‘ಕಾಮಿಡಿನೇ ನಿಮ್ಮ ಅಸ್ತ್ರ ಮಾಡಿಕೊಳ್ಳಬೇಡಿ, ವಿನಯ್ ಎಂಬ ದೀಪಕ್ಕೆ ಎಷ್ಟು ಎಣ್ಣೆ ಸುರಿತೀರಾ?’; ತುಕಾಲಿಗೆ ಸುದೀಪ್ ಮಂಗಳಾರತಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಆರಂಭದಲ್ಲಿ ಸಂತೋಷ್ ಅವರು ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರು. ಮೊದಲ ವೀಕೆಂಡ್​ನಲ್ಲಿ ಸಂತೋಷ್ ಅವರಿಗೆ ಈ ವಿಚಾರದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆದರೂ ಅವರು ತಮ್ಮನ್ನು ತಿದ್ದಿಕೊಳ್ಳಲಿಲ್ಲ.

‘ಕಾಮಿಡಿನೇ ನಿಮ್ಮ ಅಸ್ತ್ರ ಮಾಡಿಕೊಳ್ಳಬೇಡಿ, ವಿನಯ್ ಎಂಬ ದೀಪಕ್ಕೆ ಎಷ್ಟು ಎಣ್ಣೆ ಸುರಿತೀರಾ?’; ತುಕಾಲಿಗೆ ಸುದೀಪ್ ಮಂಗಳಾರತಿ
ಸಂತೋಷ್-ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on:Nov 05, 2023 | 6:36 AM

ತುಕಾಲಿ ಸಂತೋಷ್ (Tukali Santosh) ಅವರು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿ ಅವರು ಮನರಂಜನೆ ನೀಡಬಹುದು ಎಂದು ಪ್ರೇಕ್ಷಕರು ಊಹಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ವಿನಯ್ ಅವರ ಮನ ಒಲಿಸುವುದರಲ್ಲೇ ಸಂತೋಷ್ ಬ್ಯುಸಿ ಆದರು. ಮನೆಯ ಸ್ಪರ್ಧಿಗಳ ಮಿಮಿಕ್ರಿ ಮಾಡಲು ಹೋಗಿ ಅವರಿಗೆ ಬೇಸರ ಆಗುವಂತೆ ಮಾಡಿದರು. ಏನೇ ಹೇಳಿದರೂ ಕಾಮಿಡಿಗೆ ಹೇಳಿದೆ ಎನ್ನುತ್ತಿದ್ದರು. ಶನಿವಾರದ (ನವೆಂಬರ್ 4) ಎಪಿಸೋಡ್​ನಲ್ಲಿ ನಗು ನಗುತ್ತಾ ಸುದೀಪ್ ಎದುರು ಸಂತೋಷ್ ಇದೇ ಮಾತನ್ನೇ ಹೇಳಿದ್ದಾರೆ. ಆದರೆ, ಸುದೀಪ್ ಇದನ್ನು ಹಾಸ್ಯದ ರೂಪದಲ್ಲಿ ಸ್ವೀಕರಿಸಲಿಲ್ಲ. ಅವರು ಕೊಟ್ಟ ತಿರುಗೇಟಿಗೆ ತುಕಾಲಿ ಸಂತೋಷ್ ತಲೆತಗ್ಗಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಆರಂಭದಲ್ಲಿ ಸಂತೋಷ್ ಅವರು ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರು. ಮೊದಲ ವೀಕೆಂಡ್​ನಲ್ಲಿ ಸಂತೋಷ್ ಅವರಿಗೆ ಈ ವಿಚಾರದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆದರೂ ಅವರು ತಮ್ಮನ್ನು ತಿದ್ದಿಕೊಳ್ಳಲಿಲ್ಲ. ಪ್ರತಾಪ್ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಹೇಳುತ್ತಲೇ ಅವರ ಬಗ್ಗೆ ಗಾಸಿಪ್ ಮಾಡುತ್ತಿದ್ದರು.

ಈ ವಾರ ಅವರು ಭಾಗ್ಯಶ್ರೀಗೆ ಕಣ್ಣೀರು ಹಾಕಿಸಿದ್ದರು. ಸ್ನೇಹಿತ್ ಅವರನ್ನು ಭಾಗ್ಯಶ್ರೀ ನಾಮಿನೇಟ್ ಮಾಡಿದ ಏಕೈಕ ಕಾರಣಕ್ಕೆ ಸಂತೋಷ್ ಅವರು ಭಾಗಶ್ರೀನ ಟಾರ್ಗೆಟ್ ಮಾಡಿದ್ದರು. ಈ ವಿಚಾರದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ನೀವು ಯಾವಾಗಲೂ ಹೇಳ್ತೀರಲ್ಲ. ತುಂಬಾ ತಡೆದಿಟ್ಟಕೊಂಡಿದ್ದೀನಿ ಅಂತ. ಅದೇನು ಅಂತ ಹೇಳಿ. ಎರಡು ನಿಮಿಷ ನಿಮಗೆ ಸಮಯಾವಕಾಶ ಕೊಡ್ತೀನಿ’ ಎಂದರು ಸುದೀಪ್. ಆಗ ಸಂತೋಷ್ ಅವರು ‘ಇದನ್ನು ಕಾಮಿಡಿಗೆ ಹೇಳಿದೆ’ ಎಂದು ನಕ್ಕರು. ‘ಕಾಮಿಡಿ ಒಂದು ಅಸ್ತ್ರ ಮಾಡ್ಕೋಬೇಡಿ. ನೀವು ಕಾಮಿಡಿಯನ್ ಆಗಿರುವುದೇ ನಿಮಗೆ ಒಂದು ಅಡ್ವಾಂಟೇಜ್ ಆಗಲು ಸಾಧ್ಯವಿಲ್ಲ’ ಎಂದು ಗಂಭೀರವಾಗಿಯೇ ಹೇಳಿದರು ಸುದೀಪ್.

ಎಲ್ಲಾ ವಿಚಾರದಲ್ಲೂ ವಿನಯ್​​ನ ಬೆಂಬಲಿಸುತ್ತಾ ಬರುತ್ತಾರೆ ಸಂತೋಷ್ ಅವರು. ಇದಕ್ಕೆ ಸುದೀಪ್ ನೇರವಾಗಿಯೇ ತಿರುಗೇಟು ಕೊಟ್ಟಿದ್ದಾರೆ. ‘ನಿಮ್ಮ ರೂಂನಲ್ಲಿ ಒಂದು ದೀಪ ಇರುತ್ತದೆ. ಆ ದೀಪವನ್ನು ವಿನಯ್ ಎಂದುಕೊಳ್ಳೋಣ. ಅದಕ್ಕೆ ಎಷ್ಟು ಎಣ್ಣೆ ಹಾಕ್ತೀರಾ? ಎಣ್ಣೆ ಹಾಕಿದರೆ ನಮ್ಮ ಮೇಲೆ ಬೆಳಕು ಬರುತ್ತದೆ ಎಂದಿರಬೇಕು’ ಎಂದರು ಸುದೀಪ್.

ಇದನ್ನೂ ಓದಿ: ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು

ಕಿಚ್ಚ ಸುದೀಪ್ ಅವರು ಹೇಳುತ್ತಿದ್ದ ಪ್ರತಿ ಮಾತು ತುಕಾಲಿ ಸಂತೋಷ್ ಅವರನ್ನು ತಿವಿದಂತಿತ್ತು. ಈ ಕಾರಣಕ್ಕೆ ಅವರು ತಲೆತಗ್ಗಿಸಿಬಿಟ್ಟರು. ‘ಮಿಕ್ಕಿದವರು ಮಾತನಾಡಿದರೆ ತಪ್ಪು ನೀವು ಮಾತನಾಡಿದರೆ ತಪ್ಪಲ್ಲ ಅಲ್ಲವೇ’ ಎಂದರು ಸುದೀಪ್. ಆಗಲೂ ಸಂತೋಷ್ ಮುಖ ಎತ್ತಲಿಲ್ಲ. ‘ತಲೆ ಎತ್ತಿ ಮಾತನಾಡಿ, ನೋಡೋಕೆ ಚೆನ್ನಾಗಿರುತ್ತದೆ’ ಎಂದರು ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:48 am, Sun, 5 November 23