ಬೇರೆಯವರ ಜೊತೆ ನಮ್ರತಾ ಗೌಡ ಮದುವೆ ಫಿಕ್ಸ್ ಆದರೆ ಸ್ನೇಹಿತ್ ಹೀಗೆಲ್ಲ ಮಾಡ್ತಾರಾ?
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಬೆಳೆಯುವುದು ಸಹಜ. ಆದರೆ ಕೆಲವರ ಪ್ರೀತಿ ಕೇವಲ ಒನ್ ಸೈಡ್ ಆಗಿರುತ್ತದೆ. ಸದ್ಯಕ್ಕೆ ನಮ್ರತಾ ಗೌಡ ಅವರ ವಿಚಾರದಲ್ಲಿ ಸ್ನೇಹಿತ್ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಒಂದು ವೇಳೆ ನಮ್ರತಾಗೆ ಬೇರೆ ಯಾರದ್ದೋ ಜೊತೆ ಮದುವೆ ನಿಶ್ಚಯವಾದರೆ ಸ್ನೇಹಿತ್ ಹೇಗೆ ವರ್ತಿಸುತ್ತಾರೆ ಎಂಬುದನ್ನು ಸ್ವತಃ ನಮ್ರತಾ ನಟಿಸಿ ತೋರಿಸಿದ್ದಾರೆ.
ಬಿಗ್ ಬಾಸ್ ಕನ್ನಡ (Bigg Boss Kannada) ಶೋನಲ್ಲಿ ನಮ್ರತಾ ಗೌಡ ಮತ್ತು ಸ್ನೇಹಿತ್ ನಡುವೆ ಸ್ನೇಹ ಇದೆ. ಹೇಗಾದರೂ ಮಾಡಿ ನಮ್ರತಾ (Namratha Gowda) ಅವರ ಪ್ರೀತಿ ಪಡೆಯಬೇಕು ಎಂಬುದು ಸ್ನೇಹಿತ್ ಉದ್ದೇಶ. ಅದಕ್ಕಾಗಿ ಅವರು ಎಲ್ಲಿಲ್ಲದ ಕಸರತ್ತು ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ಎಪಿಸೋಡ್ನಲ್ಲಿ ಅವರು ನೇರವಾಗಿ ತಮ್ಮ ಫೀಲಿಂಗ್ಸ್ ಹೇಳಿಕೊಂಡಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಒಂದು ವೇಳೆ ನಮ್ರತಾ ಅವರಿಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆದರೆ ಸ್ನೇಹಿತ್ ಗೌಡ (Snehith Gowda) ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಸ್ವತಃ ನಮ್ರತಾ ಅವರೇ ನಟಿಸಿ ತೋರಿಸಬೇಕು ಎಂದು ಟಾಸ್ಕ್ ನೀಡಲಾಯಿತು. ಆ ಸನ್ನಿವೇಶ ಸಖತ್ ಫನ್ನಿ ಆಗಿತ್ತು.
ನಮ್ರತಾ ಮತ್ತು ಸ್ನೇಹಿತ್ ಅವರು ತಮ್ಮ ಪಾತ್ರಗಳನ್ನು ಅದಲು ಬದಲು ಮಾಡಿಕೊಂಡರು. ತಮಗೆ ಮದುವೆ ನಿಶ್ಚಯ ಆಗಿದೆ ಎಂಬುದನ್ನು ನಮ್ರತಾ ಬಂದು ಹೇಳಿದಾಗ ಸ್ನೇಹಿತ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ನಮ್ರತಾ ನಟಿಸಿ ತೋರಿಸಿದರು. ‘ಕಮಾನ್ ನಮ್ರತಾ… ಆರ್ ಯೂ ಸೀರಿಯಸ್? ಜೋಕ್ ಮಾಡುತ್ತಿಲ್ಲ ತಾನೆ’ ಎಂದು ಟೆನ್ಷನ್ ಮಾಡಿಕೊಂಡರು. ಅಷ್ಟೇ ಅಲ್ಲದೇ, ಅವರು ಗಳಗಳನೆ ಅತ್ತರು. ‘ನಿಮ್ಮನ್ನು ನಾನು ಅವರಿಗಿಂತಲೂ ಜಾಸ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಗೋಗರೆದರು.
ಇದನ್ನೂ ಓದಿ: ‘ವಿನಯ್ಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್ ಗೌಡ
ಬಿಗ್ ಮಾಸ್ ಮನೆಯ ಸದಸ್ಯರು ವಾರಕ್ಕೆ ಬೇಕಾಗುವಷ್ಟು ದಿನಸಿ ಪಡೆಯಲು ಈ ಮನರಂಜನೆಯ ಟಾಸ್ಕ್ ನೀಡಲಾಯಿತು. ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರು ಕಾರ್ತಿಕ್ ಹಾಗೂ ಸಂಗೀತಾ ರೀತಿ ನಟಿಸಿ ತೋರಿಸಿದರು. ವಿನಯ್ ಗೌಡ ಅವರು ಸಿಂಹದಂತೆ, ಅವಿನಾಶ್ ಕುದುರೆಯಂತೆ, ಸಂಗೀತಾ ನಾಯಿಮರಿಯಂತೆ, ತುಕಾಲಿ ಸಂತೋಷ್ ಚಿಂಪಾಂಜಿ ರೀತಿಯಲ್ಲಿ ನಟಿಸಿದರು. ಈ ಎಲ್ಲ ಕಾರಣಗಳಿಂದಾಗಿ ಈ ಸಂಚಿಕೆ ತಮಾಷೆಯಾಗಿ ಮೂಡಿಬಂತು.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ
ನಮ್ರತಾ ಅವರ ಬಗ್ಗೆ ಸ್ನೇಹಿತ್ಗೆ ಯಾವ ರೀತಿಯ ಫೀಲಿಂಗ್ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಕೆಲವೇ ದಿನಗಳ ಹಿಂದೆ ವಿನಯ್ ಬಳಿ ಹೋಗಿ ಸ್ನೇಹಿತ್ ಅವರು ಈ ಕುರಿತು ಮಾತನಾಡಿದ್ದರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ತುಂಬಾ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್ ಆಗಲಿಲ್ಲ. ಅದಾದ ಬಳಿಕ ಈಗಲೇ ಇಷ್ಟ ಆಗಿರುವುದು. ಬಿಗ್ ಬಾಸ್ ಮನೆಯೊಳಗೆ ಬಂದಾಗ ಒಬ್ಬರು ಈ ರೀತಿ ಇಷ್ಟ ಆಗುತ್ತಾರೆ ಅಂತ ನನಗೂ ನಂಬಿಕೆ ಇರಲಿಲ್ಲ. ಇದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್ಗಿಂತಲೂ ಒಂಚೂರು ಹೆಚ್ಚು ಅಟ್ಯಾಚ್ ಆಗಿದ್ದೀನಿ ಎಂಬುದು ನಾನು ಜೈಲಿಗೆ ಹೋದಾಗ ತಿಳಿಯಿತು’ ಎಂದು ಸ್ನೇಹಿತ್ ಗೌಡ ಅವರು ಹೇಳಿಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:43 pm, Mon, 4 December 23