ಟೈಫಾಯ್ಡ್ ಪ್ರಕರಣಗಳ ಹೆಚ್ಚಳ: ಮಕ್ಕಳಲ್ಲಿ ಈ ಲಕ್ಷಣ ಕಂಡುಬಂದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ
ಬೇಸಿಗೆ ಮತ್ತು ಮಳೆಯ ಮಿಶ್ರ ವಾತಾವರಣದಲ್ಲಿ ಮಕ್ಕಳಲ್ಲಿ ಟೈಫಾಯ್ಡ್ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಕಾಣುವ ಈ ಸೋಂಕನ್ನು ಹಲವು ಪೋಷಕರು ಗುರುತಿಸಲು ವಿಫಲರಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಈ ಸಮಸ್ಯೆ ಗಂಭೀರ ರೂಪ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಹಾಗಾದರೆ ಟೈಫಾಯ್ಡ್ ಕಂಡುಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ರೀತಿ ಮಕ್ಕಳಿಗೆ ಟೈಫಾಯ್ಡ್ ಬಂದರೆ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬದಲಾಗುತ್ತಿರುವ ಹವಾಮಾನದಲ್ಲಿ, ಮಕ್ಕಳಲ್ಲಿ ಟೈಫಾಯ್ಡ್ (Typhoid) ಜ್ವರದ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ, ಪೋಷಕರಿಗೆ ತಮ್ಮ ಮಗುವಿಗೆ ಈ ಜ್ವರವಿದೆ ಎಂದು ಆರಂಭದಲ್ಲಿ ತಿಳಿಯುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಅಪಾಯಕಾರಿಯಾಗಬಹುದು. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದರಿಂದ ಸಾಧ್ಯವಾದಷ್ಟು ಈ ಜ್ವರವನ್ನು ನಿಯಂತ್ರಿಸಬಹುದಾಗಿದೆ. ಡಾ. ವಿಪಿನ್‌ಚಂದ್ರ ಉಪಾಧ್ಯಾಯ ಅವರು ಹೇಳುವ ಪ್ರಕಾರ, ಟೈಫಾಯ್ಡ್ ಒಂದು ಬ್ಯಾಕ್ಟೀರಿಯಾ ಸೋಂಕು. ಇದು ಕಲುಷಿತ ನೀರು ಮತ್ತು ಅಶುದ್ಧ ಆಹಾರದ ಮೂಲಕ ಹರಡುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಬೇಗ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ಟೈಫಾಯ್ಡ್ ಕಂಡುಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ರೀತಿ ಮಕ್ಕಳಿಗೆ ಟೈಫಾಯ್ಡ್ ಬಂದರೆ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಟೈಫಾಯ್ಡ್‌ನ ಆರಂಭಿಕ ಲಕ್ಷಣಗಳು:
ತಜ್ಞರ ಪ್ರಕಾರ, ಎರಡು ದಿನಕ್ಕಿಂತ ಹೆಚ್ಚು ಕಾಲ ಇರುವ ಜ್ವರ ಟೈಫಾಯ್ಡ್‌ನ ಪ್ರಮುಖ ಲಕ್ಷಣವಾಗಿದೆ. ಜೊತೆಗೆ ದೌರ್ಬಲ್ಯ, ಬೇಗ ದಣಿವು, ಹಸಿವು ಕಡಿಮೆಯಾಗುವುದು, ಹೊಟ್ಟೆನೋವು, ಹೊಟ್ಟೆ ಉಬ್ಬುವುದು, ವಾಂತಿ, ಅತಿಸಾರ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಈ ಜ್ವರದ ಆರಂಭಿಕ ಲಕ್ಷಣವಾಗಿರುತ್ತದೆ. ಇನ್ನು ಕೆಲ ಮಕ್ಕಳಲ್ಲಿ ನಿರಂತರ ಬೇಸರ, ನಿದ್ರಾಹೀನತೆ ಮತ್ತು ಆಟದಲ್ಲಿ ಆಸಕ್ತಿ ಕಡಿಮೆಯಾಗುವಂತಹ ಲಕ್ಷಣ ಕೂಡ ಕಾಣಿಸಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್ 1: ಆತಂಕಕಾರಿ ಮಾಹಿತಿ ಬಹಿರಂಗ
ಯಾವ ಲಕ್ಷಣಗಳು ಗಂಭೀರವಾಗಿರಬಹುದು?
ತೀವ್ರ ಜ್ವರ, ನಿರಂತರ ವಾಂತಿ, ಉಸಿರಾಟದ ತೊಂದರೆ, ಅತಿಯಾದ ದೌರ್ಬಲ್ಯ ಅಥವಾ ಪ್ರಜ್ಞೆ ತಪ್ಪುವ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸೋಂಕು ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಟೈಫಾಯ್ಡ್ ಬಂದರೆ ಏನು ಮಾಡಬೇಕು?
ವೈದ್ಯರ ಸಲಹೆಯಂತೆ ಪೂರ್ಣ ಔಷಧಿ ಕೋರ್ಸ್ ಮುಗಿಸುವುದು ಬಹಳ ಮುಖ್ಯ. ಮಕ್ಕಳಿಗೆ ವಿಶ್ರಾಂತಿ ನೀಡಬೇಕು ಹಾಗೂ ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಕೊಡಬೇಕು. ಗಂಜಿ, ಸೂಪ್ ಮತ್ತು ಹಗುರವಾದ ಆಹಾರ ನೀಡುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.
ಟೈಫಾಯ್ಡ್ ತಡೆಯಲು ಈ ಮುನ್ನೆಚ್ಚರಿಕೆ ಅಗತ್ಯ:
- ಮಕ್ಕಳಿಗೆ ಯಾವಾಗಲೂ ಶುದ್ಧ ನೀರನ್ನು ನೀಡಬೇಕು
- ಹೊರಗೆ ಸಿಗುವ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು
- ಊಟಕ್ಕೂ ಮೊದಲು ಮತ್ತು ಶೌಚಾಲಯದ ಬಳಿಕ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು
- ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಕೊಡಬೇಕು
ಸರಿಯಾದ ಸ್ವಚ್ಛತೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡಿದರೆ ಟೈಫಾಯ್ಡ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




