Vaishali Thakkar: ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆ; ಮೃತ ದೇಹದ ಪಕ್ಕವೇ ಸಿಕ್ತು ಡೆತ್ ನೋಟ್
Vaishali Thakkar Suicide: ಕಳೆದ ವರ್ಷ ಈ ನಟಿಯ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ನೋವಿನ ಸಂಗತಿ. ಡೆತ್ ನೋಟ್ ಸಿಕ್ಕಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಕಿರುತೆರೆ ಕಲಾವಿದೆ ವೈಶಾಲಿ ಠಕ್ಕರ್ (Vaishali Thakkar) ಅವರು ಇಂದು (ಅ.16) ನಿಧನರಾಗಿದ್ದಾರೆ. ಇಂದೋರ್ನ ಅವರ ನಿವಾಸದಲ್ಲಿ ಶವ ಪತ್ತೆ ಆಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಕಾಣಿಸಿಕೊಂಡಿದ್ದು, ಆತ್ಮಹತ್ಯೆ (Vaishali Thakkar Suicide) ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶವದ ಪಕ್ಕದಲ್ಲೇ ಡೆತ್ ನೋಟ್ ಕೂಡ ಸಿಕ್ಕಿದೆ. ಈ ಘಟನೆಗೆ ಸಂಬಂಧಿಸಿದಂತೆ ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ವೈಶಾಲಿ ಠಕ್ಕರ್ ಅವರು ಇಂದೋರ್ನಲ್ಲಿ ವಾಸಿಸುತ್ತಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬದವರಿಗೆ, ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
ವೈಶಾಲಿ ಠಕ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಕೆಲವೇ ದಿನಗಳ ಹಿಂದೆ ಅವರು ಇನ್ಸ್ಟಾಗ್ರಾಮ್ನಲ್ಲಿ ಖುಷಿಖುಷಿಯಾಗಿ ಇರುವಂತಹ ರೀಲ್ಸ್ ಹಂಚಿಕೊಂಡಿದ್ದರು. ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬ ಪ್ರಶ್ನೆ ಮೂಡಿದೆ. ಪೊಲೀಸರ ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ವೈಶಾಲಿ ಸಾವಿನಿಂದ ಹಿಂದಿ ಕಿರುತೆರೆ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ವೈಶಾಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಅವರು ಅಂಜಲಿ ಭಾರದ್ವಾಜ್ ಎಂಬ ಪಾತ್ರ ಮಾಡಿದ್ದರು. ‘ಸೂಪರ್ ಸಿಸ್ಟರ್ಸ್’ ಧಾರಾವಾಹಿಯಲ್ಲಿ ಶಿವಾನಿ ಶರ್ಮಾ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದರು. ‘ಮನಮೋಹಿನಿ 2’ ಸೀರಿಯಲ್ನಲ್ಲಿ ಅವರು ಮಾಡಿದ್ದ ಅನನ್ಯಾ ಮಿಶ್ರಾ ಎಂಬ ಪಾತ್ರ ಕೂಡ ಫೇಮಸ್ ಆಗಿತ್ತು. ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್ ನಟಿಸಿದ್ದರು. ಅಭಿಮಾನಿಗಳು ವೈಶಾಲಿ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಕುಟುಂಬದವರಿಗೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ವೈಶಾಲಿ ಠಕ್ಕರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.
ಮುರಿದು ಬಿತ್ತಿತ್ತು ಮದುವೆ:
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2021ರಲ್ಲಿ ವೈಶಾಲಿ ಠಕ್ಕರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಡಾ. ಅಭಿನಂದನ್ ಸಿಂಗ್ ಎಂಬುಬವರ ಜೊತೆ ಅವರ ನಿಶ್ಚಿತಾರ್ಥ ನೆರವೇರಿತ್ತು. ಅದರ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೆಲವು ದಿನಗಳ ನಂತರ ಆ ಎಂಗೇಜ್ಮೆಂಟ್ ಮುರಿದುಬಿತ್ತು ಎಂದು ಅವರು ಹೇಳಿದ್ದರು. ಬಳಿಕ ವಿಡಿಯೋವನ್ನೂ ಡಿಲೀಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Sun, 16 October 22