ಈ ಬಾರಿ ಇಬ್ಬರಿಗೆ ಸಿಗುತ್ತಾ ಬಿಗ್ ಬಾಸ್ ಟ್ರೋಫಿ: ಮೊದಲ ವಾರವೇ ಸಿಕ್ತು ಸೂಚನೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ 3ನೇ ವಾರವೇ ಒಂದು ಫಿನಾಲೆ ನಡೆಯಲಿದೆ. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಆ ಮೂಲಕ ಮೊದಲೇ ಸೂಚನೆ ನೀಡಲಾಗಿದೆ. 2 ಫಿನಾಲೆ ಇದ್ದ ಮೇಲೆ ಇಬ್ಬರು ವಿನ್ನರ್ ಕೂಡ ಇರಬಹುದು ಎಂದು ಬಿಗ್ ಬಾಸ್ ಹೇಳಿದ್ದಾರೆ.

ಪ್ರತಿ ಬಾರಿ ಬಿಗ್ ಬಾಸ್ ಆಟ ಒಂದೇ ರೀತಿ ಇರುವುದಿಲ್ಲ. ಪ್ರತಿ ವರ್ಷ ಕೂಡ ಆಟದ ವರಸೆ ಬದಲಾಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಆರಂಭ ಆಗಿದ್ದು ಮೊದಲ ವಾರವೇ ಹೊಸ ಹೊಸ ಟ್ವಿಸ್ಟ್ ನೀಡಲಾಗುತ್ತಿದೆ. ‘ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ’ ಎಂಬ ಥೀಮ್ನಲ್ಲಿ ಶೋ ಶುರುವಾಗಿದೆ. ಅದರಂತೆಯೇ ಆಟ ನಡೆಯುತ್ತಿದೆ. 2ನೇ ದಿನವೇ ಬಿಗ್ ಬಾಸ್ ಮನೆಯಲ್ಲಿ ಒಂದು ಘೋಷಣೆ ಮಾಡಲಾಗಿದೆ. ಈ ಬಾರಿ 2 ಫಿನಾಲೆ ಇರಲಿದೆ. ಇಬ್ಬರು ವಿನ್ನರ್ ಕೂಡ ಇರಬಹುದು ಎಂದು ಬಿಗ್ ಬಾಸ್ (Bigg Boss) ತಿಳಿಸಿದ್ದಾರೆ.
‘ಈ ಸೀಸನ್ ಯಾರು ಗೆಲ್ಲುತ್ತಾರೆ ಎಂಬುದನ್ನು ತಿಳಿಯಲು ನೂರು ದಿನಗಳ ಕಾಲ ಕಾಯಬೇಕಿಲ್ಲ. ಮೂರನೇ ವಾರದಲ್ಲೇ ಗೊತ್ತಾಗಿಬಿಡುತ್ತದೆ. ಮಿಂಚಿನ ಓಟದಂತೆ ವೇಗವಾಗಿ ಓಡುತ್ತಿರುವ ಈ ಸೀಸನ್ನಲ್ಲಿ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ನೀವು ಯಾರೂ ಈ ಮನೆಯಲ್ಲಿ ಶಾಶ್ವತ ಅಲ್ಲ, ಯಾರೊಬ್ಬರೂ ಸೇಫ್ ಅಲ್ಲ. ಯಾರು ಬೇಕಾದರೂ ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು, ಗುಂಪು ಗುಂಪಾಗಿಯೂ ಎಲಿಮಿನೇಟ್ ಆಗಬಹುದು’ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ.
‘ಈ ಎಲಿಮಿನೇಷನ್ ಭಯದಿಂದ ನೀವು ಮುಕ್ತರಾಗಬೇಕೆಂದರೆ, ಅದಕ್ಕೆ ಇರೋದು ಒಂದೇ ದಾರಿ – ನೀವು ಫೈನಲಿಸ್ಟ್ ಆಗೋದು. ಇಂದಿನಿಂದ ವಾರ ವಾರ ಬಿಗ್ ಬಾಸ್ ಸರಣಿ ಟಾಸ್ಕ್ಗಳನ್ನು ನೀಡಲಿದ್ದಾರೆ. ಪ್ರತಿವಾರದ ಅಂತ್ಯದಲ್ಲಿ ಸರಣಿ ಟಾಸ್ಕ್ ಗೆಲ್ಲುವವರು ಫೈನಲಿಸ್ಟ್ಗಳಾಗಿ ಆಯ್ಕೆ ಆಗುತ್ತಾರೆ. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲನೇ ಫಿನಾಲೆಯನ್ನು ಗೆಲ್ಲುತ್ತಾರೆ. ಅಲ್ಲಿಯವರೆಗೆ ಈ ಮನೆಗೆ ಕ್ಯಾಪ್ಟನ್ ಕೂಡ ಇರಲ್ಲ’ ಎಂದಿದ್ದಾರೆ ಬಿಗ್ ಬಾಸ್.
‘ಈ ಮುಂಚೆ ತಿಳಿಸಿದಂತೆ ಸೀಸನ್ 12 ಎಂದರೆ ಒಂದರ ವಿರುದ್ಧ ಎರಡು. ಡಬಲ್ ಟ್ವಿಸ್ಟ್ಗಳ ಸೀಸನ್ನಲ್ಲಿ ಫಿನಾಲೆ ಕೂಡ ಡಬಲ್. ಯಾರಿಗೆ ಗೊತ್ತು? ವಿನ್ನರ್ ಕೂಡ ಡಬಲ್ ಆಗಬಹುದು. ಮಿಂಚಿನ ಓಟ ಆರಂಭ ಆಗಿ 24 ಗಂಟೆಗಳೇ ಕಳೆದಿವೆ. ಆದರೆ ನೀವೆಲ್ಲ ಇನ್ನೂ ಈಗಷ್ಟೇ ಎಚ್ಚರಗೊಂಡು ಕಣ್ಣು ಉಜ್ಜಿಕೊಳ್ಳುತ್ತಾ, ಮೈ ಮುರಿಯುತ್ತ, ನಾನು ಎಲ್ಲಿದ್ದೇನೆ ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ’
ಇದನ್ನೂ ಓದಿ: ಪದೇ ಪದೇ ಟ್ವಿಸ್ಟ್ ನೀಡುತ್ತಿರುವ ಬಿಗ್ ಬಾಸ್: ಚಂದ್ರಪ್ರಭ, ಸತೀಶ್ ಸೀಕ್ರೆಟ್ ಬಯಲು
‘ಗೆಲ್ಲುವ ಆಸೆ ಇದ್ದರೆ ಮೈಕೊಡವಿ ಸಿದ್ಧರಾಗಿ. ಓಡಲಷ್ಟೇ ಅಲ್ಲ, ಗೆಲ್ಲಲು ಆರಂಭಿಸಿ. ಹೆಮ್ಮಾರಿ ಮಹೋತ್ಸವಕ್ಕೆ ನಿಮಗೆಲ್ಲ ಆತ್ಮೀಯ ಸ್ವಾಗತ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆ ಮೂಲಕ ಆಟಕ್ಕೆ ಚುರುಕು ಮುಟ್ಟಿಸಲಾಗಿದೆ. ಮೂರವೇ ವಾರ ಸಮೀಪಿಸಿದಾಗ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಸದ್ಯ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




