ನಟ ಸಲ್ಮಾನ್ ಖಾನ್ (Salman Khan) ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ನಿರೂಪಕನಾಗಿಯೂ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ನಿರೂಪಣೆ ಮಾಡುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕ ಸೀಸನ್ಗಳಿಂದ ಅವರೇ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡು ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ (Bigg Boss 16) ಆರಂಭ ಆಗಲಿದೆ. ಈ ಹೊಸ ಆವೃತ್ತಿಗಾಗಿ ಸಲ್ಮಾನ್ ಖಾನ್ ಅವರು ಬರೋಬ್ಬರಿ 1000 ಕೋಟಿ ರೂಪಾಯಿ ಸಂಭಾವನೆ (Salman Khan Remuneration) ಕೇಳಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ವಾಹಿನಿಯವರು ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ‘ಡಿಎನ್ಎ’ ವರದಿ ಮಾಡಿದೆ.
ಮೂಲಗಳ ಪ್ರಕಾರ, ಕಳೆದ ಸೀಸನ್ನಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಿರೂಪಣೆಗೆ 350 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ಈ ವರ್ಷ ಅದನ್ನು ಮೂರು ಪಟ್ಟು ಹೆಚ್ಚು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಗಾಸಿಪ್ ಮಂದಿಯ ಮಾತು. ಆದರೆ ‘ಕಲರ್ಸ್’ ವಾಹಿನಿಯವರು ಸಾವಿರ ಕೋಟಿ ರೂಪಾಯಿ ಸಂಭಾವನೆ ನೀಡಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣದಿಂದ ಅಷ್ಟು ಸಂಬಳ ನೀಡಲು ಸಾಧ್ಯವಿಲ್ಲ ಎಂದಿದ್ದಾರಂತೆ.
ವಾಹಿನಿಯವರು ನೋ ಎಂದಮೇಲೆ ಸಲ್ಮಾನ್ ಖಾನ್ ಅವರ ಮುಂದಿನ ನಿರ್ಧಾರ ಏನು? ಆ ಬಗ್ಗೆಯೂ ಗುಸುಗುಸು ಕೇಳಿಬಂದಿದೆ. ಸದ್ಯದ ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ಸಂಭಾವನೆಯಲ್ಲಿ ಇನ್ನಷ್ಟು ಕಡಿತಗೊಳಿಸಲು ವಾಹಿನಿಯವರು ನಿರ್ಧರಿಸಿದ್ದಾರೆ. ಹಾಗಾಗಿ ಈ ಹಿಂದಿನ ಸೀಸನ್ಗಿಂತಲೂ ಕಡಿಮೆ ಸಂಭಾವನೆ ಪಡೆದುಕೊಂಡು ಶೋ ನಡೆಸಿಕೊಡಲು ಸಲ್ಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ.
ಈ ಸಂಖ್ಯೆಗಳ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಪ್ರಕಟ ಆಗಿಲ್ಲ. ಹೊಸ ಸೀಸನ್ ಯಾವಾಗ ಆರಂಭ ಆಗಲಿದೆ ಎಂಬುದು ಕೂಡ ತಿಳಿದುಬಂದಿಲ್ಲ. ಪ್ರೇಕ್ಷಕರ ಊಹೆಯ ಪ್ರಕಾರ, ಅಕ್ಟೋಬರ್ 1ರಂದು ‘ಬಿಗ್ ಬಾಸ್ ಹಿಂದಿ ಸೀಸನ್ 16’ ಪ್ರಾರಂಭ ಆಗಲಿದೆ. ಪ್ರಸ್ತುತ ‘ಕಲರ್ಸ್’ ವಾಹಿನಿಯಲ್ಲಿ ‘ಖತ್ರೋಂಕಿ ಕಿಲಾಡಿ 12’ ಶೋ ಪ್ರಸಾರ ಆಗುತ್ತಿದೆ. ಆ ಕಾರ್ಯಕ್ರಮ ಸೆಪ್ಟೆಂಬರ್ 25ಕ್ಕೆ ಅಂತ್ಯವಾಗಲಿದೆ. ಆ ನಂತರವೇ ಬಿಗ್ ಬಾಸ್ ಹೊಸ ಸೀಸನ್ ಶುರುವಾಲಿದೆ.
ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ಪ್ರಸಾರ ಆಯಿತು. ಅದನ್ನು ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆ ಕಾರ್ಯಕ್ರಮದಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಂದಿಲ್ಲ ಎಂಬ ಮಾತಿದೆ. ಆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.