BBK9: ಬಿಗ್ ಬಾಸ್ನಲ್ಲಿ ಸ್ವಾರ್ಥಿ ಯಾರು? ಸುದೀಪ್ ಎದುರು ಮುಲಾಜಿಲ್ಲದೇ ಪಟ್ಟಿ ನೀಡಿದ ಸ್ಪರ್ಧಿಗಳು
Bigg Boss Kannada | Aryavardhan Guruji: ದೊಡ್ಮನೆಯಲ್ಲಿ ಹೆಚ್ಚು ಕಾಳಜಿ ಮಾಡುವುದು ಯಾರು? ಹೆಚ್ಚು ಸ್ವಾರ್ಥ ಬುದ್ಧಿ ಹೊಂದಿರುವವರು ಯಾರು? ಈ ವಿಚಾರದ ಕುರಿತು ಕಿಚ್ಚ ಸುದೀಪ್ ಎದುರಲ್ಲೇ ಚರ್ಚೆ ನಡೆದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (Bigg Boss Kannada Season 9) ಭಾವನೆಗಳ ಆಟ ಮುಂದುವರಿಸಿದೆ. ಈ ರಿಯಾಲಿಟಿ ಶೋನಲ್ಲಿ ಒಂದೊಂದು ಸಂದರ್ಭಕ್ಕೆ ತಕ್ಕಂತೆ ಒಂದೊಂದು ರೀತಿಯಲ್ಲಿ ಇರಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ ಎದುರಾಗುತ್ತದೆ. ಸ್ನೇಹ ಕಾಪಾಡಿಕೊಳ್ಳುವುದರ ಜೊತೆಗೆ ನಿಷ್ಠುರವಾಗಿಯೂ ಇರಬೇಕಾದ ಸಂದರ್ಭ ಬರುತ್ತದೆ. ಅದರಲ್ಲೂ, ಟಾಸ್ಕ್ ವಿಚಾರ ಬಂದಾಗ ಮುಲಾಜು ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ. ಈ ವಾರದ ಸಂಡೇ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಎಲ್ಲರಿಗೂ ನೇರವಾಗಿ ಒಂದು ಟಾಸ್ಕ್ ನೀಡಿದ್ದಾರೆ. ದೊಡ್ಮನೆಯಲ್ಲಿ ಇರುವವರ ಪೈಕಿ ಹೆಚ್ಚು ಕಾಳಜಿ ಮಾಡುವವರು ಯಾರು ಹಾಗೂ ಹೆಚ್ಚು ಸ್ವಾರ್ಥಿ ಯಾರು ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಅದಕ್ಕೆ ಎಲ್ಲರೂ ನೇರವಾಗಿಯೇ ಉತ್ತರ ನೀಡಿದ್ದಾರೆ. ಸ್ವಾರ್ಥಿಗಳ ಪಟ್ಟಿಯಲ್ಲಿ ರೂಪೇಶ್ ರಾಜಣ್ಣ (Rupesh Rajanna) ಮತ್ತು ಆರ್ಯವರ್ಧನ್ ಗುರೂಜಿ ಹೆಸರು ಹೆಚ್ಚಾಗಿ ಕೇಳಿಬಂದಿದೆ!
ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಈಗ ಅವರಿಗೆ ಬಿಗ್ ಬಾಸ್ ಶೋನಿಂದ ಜನಪ್ರಿಯತೆ ಹೆಚ್ಚಿದೆ. ಆರಂಭದ ವಾರಗಳಲ್ಲಿ ಕೊಂಚ ಸೈಲೆಂಟ್ ಆಗಿದ್ದ ಅವರು ಈಗ ವೈಲೆಂಟ್ ಆಗಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಂದಾಗಿ ಮನೆಯಲ್ಲಿ ಕೆಲವೊಮ್ಮೆ ಜಗಳ ಆಗಿದ್ದು ಕೂಡ ಇದೆ. ಅವರಲ್ಲಿನ ಒಂದಷ್ಟು ಗುಣಗಳು ಇನ್ನಿತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಅವರಿಗೆ ಸ್ವಾರ್ಥ ಬುದ್ಧಿ ಹೆಚ್ಚಿದೆ ಎಂದು ಬಹುತೇಕರು ಹೇಳಿದ್ದಾರೆ.
ಅದೇ ರೀತಿ, ಆರ್ಯವರ್ಧನ್ ಗುರೂಜಿ ಕೂಡ ಹಲವು ಕಾರಣಗಳಿಂದಾಗಿ ಗಮನ ಸೆಳೆಯುತ್ತಾರೆ. ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್ ತನಕ ಅವರ ಬಿಗ್ ಬಾಸ್ ಜರ್ನಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಮುಗ್ಧರಂತೆ ಕಾಣಿಸಿಕೊಳ್ಳುವ ಅವರಿಗೆ ದೊಡ್ಮನೆಯ ಒಂದಷ್ಟು ಸದಸ್ಯರಿಂದ ‘ಸ್ವಾರ್ಥಿ’ ಎಂಬ ಹಣೆಪಟ್ಟಿ ಸಿಕ್ಕಿದೆ.
ದೀಪಿಕಾ ದಾಸ್, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಕೂಡ ಸ್ವಾರ್ಥಿಗಳ ಪಟ್ಟಿಯಲ್ಲಿ ಇದ್ದಾರೆ. ಆದರೆ ಅತಿ ಹೆಚ್ಚು ಅಂಕ ಪಡೆದಿದ್ದು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ. ಈ ಕುರಿತಂತೆ ಕಲರ್ಸ್ ಕನ್ನಡ ವಾಹಿನಿ ಒಂದು ಪ್ರೋಮೋ ಹಂಚಿಕೊಂಡಿದೆ. ಇದು ಭಾನುವಾರ (ನ.20) ರಾತ್ರಿಯ ಸಂಚಿಕೆಯಲ್ಲಿ ಪ್ರಸಾರ ಆಗಲಿದೆ.
ಕಿಚ್ಚನ ಎದುರು ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆ!
SUPER SUNDAY WITH ಸುದೀಪ | ಇಂದು ರಾತ್ರಿ 9#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/lSHsYnUzw7
— Colors Kannada (@ColorsKannada) November 20, 2022
7ನೇ ವಾರವೇ ಆರ್ಯವರ್ಧನ್ ಗುರೂಜಿ ಔಟ್ ಆಗಬೇಕಿತ್ತು. ಆದರೆ ಆ ವಾರದಲ್ಲಿ ಎಲಿಮಿನೇಷನ್ ಇಲ್ಲದ ಕಾರಣ ಅವರು ಸೇಫ್ ಆಗಿದ್ದರು. ಮಗಳನ್ನು ನೋಡಬೇಕು ಎಂಬ ತವಕದಲ್ಲಿ ಇರುವ ತಾವು ಎಲಿಮಿನೇಟ್ ಆದರೂ ಚಿಂತೆ ಇಲ್ಲ ಎಂದು ಗುರೂಜಿ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:36 pm, Sun, 20 November 22