ನೀವು ನಂಬಲೇಬೇಕು. ಹಾಗಾದರೆ ಏನಿದು ಪ್ರಕರಣ? ಅವರ ವಾದವೇನು? ಆ ಬಗ್ಗೆ ಇಲ್ಲಿದೆ ವಿವರ.
ಅಕ್ಟೋಬರ್ 2008ರಲ್ಲಿ, ತಮನ್ನಾ ಸೋಪ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಅವರು ಒಂದು ವರ್ಷದ ಅವಧಿಗೆ (ಅಕ್ಟೋಬರ್ 2009 ರವರೆಗೆ) ಕಂಪನಿಯ ಉತ್ಪನ್ನಗಳಿಗೆ ಬ್ರಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಒಪ್ಪಂದದ ಅವಧಿ ಮುಗಿದ ನಂತರವೂ, ಕಂಪನಿಯು ತನ್ನ ಫೋಟೋಗಳನ್ನು ಜಾಹೀರಾತುಗಳಲ್ಲಿ ಮತ್ತು ಸೋಪ್ ಪ್ಯಾಕೇಜಿಂಗ್‌ನಲ್ಲಿ ಬಳಸುತ್ತಿದೆ ಎಂದು ತಮನ್ನಾ ಆರೋಪಿಸಿದರು.
2010 ಮತ್ತು 2011ರ ಅವಧಿಯಲ್ಲಿ ಅನುಮತಿಯಿಲ್ಲದೆ ತಮ್ಮ ಫೋಟೋಗಳನ್ನು ಬಳಸುವುದರಿಂದ ಆರ್ಥಿಕವಾಗಿ ಹಾನಿಯಾಗಿದೆ ಮತ್ತು ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡಿದೆ ಎಂದು ಅವರು ವಾದಿಸಿದರು. 1 ಕೋಟಿ ರೂ. ಪರಿಹಾರವನ್ನು ಕೋರಿ ಅವರು ನ್ಯಾಯಾಲಯವನ್ನು ಸಹ ಸಂಪರ್ಕಿಸಿದರು.
ಆರಂಭದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ತಮನ್ನಾ ಅವರು ಒದಗಿಸಿದ ಸಾಕ್ಷ್ಯಗಳು ಸರಿಯಾಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. ಅವರು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. ಏಪ್ರಿಲ್ 16, 2026ರಂದು, ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕಾವತಿ ಅವರ ಪೀಠವು ತಮನ್ನಾ ಅವರ ವಾದವನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
ಒಪ್ಪಂದದ ಅವಧಿಯ ನಂತರ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೀಠ ಹೇಳಿದೆ. ಏಕ ನ್ಯಾಯಾಧೀಶರ ಹಿಂದಿನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತು. ಈ ತೀರ್ಪು ದೀರ್ಘಕಾಲದ ಕಾನೂನು ಹೋರಾಟವನ್ನು ಕೊನೆಗೊಳಿಸಿದಂತೆ ತೋರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



