‘ಒಬ್ಬರನ್ನು ಮನೆಗೆ ಕಳುಹಿಸಿಯೇ ಹೋಗೋದು’; ಲಿಖಿತ್-ಮಂಜು ವಿರುದ್ಧ ತೊಡೆತಟ್ಟಿದ ಧನುಷ್
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಗಳ ಆಪ್ತತೆಯಲ್ಲಿ ಬಿರುಕು ಮೂಡಿದೆ. ಆಸಿಯಾ ಕಿವಿಮಾತಿನ ಬಳಿಕ ಜಾಗೃತರಾದ ಧನುಷ್, ಮಂಜು ಮತ್ತು ಲಿಖಿತ್ ವಿರುದ್ಧ ಸಮರ ಸಾರಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೊರಹೋಗುವುದು ಎಂದು ಧನುಷ್ ಓಪನ್ ಚಾಲೆಂಜ್ ಹಾಕಿರುವುದು ಮನೆಯಲ್ಲಿ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು
- ಜೀವಕ್ಕೆ ಜೀವ ಕೊಡ್ತಿದ್ದವರಲ್ಲಿ ಮೂಡಿತು ಬಿರುಕು
- ಕಾಮನ್ ಮ್ಯಾನ್ ಬಳಗದಲ್ಲಿ ಶೀತಲ ಸಮರ
- ಆಶಿಯಾ ಕೊಟ್ಟ ಕಿವಿಮಾತು
ಅಗ್ನಿಪರೀಕ್ಷೆಯಿಂದ ಒಟ್ಟಾಗಿ ಬಂದ ಸ್ಪರ್ಧಿಗಳು ಎಂದರೆ ಅದು ಕಿರಣ್ ಶಾಸ್ತ್ರಿ, ಲಿಖಿತ್, ಧನುಷ್ ಹಾಗೂ ಮಾಡರ್ನ್ ಮಹಾಕವಿ ಮಂಜು. ಇವರು ಜೀವಕ್ಕೆ ಜೀವ ಕೊಡುತ್ತೇವೆ ಎನ್ನುವ ರೀತಿಯಲ್ಲಿ ಇದ್ದರು. ಆದರೆ, ಸದ್ದಿಲ್ಲದೆ ಇವರ ಮಧ್ಯೆ ಬಿರುಕು ಮೂಡಲು ಶುರುವಾಗಿದೆ. ಶೀತಲ ಸಮರವೊಂದು ಹುಟ್ಟಿಕೊಳ್ಳುವ ಸೂಚನೆ ಸಿಕ್ಕಿದೆ. ಧನುಷ್ ಅವರು ಒಂದು ದೊಡ್ಡ ಪ್ರಮಾಣವನ್ನು ಮಾಡಿದ್ದಾರೆ.
‘ಬಿಗ್ ಬಾಸ್’ ಆಟದಲ್ಲಿ ಗೆಲ್ಲುವುದು ಒಬ್ಬರೇ. ಅಲ್ಲಿಗೆ ಬರುವ ಪ್ರತಿ ಸ್ಪರ್ಧಿ ಕೂಡ ಗೆಲ್ಲಬೇಕು ಎಂದು ಕಾಯುತ್ತಾ ಇರುತ್ತಾರೆ. ತುಂಬಾನೇ ಆಪ್ತರು ಎನಿಸಿಕೊಂಡವರ ಮಧ್ಯೆಯೇ ಪರಿಸ್ಥಿತಿಗೆ ಅನುಗುಣವಾಗಿ ಜಗಳ ಶುರುವಾಗುತ್ತದೆ. ಈಗ ಕಾಮನ್ ಮ್ಯಾನ್ಗಳು ಇಷ್ಟು ದಿನ ಆಪ್ತತೆಯಿಂದ ಇದ್ದರು. ಆದರೆ, ಈ ಆಪ್ತತೆ ಮುರಿದುಬೀಳುವ ಲಕ್ಷಣ ಶುರುವಾಗಿದೆ.
ಧನುಷ್ ಅವರು ಆಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಆಸಿಯಾ ಅವರು ಕಿವಿಮಾತೊಂದನ್ನು ಹೇಳಿದ್ದಾರೆ. ‘ನೀವು ಮಂಜು ಮೊದಲಾದವರ ಜೊತೆ ಸೇರಬೇಡಿ. ಅವರು ಮಾಡಿದ ತಪ್ಪಿನಿಂದ ನಿಮಗೂ ಅಪವಾದ ಬರುತ್ತದೆ’ ಎಂಬ ಕಿವಿಮಾತನ್ನು ಹೇಳಿದರು. ಈ ವಿಷಯ ಧನುಷ್ಗೆ ನಿಜ ಎನಿಸಿದೆ.
ಇದನ್ನೂ ಓದಿ: ಬಿಗ್ ಬಾಸ್ಗೂ ಗೌರವ ಕೊಡದ ಕಾಮನ್ ಮ್ಯಾನ್ ಸ್ಪರ್ಧಿಗಳು; ಶುರುವಾಯ್ತು ಚರ್ಚೆ ಈ ಬೆಳವಣಿಗೆ ಬಳಿಕ ಧನುಷ್ ಸ್ವಲ್ಪ ಬದಲಾದಂತೆ ಕಂಡರು. ಅವರು ಕಿರಣ್ ಶಾಸ್ತ್ರಿ ಬಳಿ ಕೆಲವು ವಿಷಯ ಹಂಚಿಕೊಂಡರು. ‘ಮಂಜು ಹಾಗೂ ಲಿಖಿತ್ ಏನೆನೋ ಪ್ಲ್ಯಾನ್ ಮಾಡುತ್ತಾ ಇರುತ್ತಾರೆ. ಅವರು ಬೇರೆಯವರ ಮೇಲೆ ದ್ವೇಷ ಸಾಧಿಸಲು ನಮ್ಮನ್ನು ಬಳಸಿಕೊಳ್ಳುತ್ತಾರೆ. ಆಗಿದ್ದು ಆಗಲಿ, ಇಬ್ಬರಲ್ಲಿ (ಮಂಜು ಹಾಗೂ ಲಿಖಿತ್) ಒಬ್ಬರನ್ನು ಹೊರಕ್ಕೆ ಕಳುಹಿಸಿಯೇ ನಾನು ಹೋಗೋದು’ ಎಂದು ಧನುಷ್ ಓಪನ್ ಚಾಲೆಂಜ್ ಹಾಕಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Sat, 19 September 26




