‘ಟಾಕ್ಸಿಕ್’: ತೆಲುಗು ರಾಜ್ಯಗಳ ವಿತರಣೆ ಹಕ್ಕು ಮಾರಾಟ: ಬೃಹತ್ ಮೊತ್ತ ಕೊಟ್ಟ ದಿಲ್ ರಾಜು
Toxic movie record: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದಿನ ತಿಂಗಳು ಆಗಲಿದ್ದು, ಸಿನಿಮಾಕ್ಕೆ ಅದ್ಯಾವ ಪರಿ ಬೇಡಿಕೆ ಇದೆಯೆಂದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದಾಖಲೆಗಳನ್ನು ಬರೆಯುತ್ತಿದೆ, ಪ್ಯಾನ್-ಇಂಡಿಯಾ ಸಿನಿಮಾಗಳ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೀಗ ಸಿನಿಮಾದ ವಿತರಣೆ ಹಕ್ಕು ಮಾರಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾ ಬಿಡುಗಡೆ ಮುಂದಿನ ತಿಂಗಳು ಆಗಲಿದ್ದು, ಸಿನಿಮಾಕ್ಕೆ ಅದ್ಯಾವ ಪರಿ ಬೇಡಿಕೆ ಇದೆಯೆಂದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದಾಖಲೆಗಳನ್ನು ಬರೆಯುತ್ತಿದೆ, ಪ್ಯಾನ್-ಇಂಡಿಯಾ ಸಿನಿಮಾಗಳ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೀಗ ಸಿನಿಮಾದ ವಿತರಣೆ ಹಕ್ಕು ಮಾರಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ.
ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ಅವರ ಒಡೆತನದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ‘ಟಾಕ್ಸಿಕ್’ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣಾ ಹಕ್ಕನ್ನು ಖರೀದಿ ಮಾಡಿದ್ದು, ಬರೋಬ್ಬರಿ ₹120 ಕೋಟಿ (advance on commission basis) ಮುಂಗಡ ನೀಡಿ ಖರೀದಿ ಮಾಡಿದೆ. ಇದು ಕಮಿಷನ್ ಆಧಾರದಲ್ಲಿ ಆಗಿರುವ ಒಪ್ಪಂದ ಎನ್ನಲಾಗುತ್ತಿದ್ದು, ತೆಲುಗು ಅಲ್ಲದ ಸಿನಿಮಾವೊಂದು ಆಂಧ್ರ-ತೆಲಂಗಾಣದಲ್ಲಿ ಪಡೆದ ಅತಿ ದೊಡ್ಡ ಮೊತ್ತ ಇದಾಗಿದೆ. ತಮಿಳಿನ ಸಿನಿಮಾಗಳ ವಿತರಣೆ ಹಕ್ಕುಗಳು ಸಹ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಿಲ್ಲ.
‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆಯಲು ತೆಲುಗಿನ ಕೆಲವು ದೊಡ್ಡ ವಿತರಣಾ ಸಂಸ್ಥೆಗಳ ನಡುವೆ ಪೈಪೋಟಿ ನಡೆದು ಅಂತಿಮವಾಗಿ ದಿಲ್ ರಾಜು ಅವರ ಸಂಸ್ಥೆಯು ಈ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ದಿಲ್ ರಾಜು, ‘”ಕೆಜಿಎಫ್ 2’ ಬಳಿಕ ಯಶ್ ಅವರ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ನಾಲ್ಕು ವರ್ಷಗಳಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಮೇಲಿರುವ ನಿರೀಕ್ಷೆಗಳು ಅಪಾರ. ‘ಟಾಕ್ಸಿಕ್’ ಸಿನಿಮಾವನ್ನು ವಿತರಣೆ ಮಾಡಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?
ಗೀತು ಮೋಹನ್ ದಾಸ್ ಮತ್ತು ಯಶ್ ಜಂಟಿಯಾಗಿ ಬರೆದಿರುವ ‘ಟಾಕ್ಸಿಕ್’ ಸಿನಿಮಾಕ್ಕೆ ಗೀತು ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ ಛಾಯಾಗ್ರಹಣವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಮಾಡಿದ್ದಾರೆ. ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ. ಸಂಕಲನ ಜವಾಬ್ದಾರಿಯನ್ನು ಉಜ್ವಲ್ ಕುಲಕರ್ಣಿ ನಿರ್ವಹಿಸಿದ್ದಾರೆ. ಸಾಹಸ ನಿರ್ದೇಶನ ಮಾಡಿರುವುದು ಹಾಲಿವುಡ್‌ನ ಜೆಜೆ ಪೆರ್ರಿ ಅವರ ಜೊತೆಗೆ ಅನ್ಬರಿವ್ ಮತ್ತು ಕೆಚಾ ಖಂಪಾಕ್ಡಿ ಸಹ ಇದ್ದಾರೆ.
ಇನ್ನು ಈ ಸಿನಿಮಾನಲ್ಲಿ ಹಲವು ಟಾಪ್ ನಾಯಕಿಯರು ಒಟ್ಟಿಗೆ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಕೆಲವು ಜನಪ್ರಿಯ ವಿದೇಶಿ ನಟ-ನಟಿಯರು ಸಹ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಜೊತೆಗೆ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಚಿತ್ರೀಕರಣ ಮಾಡಲಾಗಿರುವುದು ವಿಶೇಷ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 6 February 26




