‘ಸಿರಿ ಕನ್ನಡ’ದಲ್ಲಿ ‘ಮತ್ತೆ ಮಾಯಾಮೃಗ’; ಅಕ್ಟೋಬರ್ 31ರಿಂದ ಪ್ರಸಾರ ಕಾಣಲಿದೆ ಟಿ.ಎನ್. ಸೀತಾರಾಮ್ ಧಾರಾವಾಹಿ
‘ಮತ್ತೆ ಮಾಯಾಮೃಗ’ ಧಾರಾವಾಹಿ ಅಕ್ಟೋಬರ್ 31ರಿಂದ ‘ಸಿರಿ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಈ ಸೀರಿಯಲ್ ಪ್ರಸಾರ ಕಾಣಲಿದೆ.
‘ಮಾಯಮೃಗ’ ಧಾರಾವಾಹಿ (Mayamruga Serial) ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿತ್ತು. ಈ ಧಾರಾವಾಹಿಗೆ ಎರಡು ದಶಕಗಳ ಬಳಿಕ ಸೀಕ್ವೆಲ್ ಬರುತ್ತಿದೆ. ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಬರೋದು ಸರ್ವೇ ಸಾಮಾನ್ಯ. ಆದರೆ ಕಿರುತೆರೆಯಲ್ಲಿ ಈ ರೀತಿಯ ಪ್ರಯತ್ನಗಳು ಕಡಿಮೆ. ಆದರೆ, ಸೀತಾರಾಮ್ (TN Seetharam) ಅವರು ಈ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬರೋಬ್ಬರಿ 24 ವರ್ಷಗಳ ಬಳಿಕ ‘ಮಾಯಮೃಗ’ ಧಾರಾವಾಹಿಗೆ ಅವರು ಸೀಕ್ವೆಲ್ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಧಾರಾವಾಹಿ ಎಲ್ಲಿ, ಯಾವಾಗ ಪ್ರಸಾರ ಕಾಣಲಿದೆ ಎಂಬ ಮಾಹಿತಿ ನೀಡಿದ್ದಾರೆ ಟಿ.ಎನ್. ಸೀತಾರಾಮ್.
‘ಮತ್ತೆ ಮಾಯಾಮೃಗ’ ಧಾರಾವಾಹಿ ಅಕ್ಟೋಬರ್ 31ರಿಂದ ‘ಸಿರಿ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಈ ಸೀರಿಯಲ್ ಪ್ರಸಾರ ಕಾಣಲಿದೆ. ಈ ಧಾರಾವಾಹಿಯ ಪ್ರಯತ್ನ ಆರಂಭ ಆಗಿದ್ದು ಹೇಗೆ ಎಂಬ ಬಗ್ಗೆ ಸೀತಾರಾಮ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಸಿರಿ ಕನ್ನಡ’ ವಾಹಿನಿಯ ಮುಖ್ಯಸ್ಥರಾದ ಸಂಜಯ್ ಶಿಂಧೆ ಅವರು ಸೀತಾರಾಮ್ ಅವರನ್ನು ಭೇಟಿ ಮಾಡಿ, ‘ಮಾಯಾಮೃಗ’ಕ್ಕೆ ಸೀಕ್ವೆಲ್ ಬಗ್ಗೆ ಚರ್ಚೆ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ಸೀತಾರಾಮ್, ‘ನಮ್ಮ ವಾಹಿನಿಗಾಗಿ ಒಂದು ಧಾರಾವಾಹಿ ಮಾಡಿ ಎಂದು ಸಂಜಯ್ ಕೇಳಿದರು. ನಾನು ‘ಮತ್ತೆ ಮಾಯಾಮೃಗ’ ಮಾಡೋಣ ಎಂದೆ. ಅವರು ಖುಷಿಯಿಂದ ಒಪ್ಪಿಕೊಂಡರು. ಈ ಮೊದಲು ನಿರ್ದೇಶನ ವಿಭಾಗದಲ್ಲಿ ನಾನು, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇದ್ದೆವು. ಈಗಲೂ ನಾವು ಮೂವರು ಸೇರಿ ಈ ಧಾರಾವಾಹಿ ನಿರ್ದೇಶಿಸುತ್ತಿದ್ದೇವೆ’ ಎಂದಿದ್ದಾರೆ ಸೀತಾರಾಮ್.
‘ಕಥಾ ವಿಸ್ತರಣೆಯಲ್ಲಿ ನನ್ನ ಮಗಳು ಅಶ್ವಿನಿ ಹಾಗೂ ಪ್ರಹ್ಲಾದ್ ನಮ್ಮೊಂದಿಗಿದ್ದಾರೆ. ಎರಡು ದಶಕಗಳಲ್ಲಿ ಸಾಕಷ್ಟು ಬದಲಾಗಿದೆ. ನಾನು ಸೇರಿದಂತೆ ಹಲವರಿಗೆ ವಯಸ್ಸಾಗಿದೆ. ‘ಮಾಯಾಮೃಗ’ದ ಅನೇಕ ಕಲಾವಿದರು ನಮ್ಮೊಂದಿಗಿಲ್ಲ. ಹಳೆಯ ಕಲಾವಿದರು ಹಾಗೂ ಈಗಿನ ಹೊಸ ಕಲಾವಿದರ ಸಮಾಗಮದಲ್ಲಿ ‘ಮತ್ತೆ ಮಾಯಾಮೃಗ’ ಮೂಡಿಬರಲಿದೆ’ ಎಂದು ಟಿ.ಎನ್ ಸೀತಾರಾಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್; ಈ ಬಾರಿ ಟಿ.ಎನ್. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?
‘ಮಾಯಾಮೃಗ’ ಧಾರಾವಾಹಿಯಲ್ಲಿ ಇದ್ದ ಪಾತ್ರಗಳ ಜತೆಗೆ ಹೊಸ ಜನರೇಷನ್ ಕಥೆ ಹೇಳಲು ಹೊಸ ಪಾತ್ರಗಳು ಸೇರ್ಪಡೆ ಆಗಲಿವೆ. ಸೀತಾರಾಮ್ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ.
Published On - 5:03 pm, Fri, 28 October 22