ಪವನ್ ಕಲ್ಯಾಣ್ ಸಿನಿಮಾ ಪ್ರಚಾರಕ್ಕೆ ಬರಲಿದ್ದಾರೆ ಎರಡು ರಾಜ್ಯದ ಮುಖ್ಯಮಂತ್ರಿಗಳು
Hari Hara Veera Mallu: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಭಾರಿ ಅದ್ಧೂರಿಯಾಗಿ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ಪ್ರಚಾರಕ್ಕೆ ಎರಡು ರಾಜ್ಯಗಳ ಸಿಎಂಗಳು ಭಾಗಿ ಆಗಲಿರುವುದು ವಿಶೇಷ.

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan), ತಮ್ಮನ್ನು ತಾವು ಹಿಂದುತ್ವವಾದಿ ಎಂದು ಘೋಷಿಸಿಕೊಂಡಿದ್ದು, ಅವಕಾಶ ಸಿಕ್ಕಾಗೆಲ್ಲ ಹಿಂದುತ್ವದ ಪರ ತಮ್ಮ ಬದ್ಧತೆಯನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದ್ದಾರೆ. ‘ನಾನೊಬ್ಬ ಅನ್ ಅಪಾಲಜೆಟಿಕ್ ಹಿಂದು’ ಎಂದು ಪವನ್ ಕಲ್ಯಾಣ್ ಈ ಹಿಂದೆ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದುತ್ವದ ನಾಯಕನಾಗುವ ಪ್ರಯತ್ನದಲ್ಲಿ ಪವನ್ ಕಲ್ಯಾಣ್ ಇದ್ದಾರೆ ಎಂದು ರಾಜಕೀಯ ವಿಮರ್ಶಕರು ವಿಮರ್ಶಿಸಿದ್ದಾರೆ. ಇದೀಗ ಹಿಂದುತ್ವದ ನಾಯಕರಲ್ಲಿ ಪ್ರಮುಖರಾಗಿರುವ ಯೋಗಿ ಆದಿತ್ಯನಾಥ ಅವರನ್ನು ಆಂಧ್ರಕ್ಕೆ ಕರೆಸುತ್ತಿರುವ ಪವನ್ ಕಲ್ಯಾಣ್, ಇಬ್ಬರೂ ನಾಯಕರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಧರ್ಮದ ಕಾರಣಕ್ಕೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುವ ಸಮಯದಲ್ಲಿ ಅದರ ವಿರುದ್ಧ ನಿಂತ ಯೋಧನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಔರಂಗಾಜೇಬನ ವಿರುದ್ಧ ಹೋರಾಡಿ ಗೆಲ್ಲುವ ಯೋಧನ ಕತೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ಪ್ರಾರಂಭ ಮಾಡಿದೆ. ಆದರೆ ಪವನ್ ಕಲ್ಯಾಣ್ ಅವರು ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ. ಸಿನಿಮಾದ ಪ್ರೀ ರಿಲೀಸ್ ಅನ್ನು ಬೃಹತ್ ಆಗಿ ನಡೆಸಲು ಉದ್ದೇಶಿಸಲಾಗಿದ್ದು, ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಲಾಗಿದೆಯಂತೆ.
ಇದನ್ನೂ ಓದಿ:ಮಾಲಾಶ್ರೀ ಗೆಟಪ್ ಧರಿಸಿದ ನಿವೇದಿತಾ ಗೌಡ; ಇದು ಯಾವ ಸಿನಿಮಾ ಪಾತ್ರ?
ಜುಲೈ 19 ರಂದು ತಿರುಪತಿಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದೇ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ವಾರಣಾಸಿಯಲ್ಲಿ ಸಹ ನಡೆಯಲಿದ್ದು ಜುಲೈ 17 ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭಾಗಿ ಆಗಲಿದ್ದಾರೆ. ಯೋಗಿ ಆದಿತ್ಯನಾಥ ಅವರ ಜೊತೆಗೆ ಉತ್ತರ ಪ್ರದೇಶದ ಕೆಲವು ಸಚಿವರುಗಳು ಸಹ ಭಾಗಿ ಆಗಲಿದ್ದಾರೆ. ಜೊತೆಗೆ ಭೋಜ್ಪುರಿ ಚಿತ್ರರಂಗದ ಕೆಲವು ನಟರು ಸಹ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.
ಜುಲೈ 19 ರಂದು ತಿರುಪತಿಯಲ್ಲಿ ನಡೆಯಲಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಎಂ ಮಾತ್ರವೇ ಅಲ್ಲದೆ ಇನ್ನೂ ಕೆಲವು ಸಚಿವರುಗಳು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ಕೃಷ್ ಮತ್ತು ಜ್ಯೋತಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ದಯಾಕರ್ ರಾವ್ ಮತ್ತು ಎಎಂ ರತ್ನಮ್, ಸಂಗೀತ ನೀಡಿರುವುದು ಆಸ್ಕರ್ ವಿಜೇತ ಎಂಎಂ ಕೀರವಾಣಿ. ಸಿನಿಮಾ ಜುಲೈ 24 ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ