ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ
ಭಾರತದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಇಲ್ಲಿಯವರೆಗೆ, ಡೆಂಗ್ಯೂಗೆ ಯಾವುದೇ ಲಸಿಕೆ ಇರಲಿಲ್ಲ. ಆದ್ರೆ ಈಗ ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್‌ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ ಅಭಿವೃದ್ಧಿಪಡಿಸಿದೆ. ಹಾಗಾದರೆ ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಯಾರು ಯಾವಾಗ ತೆಗೆದುಕೊಳ್ಳಬೇಕು, ನಿಜವಾಗಿಯೂ ಇದು ಕೆಲಸ ಮಾಡುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಂದಿ ಇದರ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಡೆಂಗ್ಯೂಗೆ ನಿರ್ದಿಷ್ಟ ಲಸಿಕೆ ಲಭ್ಯವಿರಲಿಲ್ಲ. ಆದರೆ ಈಗ ದೇಶದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೌದು, ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್‌ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ (Takeda Pharmaceutical Company) ಅಭಿವೃದ್ಧಿಪಡಿಸಿದ್ದು, ಹೈದರಾಬಾದ್‌ನ ಬಯೋಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇದೇ ವರ್ಷ ಈ ಲಸಿಕೆ ದೊರಕುವ ನಿರೀಕ್ಷೆಯಿದೆ. ಹಾಗಾದರೆ ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಯಾರು ಯಾವಾಗ ತೆಗೆದುಕೊಳ್ಳಬೇಕು, ನಿಜವಾಗಿಯೂ ಇದು ಕೆಲಸ ಮಾಡುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
Qdenga (TAK-003) ಎಂಬುದು 4 ರಿಂದ 60 ವರ್ಷ ವಯಸ್ಸಿನವರಿಗೆ ಡೆಂಗ್ಯೂ ತಡೆಗಟ್ಟಲು ಅನುಮೋದಿಸಲಾದ ಟೆಟ್ರಾವಲೆಂಟ್ ಲಸಿಕೆಯಾಗಿದೆ. ಇದು ಎಲ್ಲಾ 4 ಡೆಂಗ್ಯೂ ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. 3 ತಿಂಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುವ ಈ ಲಸಿಕೆ, 2026 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ತೀವ್ರವಾದ ಡೆಂಗ್ಯೂ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದ ವಿಷಯ ತಜ್ಞರ ಸಮಿತಿಯು ಭಾರತದಲ್ಲಿ ಬಳಸಲು ಶಿಫಾರಸು ಮಾಡಿದೆ.
40ಕ್ಕೂ ಹೆಚ್ಚು ದೇಶಗಳಲ್ಲಿ ಅನುಮತಿ
ಜಾಗತಿಕವಾಗಿ 28,000 ಕ್ಕೂ ಹೆಚ್ಚು ಜನರ ಮೇಲೆ ಪರೀಕ್ಷಿಸಲಾದ ಈ ಲಸಿಕೆಯನ್ನು ಈಗಾಗಲೇ ಯೂರೋಪ್, ಬ್ರಿಟನ್, ಇಂಡೋನೇಷಿಯಾ ಮತ್ತು ಬ್ರೆಜಿಲ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಪ್ರೀಕ್ವಾಲಿಫಿಕೇಶನ್ ಕೂಡ ಸಿಕ್ಕಿದೆ. ಇದರಿಂದ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ದೃಢತೆ ಸಿಕ್ಕಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವಾಗ ಲಸಿಕೆಯ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ದೇಹದಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವುದಕ್ಕೆ ಈ ರೋಗಗಳೇ ಕಾರಣ ಎಂಬುದು ತಿಳಿದಿದೆಯೇ?
ಡೆಂಗ್ಯೂ ಸೋಂಕನ್ನು ಕಡಿಮೆ ಮಾಡಲು ಪೂರಕ:
ಭಾರತದಲ್ಲಿ ಪ್ರತಿವರ್ಷ ಸಾವಿರಾರು ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತವೆ. ಹಲವಾರು ಮಂದಿ ಈ ರೋಗದಿಂದ ಸಾವನ್ನಪ್ಪುತ್ತಾರೆ. ಲಸಿಕೆ ಲಭ್ಯವಾದ ಬಳಿಕ, ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡುವ ಮೂಲಕ ಡೆಂಗ್ಯೂ ಸೋಂಕನ್ನು ತಡೆಯಲು ಸಾಧ್ಯವಾಗುತ್ತದೆ. ಈ ಲಸಿಕೆಯ ವಿಶೇಷತೆಯೆಂದರೆ, ಈಗಾಗಲೇ ಡೆಂಗ್ಯೂ ಆಗಿರುವವರ ಮೇಲೂ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿರುವುದರಿಂದ ಜೊತೆಗೆ ಭಾರತದಲ್ಲಿ ಯಾವುದೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಮುನ್ನ ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಯ ಅನುಮತಿ ಅಗತ್ಯವಿದೆ. ಹಾಗಾಗಿ ಈ ಲಸಿಕೆಗೆ ಇನ್ನೂ ಅಂತಿಮ ಅನುಮೋದನೆ ದೊರಕಿಲ್ಲ. ಅನುಮತಿ ಸಿಕ್ಕ ನಂತರವೇ ಸಾಮಾನ್ಯ ಜನರಿಗೆ ಲಸಿಕೆ ನೀಡಲಾಗುತ್ತದೆ. ಈ ಡೆಂಗ್ಯೂ ಲಸಿಕೆ ಭಾರತದಲ್ಲಿ ಲಭ್ಯವಾದರೆ, ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಬಹುದು. ಲಸಿಕೆ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಡೆಂಗ್ಯೂ ವಿರುದ್ಧ ಹೋರಾಟದಲ್ಲಿ ದೊಡ್ಡ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




