ಹರ್ಷ ಹಾಗೂ ಭುವಿ ಸಂಬಂಧಕ್ಕೆ ಹುಳಿ ಹಿಂಡಿದ ವರು; ಮುಂದಿದೆ ಸಂಕಷ್ಟ
ಸದ್ಯ ರತ್ನಮಾಲಾ ಮೃತಪಟ್ಟಿರುವ ವಿಚಾರ ವೀಕ್ಷಕರಿಗೆ ಬೇಸರ ತರಿಸಿದೆ. ಈ ರೀತಿಯ ಟ್ವಿಸ್ಟ್ ನೀಡಬಾರದಿತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾ ಅಂತ್ಯ ಸಂಸ್ಕಾರ ಮಾಡಿ ಎಲ್ಲರೂ ಮನೆಗೆ ಬಂದಿದ್ದಾರೆ. ರತ್ನಮಾಲಾಳನ್ನು ಕಳೆದುಕೊಂಡ ನೋವು ಮಾಸಲಿಲ್ಲ. ಹರ್ಷ ಹಾಗೂ ಭುವಿಗೆ ದುಃಖ ಉಮ್ಮಳಿಸಿ ಬರುತ್ತಿದೆ. ಆದರೆ, ಕಣ್ಣೀರು ಹಾಕಲು ಸಾಧ್ಯವಾಗುತ್ತಿಲ್ಲ. ಸಾನಿಯಾ ಬೇಕೆಂದೇ ಜಗಳ ಮಾಡಲು ಬಂದಿದ್ದಾಳೆ. ಆದರೆ, ಹರ್ಷ ಶಾಂತಮೂರ್ತಿ ಆಗಿದ್ದಾನೆ. ಯಾರ ತಂಟೆ ತಕರಾರಿಗೂ ಹೋಗಬಾರದು ಎಂದು ಆತ ನಿರ್ಧರಿಸಿದಂತಿದೆ.
ಅಸಲಿ ಆಟ ಶುರು ಮಾಡಿದ ವರುಧಿನಿ
ವರುಧಿನಿಯ ಪಾತ್ರ ಒಂದು ರೀತಿಯಲ್ಲಿ ಸೈಕೋ ತರಹ ಇದೆ ಎಂಬುದು ವೀಕ್ಷಕರಿಗೆ ಯಾವಾಗಲೋ ತಿಳಿದು ಹೋಗಿದೆ. ಒಮ್ಮೊಮ್ಮೆ ಆಕೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ ಆಗುವುದಿಲ್ಲ. ಹರ್ಷನನ್ನು ಆಕೆ ಮೊದಲಿನಿಂದಲೂ ಪ್ರೀತಿಸುತ್ತಿದ್ದಳು. ಆದರೆ, ಹರ್ಷನ ಕಡೆಯಿಂದ ಆಕೆಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿಲ್ಲ. ಭುವಿಯ ಕಡೆ ಹರ್ಷ ವಾಲಿದ್ದ. ಹರ್ಷ ಹಾಗೂ ಭುವಿಯ ಮದುವೆ ನಿಲ್ಲಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನಪಟ್ಟಳು. ಆದರೆ, ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಆಕೆ ಕುತಂತ್ರ ಮಾಡಲು ಮುಂದಾದಳು.
ಭುವಿ ಹಾಗೂ ಹರ್ಷ ಖುಷಿಯಿಂದ ಇರಲು ಕೊಡಬಾರದು ಎಂದು ವರು ನಿರ್ಧರಿಸಿ ಆಗಿದೆ. ಅದಕ್ಕೆ ತಕ್ಕಂತೆ ಆಕೆ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ಆರಂಭದಲ್ಲಿ ಭುವಿಯನ್ನು ಕೊಲ್ಲಲು ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಇದಕ್ಕೆ ವರುಧಿನಿ ಕೂಡ ಸಾಥ್ ನೀಡಿದ್ದಳು. ಆದರೆ, ಅದು ವಿಫಲವಾಯಿತು. ಭುವಿ ಬದುಕಿದಳು. ಹರ್ಷ ಹಾಗೂ ಭುವಿ ಮದುವೆ ಕೂಡ ಆಯಿತು.
ಮದುವೆ ದಿನವೂ ಹರ್ಷನ ಬಿಟ್ಟುಕೊಡುವಂತೆ ವರುಧಿನಿ ಬೇಡಿಕೆ ಇಟ್ಟಿದ್ದಳು. ಆದರೆ, ಇದಕ್ಕೆ ಭುವಿ ನೋ ಎಂದಿದ್ದಳು. ಹರ್ಷನನ್ನೇ ಮದುವೆ ಆದಳು. ಈಗ ಅವಳಿಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ವರು ನಿರ್ಧರಿಸಿ ಆಗಿದೆ.
ರತ್ನಮಾಲಾ ನಿಧನ ಹೊಂದಿದ ನಂತರದಲ್ಲಿ ಹರ್ಷನಿಗೆ ಒಂಟಿ ಭಾವನೆ ಕಾಡಿದೆ. ಈ ಕಾರಣಕ್ಕೆ ಆತ ಕಚೇರಿಗೆ ತೆರಳಿದ್ದ. ಅಲ್ಲಿ ವರುಧಿನಿ ಬಳಿ ಆತ ಕಟುವಾಗೇ ನಡೆದುಕೊಂಡಿದ್ದಾನೆ. ಮೊಬೈಲ್ ಚಾರ್ಜ್ ಹಾಕುವಂತೆ ವರುಧಿನಿಗೆ ಹರ್ಷ ಮೊಬೈಲ್ ನೀಡಿದ್ದ. ಆಕೆ ಮೊಬೈಲ್ನ ಸ್ವಿಚ್ ಆಫ್ ಮಾಡಿದ್ದಾಳೆ.
ಅದೇ ಸಮಯಕ್ಕೆ ಭುವಿಯ ಆಗಮನ ಆಗಿದೆ. ಆಕೆ ಹರ್ಷನಿಗೆ ಕರೆ ಮಾಡಿದ್ದಾಳೆ. ಆದರೆ, ಮೊಬೈಲ್ ಸ್ವಿಚ್ಆಫ್ ಆಗಿತ್ತು. ಇನ್ನು, ವರು ಹೊರಗೆ ಬಂದು ನಕ್ಕಿ ಹೋಗಿದ್ದಾಳೆ. ಆದರೆ, ಅವಳು ಹರ್ಷನ ಬಳಿ ಭುವಿ ಬಂದಿರುವ ವಿಚಾರವನ್ನು ಹೇಳಲೇ ಇಲ್ಲ. ಇದರಿಂದ ಹರ್ಷ ಹಾಗೂ ಭುವಿ ಸಂಬಂಧಕ್ಕೆ ತೊಂದರೆ ಆಗುವ ಸೂಚನೆ ಸಿಕ್ಕಿದೆ.
ಹರ್ಷನಿಗೆ ಕೋಪ ಜಾಸ್ತಿ. ಸಣ್ಣ ವಿಚಾರಕ್ಕೂ ಆತ ಕೂಗಾಡುತ್ತಾನೆ. ಅನೇಕ ಸಂದರ್ಭಗಳಲ್ಲಿ ಯೋಚಿಸದೇ ಆತ ನಿರ್ಧಾರ ತೆಗೆದುಕೊಂಡ ಉದಾಹರಣೆ ಇದೆ. ಈಗ ವರುಧಿನಿ ಮಾಡುತ್ತಿರುವ ಸಂಚುಗಳು ಆತನ ಗಮನಕ್ಕೆ ಬರುತ್ತಿಲ್ಲ. ಇದರಿಂದ ಭುವಿ ಹಾಗೂ ಹರ್ಷನ ಮಧ್ಯೆ ಸಮಸ್ಯೆ ಉಂಟಾಗಬಹುದು.
ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರವನ್ನು ಲೀಕ್ ಮಾಡಿ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ. ಇದು ಯಶಸ್ವಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ರತ್ನಮಾಲಾ ಮೃತಪಟ್ಟಿರುವ ವಿಚಾರ ವೀಕ್ಷಕರಿಗೆ ಬೇಸರ ತರಿಸಿದೆ. ಈ ರೀತಿಯ ಟ್ವಿಸ್ಟ್ ನೀಡಬಾರದಿತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್.