AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ice Cream Health Risks: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಐಸ್‌ಕ್ರೀಮ್ ಅತಿಯಾಗಿ ತಿನ್ನುವುದು ಒಳೆಯದಲ್ಲ. ಪದೇ ಪದೇ ತಿಂದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಇವು ದೇಹಕ್ಕೆ ಕ್ಷಣಕಾಲ ತಂಪು ನೀಡುತ್ತದೆಯಾದರೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಅದು ನಿಜ. ಹಾಗಾದರೆ ಐಸ್‌ಕ್ರೀಮ್ ಪದೇ ಪದೇ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

Ice Cream Health Risks: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ
Ice Cream Health Risks
ಪ್ರೀತಿ ಭಟ್​, ಗುಣವಂತೆ
|

Updated on: Apr 10, 2026 | 7:10 PM

Share

ತಾಪಮಾನ ಏರುತ್ತಿದ್ದಂತೆ, ಸೆಖೆಯಿಂದ ಪಾರಾಗಲು ಜನ ಐಸ್‌ಕ್ರೀಮ್ (Ice Cream) ಮೊರೆ ಹೋಗುತ್ತಿದ್ದಾರೆ. ಆದರೆ, ದೇಹಕ್ಕೆ ಕ್ಷಣಕಾಲ ತಂಪು ನೀಡುವ ಈ ಆಹಾರ ಗಮನಕ್ಕೆ ಬಾರದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಅದು ನಿಜ. ಬೇಸಿಗೆಯಲ್ಲಿ ಆಹಾರವು ಕಲುಷಿತಗೊಳ್ಳುವ ಅಪಾಯ ಹೆಚ್ಚಾಗಿರುವುದರಿಂದ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ವೇಗವಾಗಿರುತ್ತದೆ. ಅದರಲ್ಲಿಯೂ ಫ್ರೋಜನ್ ಉತ್ಪನ್ನಗಳು ಸುರಕ್ಷಿತವಲ್ಲ. ಘನೀಕರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆಯೇ ಹೊರತು ಎಲ್ಲಾ ಹಾನಿಕಾರಕ ಜೀವಿಗಳನ್ನು ನಾಶಪಡಿಸುವುದಿಲ್ಲ. ಹಾಗಾದರೆ ಐಸ್‌ಕ್ರೀಮ್ ಪದೇ ಪದೇ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಆದ ಡಾ. ಸಂದೀಪ್ ಎಸ್ ರೆಡ್ಡಿ (Sandeep S Reddy) ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಡಾ. ಸಂದೀಪ್ ಎಸ್ ರೆಡ್ಡಿ ಅವರು ಹೇಳುವ ಪ್ರಕಾರ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ, ಇ.ಕೋಲಿ ಮತ್ತು ಸ್ಟ್ಯಾಫಿಲೋಕೊಕಸ್ ಆರಿಯಸ್‌ನಂತಹ ರೋಗಕಾರಕಗಳು ಡೈರಿ ಮತ್ತು ಶೈತ್ಯೀಕರಿಸಿದ ಸಿಹಿಪದಾರ್ಥಗಳಿಗೆ ಸಂಬಂಧಿಸಿದ ಆಹಾರಗಳಲ್ಲಿ ಸೇರಿಕೊಂಡಿದ್ದು ಸೋಂಕು, ವಾಂತಿ, ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇವು ಹೆಚ್ಚಾಗಿ ಕಂಡುಬರಬಹುದು. ಸೂಕ್ಷ್ಮಜೀವಿಗಳ ಅಪಾಯದ ಹೊರತಾಗಿ, ಐಸ್‌ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸಂಸ್ಕರಿಸಿದ ಸಕ್ಕರೆ ಅಧಿಕವಾಗಿರುತ್ತದೆ, ಇದು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಹೃದಯದ ಮೇಲಿನ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ತಡೆಗಟ್ಟುವಿಕೆಯು ಸುರಕ್ಷಿತ ಉತ್ಪನ್ನಗಳ ಆಯ್ಕೆಯಿಂದ ಪ್ರಾರಂಭವಾಗಬೇಕು. ಸರಿಯಾದ ಶೈತ್ಯೀಕರಣವನ್ನು ನಿರ್ವಹಿಸುವ ವಿಶ್ವಾಸಾರ್ಹ ಮಳಿಗೆಗಳಿಂದ ಐಸ್‌ಕ್ರೀಮ್ ಖರೀದಿಸಿ. ಭಾಗಶಃ ಕರಗಿದ ಅಥವಾ ಮತ್ತೆ ಹೆಪ್ಪುಗಟ್ಟಿದಂತೆ ಕಾಣುವ ವಸ್ತುಗಳ ಸೇವನೆ ಮಾಡುವುದನ್ನು ತಪ್ಪಿಸಿ ಮತ್ತು ಸ್ವಚ್ಛ ಜಾಗದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ. ಕೈಗಳ ಸ್ವಚ್ಛತೆ, ಬಡಿಸುವ ಉಪಕರಣಗಳು ಸ್ವಚ್ಛವಾಗಿರುವುದು ಮತ್ತು ಯಂತ್ರಗಳ ಸರಿಯಾದ ನೈರ್ಮಲ್ಯವು ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡಲು ಅತ್ಯಗತ್ಯ. ಮನೆಯಲ್ಲಿ, ಐಸ್‌ಕ್ರೀಮ್ ಅನ್ನು ಸರಿಯಾದ ಫ್ರೀಜರ್ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸುವ ಸಮಯದಲ್ಲಿ ದೀರ್ಘಕಾಲದವರೆಗೆ ಹೊರಗೆ ಇಡಬಾರದು. ಒಂದು ವೇಳೆ ಉತ್ಪನ್ನವು ಕರಗಿ ಮತ್ತೆ ಹೆಪ್ಪುಗಟ್ಟಿದ್ದರೆ, ಅದನ್ನು ಸೇವಿಸುವ ಬದಲು ಎಸೆಯುವುದು ಒಳ್ಳೆಯದು. ಬೇಸಿಗೆಯ ತಿಂಗಳುಗಳಲ್ಲಿ ಆಹಾರದಿಂದ ಹರಡುವ ಸೋಂಕುಗಳಿಗೆ ಸುಲಭವಾಗಿ ಒಳಗಾಗುವ ಮಕ್ಕಳ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು.

ಇದನ್ನೂ ಓದಿ: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್

ಆರಂಭಿಕ ಆರೈಕೆ ಏಕೆ ಮುಖ್ಯ?

ರೋಗಲಕ್ಷಣಗಳು ಪ್ರಾರಂಭವಾದಾಗ ಸ್ವಯಂ- ಮದ್ದನ್ನು ಮಾಡಬಾರದು. ನಿರಂತರ ವಾಂತಿ, ಅತಿಸಾರ, ಜ್ವರ, ಹೊಟ್ಟೆ ನೋವು, ಮಲದಲ್ಲಿ ರಕ್ತ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಗಮನಕ್ಕೆ ತರಬೇಕು. ಚಿಕಿತ್ಸೆಯಲ್ಲಿ ವಿಳಂಬ ಮಾಡುವುದರಿಂದ ಗುಣಪಡಿಸಬಹುದಾದ ಸೋಂಕು ಉಲ್ಬಣಗೊಳ್ಳಬಹುದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಇದು ಅಪಾಯಕಾರಿಯಾಗಬಹುದು. ಆರಂಭಿಕ ತಪಾಸಣೆಯು ವೈದ್ಯರಿಗೆ ಅದು ಆಹಾರದಲ್ಲಿ ಸೇರಿಕೊಂಡ ವಿಷವೋ (Food Poisoning), ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಆಗಿದೆಯೋ ಅಥವಾ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವ ಇತರ ಸ್ಥಿತಿಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸಮಯೋಚಿತ ವೈದ್ಯಕೀಯ ಆರೈಕೆಯು ಗಂಭೀರ ಸಮಸ್ಯೆಗಳನ್ನು ಮತ್ತು ಅನಗತ್ಯ ಆಸ್ಪತ್ರೆ ದಾಖಲಾಗುವುದನ್ನು ತಡೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us