ಇದೆಂಥಾ ಬದಲಾವಣೆ; ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹಾಡಿ ಹೊಗಳಿದ ಮಾಳು
ಬಿಗ್ ಬಾಸ್ ಕನ್ನಡ 12ರಿಂದ ಎಲಿಮಿನೇಟ್ ಆದ ಮಾಳು ನಿಪನಾಳ, ಮೊದಲು 'ಯಾರೇ ಗೆದ್ದರೂ ಒಪ್ಪಲ್ಲ' ಎಂದಿದ್ದರು. ಆದರೆ ಈಗ ಅವರ ಅಭಿಪ್ರಾಯ ಬದಲಾಗಿದೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ 'ಗಿಲ್ಲಿ ಕಪ್ ಗೆಲ್ಲಬಹುದು' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಗಿಲ್ಲಿ ಹವಾ ಅರಿತು ಮಾಳು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮೂರು ತಿಂಗಳು ಇದ್ದ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿ ಹೊರ ಬಂದರು. ಅವರು ಈಗ ಊರಿಗೆ ತೆರಳಿದ್ದಾರೆ. ಅಲ್ಲಿಯೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಮೊದಲು ಯಾರು ಗೆದ್ದರೂ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದ ಅವರು ಈಗ, ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
ಈ ಮೊದಲು ಟಿವಿ9 ಕನ್ನಡದ ಜೊತೆ ಮಾತನಾಡಿದ್ದ ಮಾಳು ಅವರು, ‘ಈ ಸೀಸನ್ ಅಲ್ಲಿ ಯಾರೇ ಗೆದ್ದರೂ ಅದನ್ನು ಒಪ್ಪಿಕೊಳ್ಳೋದಿಲ್ಲ’ ಎಂದು ಹೇಳಿದ್ದರು. ತಾವೇ ಕಪ್ ಗೆಲ್ಲುತ್ತೇನೆ ಎಂಬ ನಂಬಿಕೆಯಲ್ಲಿ ಇದ್ದ ಅವರು, ‘ಮನೆಯಲ್ಲಿರೋ ಯಾರಿಗೂ ಕಪ್ ಗೆಲ್ಲಲು ಅರ್ಹತೆ ಇಲ್ಲ’ ಎಂದು ನೇರವಾಗಿ ಹೇಳಿದ್ದರು. ಅವರು ಮಾತು ಚರ್ಚೆಗೆ ಕಾರಣ ಆಗಿತ್ತು.
ಪ್ರತಿ ಸಂದರ್ಶನದಲ್ಲಿ ಮಾತನಾಡುವಾಗ, ‘ಕಪ್ ಯಾರು ಗೆಲ್ತಾರೆ’ ಎಂದು ಕೇಳಿದಾಗ ಅವರು ಇದಕ್ಕೆ ಸೂಕ್ತ ಉತ್ತರ ನೀಡಿರಲಿಲ್ಲ. ‘ಯಾರು ಗೆಲ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏನು ಬೇಕಿದ್ದರೂ ಆಗಬಹುದು’ ಎಂದು ಉತ್ತರ ನೀಡಿದ್ದರು. ಈಗ ಮಾಳು ಅವರು ಬದಲಾಗಿದ್ದಾರೆ. ಗಿಲ್ಲಿ ಕಪ್ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.
ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಳು, ‘ನಮ್ಮ ಇಬ್ಬರ ಮಧ್ಯೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ. ಇಬ್ಬರ ಮಧ್ಯೆ ಹೋಲಿಕೆ ಸಾಧ್ಯವಿಲ್ಲ. ಗಿಲ್ಲಿ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ. ಟಾಸ್ಕ್ ಚೆನ್ನಾಗಿ ಆಡಲ್ಲ ಅನ್ನೋದಷ್ಟೇ ನನಗೆ ಅವರಲ್ಲಿ ಕಂಡ ಕೊರತೆ. ಅವರು ತಪ್ಪು ತಿದ್ದುಕೊಂಡರೆ ಫಿನಾಲೆ ತಲುಪಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೀ ಕೊಡೋದ್ರಲ್ಲಿ ಮಾಸ್ಟರ್; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ ಇದಕ್ಕೆ ನಾನಾ ರೀತಿಯ ಕಮೆಂಟ್ ಬಂದಿದೆ. ‘ಗಿಲ್ಲಿ ಹವಾ ಏನು ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾಳು ಬದಲಾಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗೆ ಮಾಳು ವೇದಿಕೆ ಏರಿದಾಗ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದರು. ಇದರಿಂದ ಅವರಿಗೆ ಮುಜುಗರ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




