AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ಗೆ ಜೋಕರ್​ ಎಂದ ಬಾಲಿವುಡ್​ ನಟನ ವಿರುದ್ಧ ಕಲಾವಿದರ ಸಂಘದಿಂದ ದೀರ್ಘ ಪತ್ರ

ಪ್ರಭಾಸ್​ ಅವರ ಪರವಾಗಿ ಕಲಾವಿದರ ಸಂಘದವರು ನಿಂತುಕೊಂಡಿದ್ದಾರೆ. ಆ ಮೂಲಕ ಟಾಲಿವುಡ್​ ಮಂದಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಟ ಅರ್ಷದ್​ ವಾರ್ಸಿ ಅವರು ಪ್ರಭಾಸ್​ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ತೆಲುಗು ಕಲಾವಿದರ ಸಂಘವು ಖಂಡಿಸಿದೆ. ಅಲ್ಲದೇ ಈ ಬಗ್ಗೆ ಸಂಘದ ಅಧ್ಯಕ್ಷ ವಿಷ್ಣು ಮಂಚು ಅವರು ಸುದೀರ್ಘವಾದ ಪತ್ರವನ್ನು ಬರೆದಿದ್ದಾರೆ.

ಪ್ರಭಾಸ್​ಗೆ ಜೋಕರ್​ ಎಂದ ಬಾಲಿವುಡ್​ ನಟನ ವಿರುದ್ಧ ಕಲಾವಿದರ ಸಂಘದಿಂದ ದೀರ್ಘ ಪತ್ರ
ಅರ್ಷದ್​ ವಾರ್ಸಿ, ಪ್ರಭಾಸ್​
ಮದನ್​ ಕುಮಾರ್​
|

Updated on: Aug 23, 2024 | 5:23 PM

Share

ನಟ ಪ್ರಭಾಸ್​ ಅವರ ಅಭಿಮಾನಿಗಳ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಬಾಲಿವುಡ್​ ನಟ ಅರ್ಷದ್​ ವಾರ್ಸಿ ಅವರು ಇತ್ತೀಚೆಗೆ ಮಾತನಾಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್​ ಜೋಕರ್​ ರೀತಿ ಕಾಣುತ್ತಾರೆ ಎಂದು ಅರ್ಷದ್​ ವಾರ್ಸಿ ಹೇಳಿದ್ದನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಇಡೀ ತೆಲುಗು ಸಿನಿಮಾ ಕಲಾವಿದರ ಸಂಘ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಅರ್ಷದ್​ ವಾರ್ಸಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ‘ಹಿಂದಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘ’ಕ್ಕೆ ತೆಲುಗು ಕಲಾವಿದರ ಸಂಘದಿಂದ ಪತ್ರ ಬರೆಯಲಾಗಿದೆ.

ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ವಿಷ್ಣು ಮಂಜು ಅವರು ಈ ಪತ್ರ ಬರೆದಿದ್ದಾರೆ. ಹಿಂದಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷೆ ಪೂನಂ ದಿಲೋನ್​ ಅವರಿಗೆ ಪತ್ರವನ್ನು ಬರೆಯಲಾಗಿದೆ. ‘ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇದು ಮುಖ್ಯ ವಿಚಾರವಾಗಿದೆ’ ಎಂದು ವಿಷ್ಣು ಮಂಚು ಅವರು ಪತ್ರ ಆರಂಭಿಸಿದ್ದಾರೆ. ಅದರ ಪ್ರತಿ ಕೂಡ ಮಾಧ್ಯಮಗಳಿಗೆ ಲಭ್ಯವಾಗಿದೆ.

‘ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅರ್ಷದ್​ ವಾರ್ಸಿ ಅವರು ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ನಾನು ಗೌರವಿಸುತ್ತೇವೆ. ಆದರೆ, ಅವರು ಪ್ರಭಾಸ್​ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದರ ಬಗ್ಗೆ ವಿಷಾದವಿದೆ. ತೆಲುಗು ಚಿತ್ರರಂಗದ ಅನೇಕರಿಗೆ ಮತ್ತು ಪ್ರಭಾಸ್​ ಅವರ ಅಭಿಮಾನಿಗಳಿಗೆ ಈ ಹೇಳಿಕೆಯಿಂದ ನೋವಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಇಂದಿನ ಸೋಶಿಯಲ್​ ಮೀಡಿಯಾ ಯುಗದಲ್ಲಿ ಎಲ್ಲವೂ ವೇಗವಾಗಿ ಹಬ್ಬುತ್ತದೆ ಮತ್ತು ಚರ್ಚೆಗೆ ಕಾರಣವಾಗುತ್ತದೆ. ಸೆಲೆಬ್ರಿಟಿಗಳಾದ ನಾವು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಪದಗಳಿಗೆ ಶಕ್ತಿ ಇದೆ. ಅವು ಸಂಬಂಧವನ್ನು ಬೆಳೆಸಬಹುದು, ಮುರಿಯಲೂಬಹುದು. ಅರ್ಷದ್​ ವಾರ್ಸಿ ಅವರ ಮಾತುಗಳಿಂದ ಅನಗತ್ಯವಾದ ನೆಗೆಟಿವಿಟಿ ಹಬ್ಬಿದೆ’ ಎಂದು ವಿಷ್ಣು ಮಂಚು ಅವರು ಬರೆದಿದ್ದಾರೆ.

ಇದನ್ನೂ ಓದಿ: ‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ

‘ಮುಂದಿನ ದಿನಗಳಲ್ಲಿ ಯಾವುದೇ ಕಲಾವಿದರ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು ಎಂದು ಅರ್ಷದ್​ ವಾರ್ಸಿ ಅವರಿಗೆ ತಿಳಿಸಿ. ಪ್ರದೇಶವಾರು ಭೇದ ಇಲ್ಲದೇ ನಾವು ಪರಸ್ಪರ ಗೌರವ ಹೊಂದಿರಬೇಕು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ನಮ್ಮ ಶಕ್ತಿಯೇ ಒಗ್ಗಟ್ಟು. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More