Health Tips: ದುಡ್ಡು ಖರ್ಚು ಮಾಡದೇ, ಜಿಮ್​ಗೆ ಹೋಗದೇ ಫಿಟ್ ಆಗಿ ಇರುವುದು ಹೇಗೆ?

Cardiologist plans: ಉತ್ತಮ ಆರೋಗ್ಯ ಹೊಂದಬೇಕು ಎಂದು ವರ್ಷದ ಮೊದಲ ತಿಂಗಳಲ್ಲಿ ಜಿಮ್​ಗೆ ಸೇರಿ, ಮುಂದಿನ ಮೂರು ತಿಂಗಳಲ್ಲೇ ಜಿಮ್​ನ್ನು ಮರೆತುಬಿಡುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ನಿಮ್ಮ ಕಣ್ಣೆದುರಿಗೇ ಇದೆ..

  • Publish Date - 6:27 am, Fri, 16 April 21 Edited By: Ayesha Banu
Health Tips: ದುಡ್ಡು ಖರ್ಚು ಮಾಡದೇ, ಜಿಮ್​ಗೆ ಹೋಗದೇ ಫಿಟ್ ಆಗಿ ಇರುವುದು ಹೇಗೆ?
ಜಿಮ್ ಎಂಬ ಆಧುನಿಕ ವ್ಯಾಯಾಮಶಾಲೆ

ನಮ್ಮ ದೇಹದ ತೂಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೂ ನಮಗೆ ಸಿಕ್ಕುಸಿಕ್ಕಿದ್ದನ್ನೆಲ್ಲಾ ತಿನ್ನುವ ಹವ್ಯಾಸ. ಅದು ಕೇವಲ ಹವ್ಯಾಸವೊಂದೇ ಆಗಿ ಉಳಿದಿಲ್ಲ, ರೂಢಿ, ಬಿಟ್ಟು ಬಿಡಲಾರದ ಅಭ್ಯಾಸವೂ ಆಗಿ ಬದಲಾಗಿದೆ. ಈ ಆಧುನಿಕ ಜೀವನಶೈಲಿಯೇ ಇದಕ್ಕೆಲ್ಲ ಕಾರಣ. ಆದರೆ ನಮ್ಮ ಮಿತಿಯಲ್ಲಿ ನಾವಿದ್ದರೆ ಯಾವ ರೂಢಿಯೂ ನಮ್ಮ ಆರೋಗ್ಯವನ್ನು ಕೊಲ್ಲಲಾರದು. ಹಾಗಂತ ಏನನ್ನೂ ತಿನ್ನದೇ ಇರಬೇಕು ಅಂತಲ್ಲ, ತಿನ್ನದಿದ್ದರೆ ಹೇಗೆ ತಾನೇ ಉಳಿಯಲು ಸಾಧ್ಯ ಅಲ್ಲವೇ? ತಿಂದರೂ ತಪ್ಪು ತಿನ್ನದಿದ್ದರೂ ತಪ್ಪು. ಈ ಎರಡರ ನಡುವೆ ಹೇಗೆ ಸಮತೋಲನ ಸಾಧಿಸಬೇಕು ಎಂಬುದನ್ನು ನಾವು ಕಲಿಯಬೇಕು. ಕಲಿತು ರೂಡಿಸಿಕೊಳ್ಳಬೇಕು. ಚಿಕ್ಕ ಚಿಕ್ಕ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಕಾಪಾಡಬಲ್ಲವು. ಒಂದಿನಿತೂ ಖರ್ಚಿಲ್ಲದೇ, ಜಿಮ್ಮಿಗೆ ದುಡ್ಡು ಖರ್ಚು ಮಾಡದೇ ದೈಹಿಕವಾಗಿ ಫಿಟ್ ಎನಿಸಿಕೊಳ್ಳಬಹುದು. ಹೇಗೆ ಅಂತೀರಾ? ಈ ಸ್ಟೋರಿಯಲ್ಲಿ ನಿಮಗಾಗಿಯೇ ಬರೆದಿದ್ದೇವೆ ಓದಿ!

ಅತ್ಯಂತ ಪ್ರಖ್ಯಾತ ಹಾರ್ವರ್ಡ್ ಮೆಡಿಸಿನ್ ಸ್ಕೂಲ್ ಪ್ರಕಟಿಸಿರುವ ಬ್ಲಾಗ್​ನಲ್ಲಿ ಅತ್ಯಂತ ಸರಳವಾಗಿ ಹೇಗೆ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು ಮತ್ತು ಆರೋಗ್ಯಪೂರ್ಣ ಹೃದಯವನ್ನು ಹೊಂದಬಹುದು ಎಂದು ವಿವರಿಸಲಾಗಿದೆ. ಇದೇ ಬ್ಲಾಗ್​ನಲ್ಲಿ ಅಮೆರಿಕನ್ ಬೋರ್ಡ್ ಆಫ್ ಫ್ಯಾಮಿಲಿ ಮೆಡಿಸಿನ್​ನಿಂದ ಅಂಗೀಕೃತರಾದ ವೈದ್ಯರಾದ ಡಾ.ಅಮೈ ಭಟ್ ಅವರು ಕೆಲವು ಸರಳ ಸೂತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, ಎಷ್ಟೋ ಜನರಿಗೆ ತಮ್ಮ ಹೃದಯದ ಕುರಿತು ಅತಿ ಹೆಚ್ಚು ಕಾಳಜಿಯಿರುತ್ತದೆ. ಆದರೆ ಹೃದಯದ ಆರೋಗ್ಯವನ್ನು ಜೋಪಾನ ಮಾಡುವುದು ಹೇಗೆ ಎಂಬುದೇ ತಿಳಿದಿರುವುದಿಲ್ಲ. ಉತ್ತಮ ಆರೋಗ್ಯ ಹೊಂದಬೇಕು ಎಂದು ವರ್ಷದ ಮೊದಲ ತಿಂಗಳಲ್ಲಿ ಜಿಮ್​ಗೆ ಸೇರಿ, ಮುಂದಿನ ಮೂರು ತಿಂಗಳಲ್ಲೇ ಜಿಮ್​ನ್ನು ಮರೆತುಬಿಡುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ನಿಮ್ಮ ಕಣ್ಣೆದುರಿಗೇ ಇದೆ ಎನ್ನುತ್ತಾರೆ ಡಾ. ಅಮೈ ಭಟ್. ಆದರೆ ಅತ್ಯಂತ ಸರಳ ಸೂತ್ರಗಳ ಮೂಲಕ ಹೃದಯದ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಹಾಗಾದರೆ, ಯಾವುದು ಈ ಸರಳ ಸೂತ್ರ? ಹೇಗೆ ನಮ್ಮ ದಿನನಿತ್ಯದ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ಕುತೂಹಲವಾಯಿತಾ?

ನೀವು ಪ್ರತಿದಿನ ಮುಖ್ಯವಾಗಿ ಮೂರು ಬಾರಿ ಆಹಾರ ಸೇವಿಸುತ್ತೀರಿ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಭೋಜನ. ಈ ಮೂರು ಸಲವೂ ನಿಮ್ಮ ಆಹಾರದಲ್ಲಿ ಪ್ರೊಟೀನ್, ವಿಟಾಮಿನ್​​ಗಳು ಮತ್ತಿತರ ಖನಿಜಾಂಶಗಳು ಇರುವಂತೆ ನೋಡಿಕೊಳ್ಳಿ. ನಿಮ್ಮ ಆಹಾರದಲ್ಲಿ ತರಕಾರಿ, ಹಣ್ಣು ಹಂಪಲು, ಸೊಪ್ಪು, ಮೊಟ್ಟೆ ಮುಂತಾದವುಗಳು ನಿಯಮಿತವಾಗಿರಲಿ. ಯಾವ ಆಹಾರದಲ್ಲಿ ಯಾವ ಪೋಷಕಾಶವಿದೆ ಎಂಬುದನ್ನು ತಿಳಿದುಕೊಳ್ಳಿ. ಅಲ್ಲದೇ ನೀವು ಸೇವಿಸುವ ಆಹಾರದಲ್ಲಿ ಇರುವ ಪೋಷಕಾಂಶಗಳೇನು, ಪ್ರತಿದಿನ ನಿಮ್ಮ ದೇಹ ಸೇರುತ್ತಿರುವ ಖನಿಜಾಂಶ, ವಿಟಾಮಿನ್, ಪ್ರೊಟೀನ್​ಗಳೇನು ಎಂಬುದರ ಸೂಕ್ತ ಅರಿವು ನಿಮಗಿರಲಿ.

ದಿನದ ಮಧ್ಯೆ ಯಾವುದೇ ರುಚಿಕರ ಅಥವಾ ಸ್ವಾದಿಷ್ಟಕರ ಆಹಾರ ನಿಮ್ಮ ಎದುರು ಇದ್ದರೂ, ಯಾರೇ ನಿಮಗೆ ತಿನ್ನಲು ಆಹ್ವಾನ ನೀಡಿದರೂ ಸ್ವಲ್ಪ ಮಾತ್ರವೇ ಸೇವಿಸಿ. ಹೆಚ್ಚೆಂದರೆ ಮೂರು ಬೈಟ್​ಗಳು ಸಾಕು. ಒಂದನೆಯ ತುತ್ತು ಅಥವಾ ಬೈಟ್ ನಿಮಗೆ ಆ ರುಚಿಕರ ತಿಂಡಿ ಕಂಡಿದ್ದರಿಂದ ಮತ್ತು ತಿನ್ನಬೇಕು ಅನಿಸಿದ್ದರಿಂದ. ಎರಡನೆಯದು ಆ ತಿಂಡಿ ಅಷ್ಟು ರುಚಿಕರವಾಗಿರುವುದರಿಂದ. ಮೂರನೆಯದು ಕೊನೆಯ ಬೈಟ್, ಅದು ಕೊನೆಯ ಬೈಟ್ ಆಗಿರುವ ಕಾರಣ ಆ ಬೈಟ್​ ಒಂದನ್ನು ನೀವು ತಿನ್ನಬಹುದು. ಹೀಗೆ ನಿಮ್ಮ ಆಹಾರ ಮೂರಕ್ಕೆ ಮುಕ್ತಾಯವಾಗಲಿ.

ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

ಬೇಸಿಗೆಕಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ರಾಮಬಾಣ ಅಲೋವೆರಾ

(cardiologist plans towards weight loss and a healthier heart here is all details)