AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೆಂಗಳೂರಲ್ಲಿ ಮಂಗಳೂರಿಗೆ ಹೊಲಿಕೆ ಮಾಡಿದರೆ ಸೆಖೆ ಸ್ವಲ್ಪ ಕಡಿಮೆಯಾದರೂ ಕೂಡ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆ ಅನುಸರಿಸುವುದು ಬಹಳ ಮುಖ್ಯ. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
Beat the Bengaluru Heat: Health Tips for Residents
ಪ್ರೀತಿ ಭಟ್​, ಗುಣವಂತೆ
|

Updated on: Apr 15, 2026 | 6:03 PM

Share

ಬೆಂಗಳೂರಲ್ಲಿ ಗ್ರೀಷ್ಮ ಋತುವಿನ (ಬೇಸಿಗೆ ಕಾಲದ) ಪ್ರಭಾವ ಸ್ವಲ್ಪ ಮೃದುವಾಗಿದ್ದರೂ ಮಧ್ಯಾಹ್ನದ ಪ್ರಖರ ಸೂರ್ಯರಶ್ಮಿ ಮತ್ತು ಒಣ ಉಷ್ಣ ಗಾಳಿ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತವೆ. ಈ ಕಾಲದಲ್ಲಿ ವಾತ ಮತ್ತು ಪಿತ್ತ ದೊಷ ಸಂಬಂಧಿ ರೋಗಗಳ ಸಂಭವ ಹೆಚ್ಚು. ಬಿಸಿಲಿನ ತೀವ್ರ ತಾಪವು ಬಲವನ್ನು ಕಡಿಮೆ ಮಾಡುತ್ತದೆ ಮತ್ತು ಕಾರಣವಿಲ್ಲದೆ ಜನ ಆಯಾಸದಿಂದ ಬಳಲುತ್ತಾರೆ. ಇದೆಲ್ಲದರಿಂದ ಕಾಪಾಡಿಕೊಳ್ಳಲು ಕೆಲವು ಸರಳ ಉಪಾಯಗಳನ್ನು ಅನುಸರಿಸುವುದು ಬಹಳ ಉತ್ತಮ. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು (Dr. Samhita) ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಡಾ. ಸಂಹಿತಾ ಹೇಳಿರುವ ಸಿಂಪಲ್ ಟಿಪ್ಸ್:

  • ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇದು ನಿರ್ಜಲೀಕರಣ ಸಮಸ್ಯೆಯನ್ನು ತಡೆಗಟ್ಟುತ್ತದೆ. ದಿನಕ್ಕೆ ಕನಿಷ್ಠ 2.5 –3 ಲೀಟರ್ ನೀರು ಕುಡಿಯಬೇಕು. ಹಾಗೆಯೇ, ಎಳನೀರು, ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಮತ್ತು ಋತು ಅನುಸಾರ ಹಣ್ಣಿನ ರಸ, ಜ್ಯೂಸ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
  • ಮಧ್ಯಾಹ್ನ 11ರಿಂದ 3 ಗಂಟೆಯ ವರೆಗೆ, ಎಲ್ಲಿಯವರೆಗೂ ತೀಕ್ಷ್ಣ ಸೂರ್ಯಕಿರಣಗಳು ಇರುತ್ತವೆಯೊ ಅಲ್ಲಿಯವರೆಗು ಆದಷ್ಟು ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೊರಗೆ ಹೋಗಬೇಕಾದರೆ ಹಗುರವಾದ ಹತ್ತಿ ಬಟ್ಟೆ ಧರಿಸಿ, ಕ್ಯಾಪ್ ಅಥವಾ ಛತ್ರಿ ಬಳಸಬೇಕು. ಇದು ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಸಹಕಾರಿ.
  • ಬೇಸಿಗೆ ಕಾಲದಲ್ಲಿ ಜಠರಾಗ್ನಿಯು ಬಹಳ ಮಂದವಾಗಿರುತ್ತದೆ. ಹಾಗಾಗಿ ಹಸಿವಾದಲ್ಲಿ ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವನೆ ಉತ್ತಮ. ಆದಷ್ಟು ಮನೆಯಲ್ಲಿ ತಯಾರಿಸಿದ ಬಿಸಿಯಾಗಿರುವ ತಾಜಾ ಅಡುಗೆ ಸೇವಿಸಬೇಕು. ಆಹಾರದಲ್ಲಿನ ಸಣ್ಣ ಪುಟ್ಟ ವ್ಯತ್ಯಾಸಗಳು ಅಜೀರ್ಣ, ಬೇಧಿ ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
  • ಇನ್ನು ಬೇಸಿಗೆಯಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಚರ್ಮದ ಸಮಸ್ಯೆ. ವಾತಾವರಣದ ಉಷ್ಣತೆ ಹೆಚ್ಚಿರುವುದರಿಂದ ಚರ್ಮವು ಬೇಗ ಒಣಗಿ ಕಾಂತಿಹೀನವಾಗುತ್ತದೆ. ಹಾಗಾಗಿ ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯ ಬಿಸಿಲಿನಿಂದ ಶರೀರದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಬಳಕೆ ಚರ್ಮ ಒಣಗದಂತೆ ಕಾಪಾಡುತ್ತದೆ. ಪ್ರತಿದಿನ ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಲಘುವಾಗಿ ಅಭ್ಯಂಗಮಾಡಿ ನಂತರ ಸ್ನಾನ ಮಾಡಿದರೆ ಚರ್ಮದ ತೇವಾಂಶ ಕಾಯ್ದಿಟ್ಟುಕೊಳ್ಳಬಹುದು.
  • ಪ್ರತೀದಿನ ಎರಡು ಬಾರಿ ಮುಖ ತೊಳೆಯುವುದು ಅಗತ್ಯ. ಇದು ಬೇಸಿಗೆಯ ಬೆವರನ್ನು, ಬೆವರಿನ ವಾಸನೆಯನ್ನು ತಗ್ಗಿಸುತ್ತದೆ.
  • ಸನ್‌ಸ್ಕ್ರೀನ್ (SPF 30 ಅಥವಾ ಹೆಚ್ಚು) ಬಳಸುವುದು ಬಹಳ ಮುಖ್ಯ, ಏಕೆಂದರೆ ಇದು ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
  • ಅಲೋವೆರಾ ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹೆಚ್ಚಿಕೊಳ್ಳುವುದರಿಂದ ಮುಖದ ತೇವಾಂಶವನ್ನು ಕಾಪಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನಿಂದ ಆಗುವ ಕಪ್ಪು ಕಲೆಗಳನ್ನು ನಿವಾರಿಸಲು ಶ್ರೀಗಂಧದ ಪುಡಿ ಹಾಲಿನ ಕೆನೆಯೊಂದಗೆ ಅಥವಾ ಅರಿಶಿನ ಪುಡಿ ಹಾಲಿನ ಕೆನೆ, ಜೇನುತುಪ್ಪದ ಮಿಶ್ರಣ, ಅಥವಾ ಕಡಲೆ ಹಿಟ್ಟು ಜೇನುತುಪ್ಪದ ಮಿಶ್ರಣ ನಿಯಮಿತವಾಗಿ ಮುಖ ಕೈ-ಕಾಲುಗಳಿಗೆ ಹಚ್ಚಬಹುದು.
  • ಮನೆಯಿಂದ ಆಚೆ ಹೋಗುವ ಮೊದಲು ಆದಷ್ಟು ಕೈ- ಕಾಲು ಮುಖ ಬಿಸಿಲಿಗೆ ತೋರದಂತೆ ರಕ್ಷಿಸಿಕೊಳ್ಳುವುದು ಉತ್ತಮ.
  • ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಹೆಚ್ಚು ಇರಲಿ. ವಿಶೇಷವಾಗಿ ಕಲ್ಲಂಗಡಿ, ಸೌತೆಕಾಯಿ, ಮತ್ತು ಮೊಸರು ದೇಹಕ್ಕೆ ತಂಪು ನೀಡುತ್ತವೆ. ಮಸಾಲೆಯುಕ್ತ ಮತ್ತು ಹೆಚ್ಚು ಎಣ್ಣೆಯ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.

ಈ ಸರಳ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us