ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಈ ವಿಷಯಗಳನ್ನು ಮರೆಯಬೇಡಿ
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಕೆಲವರಲ್ಲಿ ಒತ್ತಡ, ಆತಂಕ, ನಿದ್ರೆಯ ಸಮಸ್ಯೆ ಮತ್ತು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು. ವಿಶೇಷವಾಗಿ ಲೈಕ್‌ಗಳು, ಫಾಲೋವರ್‌ಗಳು ಮತ್ತು ಇತರರ ಪ್ರತಿಕ್ರಿಯೆಗಳಿಗೆ ಹೆಚ್ಚಿನ ಮಹತ್ವ ನೀಡುವುದು ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ಈ ರೀತಿ ಆಗುವುದನ್ನು ತಪ್ಪಿಸಲು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ಜೀವನದ ಅವಿಭಾಜ್ಯ ಭಾಗವಾಗಿವೆ. ಅವುಗಳ ಅತಿಯಾದ ಬಳಕೆ ಕೆಲವರಲ್ಲಿ ಒತ್ತಡ, ಆತಂಕ, ನಿದ್ರೆಯ ಸಮಸ್ಯೆ ಮತ್ತು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು. ಲೈಕ್‌ಗಳು, ಫಾಲೋವರ್‌ಗಳು ಮತ್ತು ಇತರರ ಪ್ರತಿಕ್ರಿಯೆಗಳಿಗೆ ಹೆಚ್ಚಿನ ಮಹತ್ವ ನೀಡುವುದು ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಲು ಕೆಲವು ಅಭ್ಯಾಸಗಳನ್ನು ಅನುಸರಿಸುವುದು ಒಳ್ಳೆಯದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
ಲೈಕ್‌ಗಳು ಮತ್ತು ಫಾಲೋವರ್‌ಗಳಿಗಾಗಿ ಹಂಬಲಿಸುವುದು
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಥವಾ ವಿಡಿಯೋ ಹಂಚಿಕೊಂಡ ನಂತರ ಎಷ್ಟು ಲೈಕ್‌ಗಳು ಬಂದಿವೆ ಎಂದು ಪದೇಪದೇ ಪರಿಶೀಲಿಸುವ ಅಭ್ಯಾಸ ಕೆಲವರಲ್ಲಿದೆ. ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗದಿದ್ದಾಗ ನಿರಾಶೆ ಉಂಟಾಗಬಹುದು. ಇತರರ ಜೀವನದೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದರಿಂದ ಸ್ವಂತ ಸಾಮರ್ಥ್ಯದ ಬಗ್ಗೆ ಅನುಮಾನವೂ ಮೂಡಬಹುದು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿನ ಲೈಕ್‌ಗಳು ಮತ್ತು ಫಾಲೋವರ್‌ಗಳ ಸಂಖ್ಯೆ ವ್ಯಕ್ತಿಯ ನಿಜವಾದ ಮೌಲ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಪ್ರತಿಕೂಲ ಕಾಮೆಂಟ್‌ಗಳು ಮತ್ತು ಸೈಬರ್ ಕಿರುಕುಳ
ಆನ್‌ಲೈನ್‌ನಲ್ಲಿ ಅವಮಾನಕರ ಕಾಮೆಂಟ್‌ಗಳು, ಬೆದರಿಕೆಗಳು ಮತ್ತು ವೈಯಕ್ತಿಕ ದೂಷಣೆಗಳನ್ನು ಎದುರಿಸುವುದು ಮಾನಸಿಕವಾಗಿ ನೋವುಂಟುಮಾಡಬಹುದು. ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರು ಇಂತಹ ಅನುಭವಗಳಿಂದ ಹೆಚ್ಚು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಸೈಬರ್ ಕಿರುಕುಳ ಎದುರಾದರೆ ಅದನ್ನು ಮೌನವಾಗಿ ಸಹಿಸಿಕೊಳ್ಳಬಾರದು. ನಂಬಿಕಸ್ಥ ವ್ಯಕ್ತಿಗಳೊಂದಿಗೆ ಮಾತನಾಡಬೇಕು. ಅಗತ್ಯವಿದ್ದರೆ ಸಂಬಂಧಿತ ಖಾತೆಗಳನ್ನು ನಿರ್ಬಂಧಿಸಿ, ವರದಿ ಮಾಡಿ, ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು.
ಇದನ್ನೂ ಓದಿ: ನಿಮ್ಮ ವಯಸ್ಸಿಗೆ ಎಷ್ಟು ಗಂಟೆ ನಿದ್ರೆ ಅಗತ್ಯ! ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತೆ ತಿಳಿದುಕೊಳ್ಳಿ
ನಿದ್ರೆ ಮತ್ತು ದೈನಂದಿನ ಜೀವನದ ಮೇಲಿನ ಪರಿಣಾಮ
ಗಂಟೆಗಟ್ಟಲೆ ರೀಲ್ಸ್ ನೋಡುವುದು ಅಥವಾ ಮೊಬೈಲ್ ಪರಿಶೀಲಿಸುವುದರಿಂದ ನಿದ್ರೆಯ ಸಮಯ ಕಡಿಮೆಯಾಗಬಹುದು. ಓದು, ಕೆಲಸ, ವ್ಯಾಯಾಮ ಮತ್ತು ಕುಟುಂಬದೊಂದಿಗೆ ಕಳೆಯುವ ಸಮಯಕ್ಕೂ ಅಡ್ಡಿಯಾಗಬಹುದು. ಫೋನ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದಾಗಲೂ ಸಾಧ್ಯವಾಗದಿದ್ದರೆ ಅಥವಾ ಅದು ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದ್ದರೆ ನಿಮ್ಮ ಅಭ್ಯಾಸಗಳನ್ನು ಪರಿಶೀಲಿಸುವುದು ಉತ್ತಮ.
ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವುದು ಹೇಗೆ?
- ಪ್ರತಿದಿನ ಸಾಮಾಜಿಕ ಜಾಲತಾಣಗಳಿಗೆ ಮೀಸಲಿಡುವ ಸಮಯವನ್ನು ನಿಗದಿಪಡಿಸಿ.
- ಮಲಗುವ ಮುನ್ನ ಫೋನ್ ಬಳಕೆಯನ್ನು ಕಡಿಮೆ ಮಾಡಿ.
- ಇತರರೊಂದಿಗೆ ನಿಮ್ಮ ಜೀವನವನ್ನು ಹೋಲಿಸಿಕೊಳ್ಳುವುದನ್ನು ತಪ್ಪಿಸಿ.
- ಕುಟುಂಬ ಮತ್ತು ಸ್ನೇಹಿತರೊಂದಿಗೆ ನೇರವಾಗಿ ಸಮಯ ಕಳೆಯಿರಿ.
- ಒತ್ತಡ ಉಂಟುಮಾಡುವ ಖಾತೆಗಳನ್ನು ಫಾಲೋ ಮಾಡಬೇಡಿ ಅದನ್ನು ನಿಲ್ಲಿಸಿ.
- ಆತಂಕ ಅಥವಾ ಮಾನಸಿಕ ಒತ್ತಡ ದೀರ್ಘಕಾಲ ಮುಂದುವರಿದರೆ ತಜ್ಞರ ಸಲಹೆ ಪಡೆಯಿರಿ.
ನೆನಪಿಡಿ: ಸಾಮಾಜಿಕ ಜಾಲತಾಣಗಳು ಸಂಪರ್ಕ ಮತ್ತು ಮಾಹಿತಿಗಾಗಿ ಉಪಯುಕ್ತ ಸಾಧನಗಳಾಗಿವೆ. ಆದರೆ, ಅವುಗಳ ಬಳಕೆ ನಿಮ್ಮ ನಿದ್ರೆ, ಭಾವನೆಗಳು ಅಥವಾ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಿ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಅತ್ಯಂತ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




