ಡ್ರೋನ್ ಪ್ರತಾಪ್ ತಂಡಕ್ಕೆ ಹೀನಾಯ ಸೋಲು: ಕಾರ್ತಿಕ್​ಗೆ ಕ್ಯಾಪ್ಟನ್ಸಿ ಅವಕಾಶ

Bigg Boss: ಮೊದಲ ಬಾರಿ ತಂಡದ ಕ್ಯಾಪ್ಟನ್ ಆಗಿದ್ದಾಗ ದುರ್ಬಲ ತಂಡ ಹೊಂದಿದ್ದರೂ ಗೆದ್ದಿದ್ದ ಡ್ರೋನ್ ಪ್ರತಾಪ್, ಎರಡನೇ ಬಾರಿ ಕ್ಯಾಪ್ಟನ್ ಆದಾಗ ಕಳಪೆ ನಿರ್ಣಯಗಳಿಂದಾಗಿ ಹೀನಾಯ ಸೋಲು ಕಂಡರು. ಆದರೆ ಪ್ರತಾಪ್​ರಿಂದ ತಂಡದಿಂದ ಹೊರಹಾಕಲ್ಪಟ್ಟಿದ್ದ ಕಾರ್ತಿಕ್​ಗೆ ಅದೃಷ್ಟ ಒಲಿಯಿತು.

ಡ್ರೋನ್ ಪ್ರತಾಪ್ ತಂಡಕ್ಕೆ ಹೀನಾಯ ಸೋಲು: ಕಾರ್ತಿಕ್​ಗೆ ಕ್ಯಾಪ್ಟನ್ಸಿ ಅವಕಾಶ
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Nov 29, 2023 | 11:15 PM

ಕಳೆದ ಬಾರಿ ತಂಡದ ಕ್ಯಾಪ್ಟನ್ ಆಗಿದ್ದಾಗ ದುರ್ಬಲ ತಂಡವನ್ನು ಇಟ್ಟುಕೊಂಡು ಸಹ ವಿನಯ್​, ನಮ್ರತಾ, ಸ್ನೇಹಿತ್ ಅವರ ತಂಡವನ್ನು ಸುಲಭವಾಗಿ ಸೋಲಿಸಿದ್ದ ಡ್ರೋನ್ ಪ್ರತಾಪ್ (Drone Prathap), ಎರಡನೇ ಬಾರಿ ತಂಡದ ನಾಯಕ ಆದಾಗ ಹೀನಾಯ ಸೋಲು ಕಂಡಿದ್ದಾರೆ. ಎರಡನೇ ಬಾರಿ ಕ್ಯಾಪ್ಟನ್ ಆದ ಸಂದರ್ಭದಲ್ಲಿಯೇ ಕಾರ್ತಿಕ್ ಅನ್ನು ಹೊರಗಿಟ್ಟು ದೊಡ್ಡ ತಪ್ಪು ಮಾಡಿದ್ದ ಪ್ರತಾಪ್, ತಮ್ಮ ತಂಡವನ್ನು ತಾವೇ ದುರ್ಬಲ ಮಾಡಿಕೊಂಡರು. ಇದೇ ಕಾರಣಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಯ್ತು. ಪ್ರತಾಪ್​ರ ತಂಡ ಎದುರಾಳಿ ತಂಡಕ್ಕೆ ಸುಲಭ ತುತ್ತಾಯ್ತು.

ನಿನ್ನೆಯ ಎಪಿಸೋಡ್​ನಲ್ಲಿ ನಡೆದ ಟಾಸ್ಕ್​ಗಳಲ್ಲಿಯೂ ಸೋಲು ಕಂಡಿದ್ದ ಪ್ರತಾಪ್ ತಂಡಕ್ಕೆ ಇಂದು ಎರಡು ಟಾಸ್ಕ್​ಗಳು ಎದುರಾಯ್ತು. ಮೊದಲನೇಯದಾಗಿ ರಸಪ್ರಶ್ನೆ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದರು. ತಟ್ಟೆಯಲ್ಲಿರುವ ಕೇಕ್​ ಅನ್ನು ಪೂರ್ಣವಾಗಿ ತಿಂದು ಆ ತಟ್ಟೆಯೊಳಗೆ ಇರುವ ಪ್ರಶ್ನೆಯನ್ನು ತಮ್ಮ ತಂಡಕ್ಕೆ ಅಥವಾ ಎದುರಾಳಿ ತಂಡಕ್ಕೆ ಕೇಳಿ ಉತ್ತರ ಪಡೆಯಬೇಕಾಗಿತ್ತು. ಕೇಕ್ ಅನ್ನು ತಿಂದು ಪ್ರಶ್ನೆ ಕೇಳಲು ಮೈಖಲ್ ಹಾಗೂ ತುಕಾಲಿ ಹೋದರು. ಇದರಲ್ಲಿ ಮೈಖಲ್ ಬಹಳ ಬೇಗ ಪ್ಲೇಟ್ ಖಾಲಿ ಮಾಡಿ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಟಾಸ್ಕ್ ಅನ್ನು ಗೆದ್ದರು.

ಇದನ್ನೂ ಓದಿ:ನಂಬಿಸಿ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್? ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಔಟ್

ಅದಾದ ತುಸು ಕಷ್ಟದ ಟಾಸ್ಕ್ ಎದುರಾಯ್ತು. ತಂಡದ ನಾಲ್ಕು ಸದಸ್ಯರು ಕಾಲಿಗೆ ಹಗ್ಗ ಕಟ್ಟಿಕೊಂಡು ಒಟ್ಟಾಗಿ ಹೋಗಿ ಚೆಂಡನ್ನು ಸಂಗ್ರಹಿಸಿ ಅದನ್ನು ತಮಗೆ ಮೀಸಲಾದ ಬುಟ್ಟಿಯಲ್ಲಿ ಹಾಕಬೇಕಿತ್ತು. ದೈಹಿಕ ಬಲ ಬೇಡುವ ಈ ಟಾಸ್ಕ್​ನಲ್ಲಿ ಆರಂಭದಲ್ಲಿ ಪ್ರತಾಪ್ ತಂಡ ಎದುರಾಳಿ ತಂಡಕ್ಕೆ ಸ್ಪರ್ಧೆ ಒಡ್ಡಿದರಾದರೂ ಆ ಬಳಿಕ ವಿನಯ್, ಮೈಖಲ್, ಸ್ನೇಹಿತ್, ಸಂಗೀತಾರ ದೈಹಿಕ ಕ್ಷಮತೆ ಮುಂದೆ ನಿಲ್ಲಲಾಗಲಿಲ್ಲ. ಭಾರಿ ಅಂತರದಲ್ಲಿ ಪ್ರತಾಪ್​ರ ತಂಡವನ್ನು ಮೈಖಲ್ ತಂಡ ಸೋಲಿಸಿತು. ಆಟದ ವೇಳೆ ಸಿರಿ ಅವರಿಗೆ ತುಸು ಗಾಯವೂ ಆಯ್ತು. ಸ್ನೇಹಿತ್ ತೀರಾ ಹಿಂಸಾತ್ಮಕವಾಗಿ ಆಡುತ್ತಿದ್ದಾರೆ ಎಂದು ಉಸ್ತುವಾರಿ ಕಾರ್ತಿಕ್ ಬಳಿ ದೂರು ಸಹ ಹೇಳಿದರು.

ಟಾಸ್ಕ್​ಗಳೆಲ್ಲ ಮುಗಿದ ಬಳಿಕ ಅಂತಿಮವಾಗಿ ಕಾರ್ತಿಕ್​ರ ಉಸ್ತುವಾರಿ ಹೇಗಿತ್ತು ಎಂದು ಎಲ್ಲ ಅಭಿಪ್ರಾಯ ಕೇಳಲಾಯ್ತು. ಹೆಚ್ಚಿನ ಜನ ಕಾರ್ತಿಕ್​ರ ಉಸ್ತುವಾರಿ ಚೆನ್ನಾಗಿತ್ತು ಎಂದು ಹೇಳಿದ ಕಾರಣ ಅವರಿಗೂ ಸಹ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಭಾಗವಹಿಸುವ ಅವಕಾಶ ಲಭಿಸಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ