Monkeypox ಮಂಕಿಪಾಕ್ಸ್ ವೈರಲ್ ಸೋಂಕಿನ ಬಗ್ಗೆ ಕೇಳಿಬರುತ್ತಿರುವ ಮಿಥ್ಯೆಗಳು ಮತ್ತು ಸತ್ಯಗಳು
ಮಂಕಿಪಾಕ್ಸ್ ವೈರಸ್ ಸೋಂಕು ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ-ಸೀಮಿತ ಸೋಂಕು. ಗಾಯಗಳು ಸಾಮಾನ್ಯವಾಗಿ 21 ದಿನಗಳಲ್ಲಿ ತಾನಾಗಿಯೇ ಗುಣವಾಗುತ್ತವೆ. ಮಂಕಿಪಾಕ್ಸ್ ಚಿಕಿತ್ಸೆಗೆ ಸ್ಪಂದಿಸುತ್ತದೆ.
ಪ್ರಪಂಚದಾದ್ಯಂತ 20 ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಕೊವಿಡ್ (Covid-19) ಸಾಂಕ್ರಾಮಿಕದ ನಡುವೆಯೇ ಮಂಕಿಪಾಕ್ಸ್ (Monkeypox) ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜನರು ಅದರ ಹರಡುವಿಕೆ ಮತ್ತು ಪ್ರಸರಣದ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಇಲ್ಲಿಯವರೆಗೆ ಜಗತ್ತಿನಾದ್ಯಂತ 200 ಮಂಕಿಪಾಕ್ಸ್ ಪ್ರಕರಣಗಳು ವರದಿ ಆಗಿದ್ದು ಇದು ದೇಶಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಂಕಿಪಾಕ್ಸ್ ವೈರಸ್ (MPXV) ಸೋಂಕು ಆರಂಭದಲ್ಲಿ ಪತ್ತೆಯಾದ ಕೋತಿಯಿಂದಾಗಿ ಈ ಹೆಸರನ್ನು ಪಡೆದುಕೊಂಡಿದೆ. ಮೂಲ ನಿರ್ಧರಿಸಲಾಗಿಲ್ಲವಾದರೂ, MPXV ಇಲಿ, ಮೊಲ ಮೊದಲಾದ ಪ್ರಾಣಿ ಗಳಲ್ಲಿಯೂ ಕಂಡುಬರುತ್ತದೆ ಎಂದು ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್ ಮುಖ್ಯಸ್ಥ ಮತ್ತು ಜೈವಿಕ ಸುರಕ್ಷತೆ ಅಧಿಕಾರಿ ಡಾ ನಿರಂಜನ್ ಪಾಟೀಲ್ ಹೇಳಿದ್ದಾರೆ. ಕೊವಿಡ್ -19 ನಂತೆಯೇ ಸೋಂಕಿನ ಬಗ್ಗೆ ಹಲವಾರು ಮಿಥ್ಯಾ ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಇದು ಆತಂಕ ಹೆಚ್ಚಿಸಿದೆ.
ಮಂಕಿಪಾಕ್ಸ್ ಬಗ್ಗೆ ಹರಿದಾಡುತ್ತಿರುವ ಮಿಥ್ಯಾ ಸಂಗತಿಗಳು ಯಾವುದು? ಸತ್ಯ ಏನು? ಎಂಬುದರ ಬಗ್ಗೆ ಡಾ ಪಾಟೀಲ್ ಬೆಳಕು ಚೆಲ್ಲಿದ್ದಾರೆ.
- ಸುಳ್ಳು: ಕೊವಿಡ್-19 ಅಥವಾ ಸಿಡುಬಿನಂತೆಯೇ ಮಂಕಿಪಾಕ್ಸ್ ಸಾಂಕ್ರಾಮಿಕ ಸತ್ಯ: ಸಿಡುಬು, ದಡಾರ, ಅಥವಾ ಕೊವಿಡ್-19ಗೆ ಹೋಲಿಸಿದರೆ ಮಂಕಿ ಬಾಕ್ಸ್ ಕಡಿಮೆ ಸಾಂಕ್ರಾಮಿಕವಾಗಿದೆ.
- ಸುಳ್ಳು: ಮಂಕಿಪಾಕ್ಸ್ ಹೊಸ ವೈರಸ್ ಸತ್ಯ: ಮಂಕಿಪಾಕ್ಸ್ ವೈರಸ್ ಹೊಸ ವೈರಸ್ ಅಲ್ಲ. ಇದು ಈಗಾಗಲೇ ಇರುವ ವೈರಸ್. ಸಾಮಾನ್ಯವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಸ್ಥಳೀಯವಾಗಿ ಏಕಾಏಕಿ ಹರಡುತ್ತದೆ.
- ಸುಳ್ಳು: ಇದಕ್ಕೆ ಚಿಕಿತ್ಸೆ ಲಭ್ಯವಿಲ್ಲ ಸತ್ಯ: ಮಂಕಿಪಾಕ್ಸ್ ವೈರಸ್ ಸೋಂಕು ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ-ಸೀಮಿತ ಸೋಂಕು. ಗಾಯಗಳು ಸಾಮಾನ್ಯವಾಗಿ 21 ದಿನಗಳಲ್ಲಿ ತಾನಾಗಿಯೇ ಗುಣವಾಗುತ್ತವೆ. ಮಂಕಿಪಾಕ್ಸ್ ಚಿಕಿತ್ಸೆಗೆ ಸ್ಪಂದಿಸುತ್ತದೆ. ಪ್ಯಾರೆಸಿಟಮಾಲ್ ಅಥವಾ ಇತರ NSAID ಗಳು, ನ್ಯೂಟ್ರಿಷನ್ ಸಪೋರ್ಟ್, ಚರ್ಮದ ರಕ್ಷಣೆ, ಕಣ್ಣಿನ ಆರೈಕೆ ಮತ್ತು ಉಸಿರಾಟದ ಬೆಂಬಲದಿಂದ ಜ್ವರ ಮತ್ತು ನೋವು ನಿವಾರಣೆ ಆಗುತ್ತದೆ. 2022 ರಲ್ಲಿ ಮಂಕಿಪಾಕ್ಸ್ ವೈರಸ್‌ಗೆ ಟೆಕೊರಿವಿಮ್ಯಾಟ್‌ನಂತಹ ನಿರ್ದಿಷ್ಟ ಆಂಟಿವೈರಲ್ ಅನ್ನು ಅನುಮೋದಿಸಲಾಗಿದೆ. ಸಿಡುಬು ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಟೆಕೋರಿವಿಮ್ಯಾಟ್ ಅನ್ನು ಹಿಂದೆ ಬಳಸಲಾಗಿದೆ. ಸಿಡೋಫೋವಿರ್ ಅಥವಾ ಬ್ರಿನ್ಸಿಡೋಫಿವಿರ್ ಎಂದು ಪರಿಗಣಿಸಬಹುದಾದ ಇತರ ಆಂಟಿವೈರಲ್ ಗಳನ್ನೂ ಬಳಸಲಾಗುತ್ತದೆ.
- ಸುಳ್ಳು: ಸಿಡುಬು ಲಸಿಕೆ ಅಥವಾ ಸೋಂಕು ಮಂಕಿಪಾಕ್ಸ್ ವೈರಸ್ ವಿರುದ್ಧ ರಕ್ಷಣೆ ನೀಡುವುದಿಲ್ಲ ಸತ್ಯ: 1980 ರ ದಶಕದ ಮೊದಲು ಸಿಡುಬು ರೋಗ ಸೋಂಕು ತಗುಲಿದರೆ ಅಥವಾ ಲಸಿಕೆ ಹಾಕುವುದರಿಂದ ರೋಗದಿಂದ ರಕ್ಷಣೆ ಸಿಗುತ್ತಿತ್ತು. ಹೀಗೆ ಸಿಗುವ ರಕ್ಷಣೆಯು 80 ರಿಂದ 85 ಪ್ರತಿಶತದವರೆಗೆ ಬದಲಾಗಬಹುದು.
- ಸುಳ್ಳು: ಮಂಕಿಪಾಕ್ಸ್ ವೈರಸ್ ಸೋಂಕು ಕೊವಿಡ್-19ನಂತೆ ವೇಗವಾಗಿ ಹರಡುತ್ತದೆ ಸತ್ಯ: ಇಲ್ಲ, ಇದು ಕಡಿಮೆ ಸಾಂಕ್ರಾಮಿಕವಾಗಿರುವುದರಿಂದ ಇದು ಕೊವಿಡ್ನಂತೆ ವೇಗವಾಗಿ ಹರಡುವುದಿಲ್ಲ ಮತ್ತು ವೈರಸ್ ಬಗ್ಗೆ ಬಗ್ಗೆ ತಿಳಿದಿರುವುದರಿಂದ ಭಯಪಡುವ ಅಗತ್ಯವಿಲ್ಲ. ಕೊವಿಡ್ -19ಗೆ ಹೋಲಿಸಿದರೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ತುಂಬಾ ಕಡಿಮೆ.ಇದು ಹರಡುವುದು ಸೋಂಕಿತ ವ್ಯಕ್ತಿ ಅಥವಾ ಅವರ ದೇಹದ ದ್ರವಗಳು/ಅವರ ಸ್ರವಿಸುವಿಕೆಯೊಂದಿಗೆ ನಿಕಟ ಸಂಪರ್ಕ ಇದ್ದರೆ ಮಾತ್ರ ಸಿಡುಬಿಗೆ ಲಭ್ಯವಿರುವ ವ್ಯಾಕ್ಸಿನಿಯಾ ವೈರಸ್ ಲಸಿಕೆಯನ್ನು MPXV ಸೋಂಕನ್ನು ತಡೆಗಟ್ಟಲು ಬಳಸಬಹುದು.
- ಸುಳ್ಳು: ಮಂಕಿಪಾಕ್ಸ್ ವೈರಸ್ ಸೋಂಕನ್ನು ಸಿಡುಬು ಅಥವಾ ಚಿಕನ್ ಪಾಕ್ಸ್ ನಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಸತ್ಯ: ಕ್ಲಿನಿಕಲ್ ರೋಗಲಕ್ಷಣಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳ ಆಧಾರದ ಮೇಲೆ ಸಿಡುಬು ಮತ್ತು ಚಿಕನ್ ಪಾಕ್ಸ್ ಗಿಂತ ಇದನ್ನು ಸುಲಭವಾಗಿ ಗುರುತಿಸಬಹುದು. ಸಿಡುಬು ರೋಗವನ್ನು 1980 ರಲ್ಲಿ ನಿರ್ಮೂಲನೆ ಮಾಡಲಾಯಿತು. ಆದರೆ ಚಿಕನ್ ಪಾಕ್ಸ್ ನಲ್ಲಿ ದೇಹದ ಮೇಲೆ ದದ್ದುಗಳೇಳುತ್ತವೆ, ಅಂಗೈ ಮತ್ತು ಕಾಲಿನಡಿಯಲ್ಲಿರುವುದಿಲ್ಲ. ಮಂಕಿಪಾಕ್ಸ್ ವೈರಸ್‌ನ ನಲ್ಲಿ ಇಂಥಾ ದದ್ದು ತಲೆ ಮತ್ತು ಮುಖದ ಮೇಲೆ, ಅಂಗೈ ಮತ್ತು ಕಾಲಿನ ಅಡಿಭಾಗದಲ್ಲೇಳುತ್ತವೆ. ಚಿಕನ್ ಪಾಕ್ಸ್ ಮತ್ತು ಕೌಪಾಕ್ಸ್ ಮತ್ತು ಸಿಡುಬುಗಳಂತಹ ಇತರ ಪಾಕ್ಸ್ ವೈರಸ್ MPXV ರೋಗನಿರ್ಣಯ ಮಾಡಲು ನೈಜ-ಸಮಯದ ಪಿಸಿಆರ್ ಮತ್ತು ಅನುಕ್ರಮ ಪರೀಕ್ಷೆಗಳನ್ನು ಬಳಸಲಾಗುತ್ತದೆ.
(Source)
Published On - 8:30 am, Sat, 28 May 22