‘ಕುಳ್ಳ ಹೌದು, ಆದ್ರೆ ಮದುವೆ ಆಗಬಾರದಾ?’; ಕೆಟ್ಟ ಕಮೆಂಟ್ಗೆ ಅಬ್ದು ರೋಜಿಕ್ ಬೇಸರ
ಮಾಜಿ ಬಿಗ್ ಬಾಸ್ ಸ್ಪರ್ಧಿ ಅಬ್ದು ರೋಜಿಕ್ ಅವರ ಹೈಟ್ ಕೇವಲ 3 ಅಡಿ 8 ಇಂಚು. ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿಶ್ಚಿತಾರ್ಥದ ಸುದ್ದಿ ತಿಳಿಸಿದ ಬಳಿಕ ಅವರಿಗೆ ಜನರಿಂದ ಕೆಟ್ಟ ಕಮೆಂಟ್ಗಳು ಬರುತ್ತಿವೆ. ಇದರಿಂದ ಅವರು ಸಾಕಷ್ಟು ನೊಂದುಕೊಂಡಿದ್ದಾರೆ.
ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿರುವ ಅಬ್ದು ರೋಜಿಕ್ (Abdu Rozik) ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ. ಶೀಘ್ರದಲ್ಲೇ ಅವರು ಮದುವೆ ಆಗಲಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ನಿಶ್ಚಿತಾರ್ಥ (Abdu Rozik Engagement) ಅಮೀರಾ ಎಂಬ ಹುಡುಗಿಯ ಜೊತೆ ನೆರವೇರಿದೆ. ಆದರೆ ಅವರು ಸಂಪೂರ್ಣ ಖುಷಿಯಾಗಿಲ್ಲ. ಅವರ ಸಂತೋಷಕ್ಕೆ ಧಕ್ಕೆ ಬರುವ ರೀತಿಯಲ್ಲಿ ಕೆಲವರು ನಡೆದುಕೊಂಡಿದ್ದಾರೆ. ರಬ್ದು ರೋಜಿಕ್ ಎತ್ತರ (Abdu Rozik Height) ಕಡಿಮೆ ಇದೆ ಎಂಬ ಕಾರಣಕ್ಕೆ ಜನರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಬ್ದು ರೋಜಿಕ್ ಅವರು ಮೂಲತಃ ತಜಕಿಸ್ತಾನದವರು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಅವರು ಸಿಂಗರ್ ಕೂಡ ಹೌದು. ಹಿಂದಿ ಬಿಗ್ ಬಾಸ್ 16ನೇ ಸೀಸನ್ನಲ್ಲಿ ಅವರು ಭಾಗವಹಿಸಿದ್ದರು. ಅದರಿಂದ ಅವರ ಜನಪ್ರಿಯತೆ ಹೆಚ್ಚಾಯಿತು. ಬಳಿಕ ಅವರು ‘ಫಿಯರ್ ಫ್ಯಾಕ್ಟರ್: ಖತ್ರೋಂಕೆ ಕಿಲಾಡಿ 13’ ಶೋನಲ್ಲಿ ಅತಿಥಿಯಾಗಿ ಸ್ಪರ್ಧಿಸಿದ್ದರು. ಈಗ ಅವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅಬ್ದು ರೋಜಿಕ್ ಅವರಿಗೆ ಈಗ 20 ವರ್ಷ ವಯಸ್ಸು,. ಅವರ ಎತ್ತರ 3 ಅಡಿ 8 ಇಂಚು ಮಾತ್ರ! ಆದರೂ ಕೂಡ ಅವರ ಬದುಕಿನಲ್ಲಿ ಪ್ರೀತಿ ಚಿಗುರಿದೆ. ತಮ್ಮ ಮನದರಸಿಯನ್ನು ಅವರು ಮದುವೆ ಆಗುತ್ತಿದ್ದಾರೆ. ಇತ್ತೀಚೆಗೆ ಅವರು ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಅಬ್ದು ರೋಜಿಕ್ಗೆ ಅಭಿನಂದನೆ ತಿಳಿಸಿದರು. ಆದರೆ ಅನೇಕರು ಕೆಟ್ಟ ಕಮೆಂಟ್ಗಳ ಮೂಲಕ ಟ್ರೋಲ್ ಮಾಡಿದರು.
View this post on Instagram
‘ನಾನು ಕುಳ್ಳಗಿದ್ದೇನೆ ಎಂಬ ಒಂದೇ ಕಾರಣಕ್ಕೆ ಮದುವೆ ಆಗಬಾರದು ಅಂತ ನೀವು ಆಲೋಚಿಸಿದ್ದೀರಾ? ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ನಡೆದುಕೊಳ್ಳಬೇಡಿ. ಜನರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಕೆಟ್ಟ ಕಮೆಂಟ್ ಮಾಡಬೇಡಿ. ಅದರಿಂದ ಅವರಿಗೆ ಮಾನಸಿಕವಾಗಿ ತೊಂದರೆ ಆಗುತ್ತದೆ’ ಎಂದು ಅಬ್ದು ರೋಜಿಕ್ ಹೇಳಿದ್ದಾರೆ.
ಇದನ್ನೂ ಓದಿ: ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಬ್ದು ರೋಜಿಕ್; ಇದು ಮಾಲ್ನಲ್ಲಿ ಮೂಡಿದ ಪ್ರೀತಿ
‘ಅಭಿನಂದನೆ ತಿಳಿಸಿದವರಿಗೆ ಧನ್ಯವಾದಗಳು. ಆದರೆ ನೆಗೆಟಿವ್ ವಿಚಾರದ ಬಗ್ಗೆ ನಾನು ಮಾತನಾಡಬೇಕಿದೆ. ನನ್ನ ಬಗ್ಗೆ ಜನರು ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ಅಮೀರಾ ಮತ್ತು ಅವರ ಕುಟುಂಬದವರು ಕೂಡ ಇದನ್ನೆಲ್ಲ ನೋಡುತ್ತಿದ್ದಾರೆ. ಇದರಿಂದ ನಮ್ಮ ಖುಷಿ ಸುದ್ದಿ ಎಂಬುದು ದುಸ್ವಪ್ನ ಆಗಿದೆ’ ಎಂದಿದ್ದಾರೆ ಅಬ್ದು ರೋಜಿಕ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.