ನೀರಿನ ಬಾಟಲಿಗಳಲ್ಲಿರುವ ಬ್ಯಾಕ್ಟೀರಿಯಾಗಳು ಎಷ್ಟು ಅಪಾಯಕಾರಿ? ಸ್ವಚ್ಛ ಮತ್ತು ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ಸರಳ ಮಾಹಿತಿ
ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳಲ್ಲಿ ಕೀಟಾಣುಗಳು ಇರಬಹುದು ಎಂದು ಯುಎಸ್ ಮೂಲದ ಸಂಸ್ಥೆಯ ಸಂಶೋಧಕರು ಕಂಡುಹಿಡಿದಿದ್ದಾರೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮತ್ತು ಸುರಕ್ಷಿತವಾಗಿ ಇಡುವುದು ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ.
ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಇನ್ನು ನೀರಿಗೆ ರುಚಿಯಿಲ್ಲ ಎನ್ನುತ್ತಾರೆ ಆದರೆ ನಮಗೆ ಬೇರೆ ಪ್ರದೇಶಗಳಿಗೆ ಹೋದಾಗ ನಮ್ಮ ಮನೆಯ ನೀರು ಕುಡಿದ ಹಾಗೇ ಆಗುವುದಿಲ್ಲ. ಈ ಮಾತು ಹಲವರ ಅನುಭವಕ್ಕೆ ಬಂದಿರಬಹುದು. ಜೊತೆಗೆ ಕೋವಿಡ್ ಬಂದ ಬಳಿಕ ಹೋದಲ್ಲೆಲ್ಲಾ ನೀರಿನ ಬಾಟಲಿಗಳನ್ನು ಒಯ್ಯುತ್ತೇವೆ. ಆದರೆ ಈ ಬಾಟಲಿಗಳು ಸುರಕ್ಷಿತವಲ್ಲ ಎನ್ನುತ್ತದೆ ಸಂಶೋಧನೆ!. ನಮ್ಮ ನೀರಿನ ಬಾಟಲ್ ಕೀಟಾಣುಗಳಿಂದ ಹೊರತಾಗಿಲ್ಲ. ನೀರಿನ ಸಂಸ್ಕರಣೆ ಮತ್ತು ಶುದ್ಧೀಕರಣಕ್ಕಾಗಿ ಯುಎಸ್ ಮೂಲದ ಬ್ಲಾಗ್ ಇತ್ತೀಚೆಗೆ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳು ನಿಮ್ಮ ಟಾಯ್ಲೆಟ್ ಸೀಟ್ಗಿಂತ 40,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ ಎಂದು ಕಂಡು ಹಿಡಿದಿದೆ.
ನೀರಿನ ಬಾಟಲಿಗಳಲ್ಲಿರುವ ಬ್ಯಾಕ್ಟೀರಿಯಾಗಳು ಎಷ್ಟು ಅಪಾಯಕಾರಿ?
ಸಂಶೋಧಕರು ಗ್ರಾಮ್- ನೆಗೆಟಿವ್ ರಾಡ್ಗಳು ಮತ್ತು ಬ್ಯಾಸಿಲಸ್ ಎಂಬ ಎರಡು ಜಾತಿಯ ಬ್ಯಾಕ್ಟೀರಿಯಾಗಳನ್ನು ಕಂಡುಕೊಂಡರು, ಅವರು ವಿವಿಧ ನೀರಿನ ಬಾಟಲಿಗಳ ಭಾಗಗಳನ್ನು ಮೂರು ಬಾರಿ ಸ್ವ್ಯಾಬ್ ಮಾಡಿದಾಗ, ಪ್ರತಿಯೊಂದೂ ಕ್ರಮವಾಗಿ ೩ ರೀತಿಯ ಮುಚ್ಚಳವನ್ನು ಹೊಂದಿತ್ತು. ಗ್ರಾಮ್- ನೆಗೆಟಿವ್ ಬ್ಯಾಕ್ಟೀರಿಯಾವು ಔಷಧಿಗಳಿಗೆ ಹೆಚ್ಚು ನಿರೋಧಕವಾಗಿ ಬೆಳೆಯುತ್ತಿರುವ ಸೋಂಕುಗಳಿಗೆ ಕಾರಣವಾಗಬಹುದು, ಆದರೆ ಬ್ಯಾಸಿಲಸ್ನಕರುಳಿನ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಬಾಟಲಿಗಳು ಕಂಪ್ಯೂಟರ್ ಮೌಸ್ಗಿಂತ ನಾಲ್ಕು ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು, ಅಡುಗೆಮನೆಯ ಸಿಂಕ್ಗಿಂತ ಎರಡು ಪಟ್ಟು ಹೆಚ್ಚು ಮತ್ತು ಸಾಕುಪ್ರಾಣಿಗಳ ನೀರಿನ ಬಟ್ಟಲಿಗಿಂತ 14 ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ವರ್ಗಾಯಿಸಬಹುದು ಎಂದು ಅವರು ಕಂಡು ಕೊಂಡಿದ್ದಾರೆ. ಅಧ್ಯಯನದ ಕೊನೆಯಲ್ಲಿ, ಪರೀಕ್ಷೆಗೆ ಬಳಸುವ ಮೂರು ಬಾಟಲಿಗಳಲ್ಲಿ ಸ್ಕ್ವೀಜ್- ಟಾಪ್ ಬಾಟಲಿಗಳು ಅತ್ಯಂತ ಸ್ವಚ್ಛವಾಗಿವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಲೈಮ್ ಡಿಸೀಸ್ ಎಂದರೇನು? ಈ ರೋಗದ ಬಗ್ಗೆ ಸೂಪರ್ ಮಾಡೆಲ್ ಬೆಲ್ಲಾ ಹ್ಯಾಡಿಡ್ ಅನುಭವ ಹೇಗಿತ್ತು? ಇಲ್ಲಿದೆ ತಜ್ಞರ ಸಲಹೆ
ನೀರಿನ ಬಾಟಲಿಗಳನ್ನು ತೊಳೆಯುವಾಗ ನೆನಪಿನಲ್ಲಿಡಬೇಕಾದ ವಿಷಯಗಳಾವವು?
ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ನಿಮ್ಮ ಬಾಟಲ್ ಗಳನ್ನು ದೂರವಿರಿಸಲು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ನೀವು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.
- ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯನ್ನು ದಿನಕ್ಕೆ ಒಮ್ಮೆಯಾದರೂ ತೊಳೆಯಿರಿ. ಬೆಚ್ಚಗಿನ ನೀರಿನಿಂದ ಪಾತ್ರೆ ತೊಳೆಯುವ ಸಾಬೂನು ಬಳಸಿ ನೀವು ಅದನ್ನು ಸ್ವಚ್ಛಗೊಳಿಸಬಹುದು ಅಥವಾ ಸೋಪ್ ಆಯಿಲ್ ಗಳನ್ನು ಬಳಸಬಹುದು. ಬಾಟಲ್ ಬ್ರಷ್ ನಿಂದ ಬಾಟಲಿಯನ್ನು ಸರಿಯಾಗಿ ಉಜ್ಜಿ. ಅದರ ಕೆಳಭಾಗ, ಒಳಭಾಗ ಮತ್ತು ಕ್ಯಾಪ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
- ನಿಮ್ಮ ನೀರಿನ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯಲು, ಬಾಟಲಿಯನ್ನು ಒಣಗಿದ ಟವೆಲ್ ನಿಂದ ಚೆನ್ನಾಗಿ ಒರೆಸಲು ಮರೆಯಬೇಡಿ. ಗಾಳಿಯಲ್ಲಿಯೂ ಒಣಗಲು ಬಿಡಬಹುದು. ಹಾಗೆಯೇ ನೀರಿನ ಬಾಟಲಿಯ ಕ್ಯಾಪ್ ಅನ್ನು ಸ್ವಚ್ಛಗೊಳಿಸಲು ಎಂದಿಗೂ ಮರೆಯಬೇಡಿ. ಬಾಟಲಿಯಂತೆಯೇ, ಕ್ಯಾಪ್ ಅನ್ನು ಪ್ರತಿದಿನ ಬೆಚ್ಚಗಿನ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಿ.
- ನಿಮ್ಮ ಬಾಟಲಿಯನ್ನು ನೀವು ಸ್ವಲ್ಪ ಸಮಯದವರೆಗೆ ತೊಳೆಯದಿದ್ದರೆ, ಅದಕ್ಕೆ ತೀವ್ರವಾದ ಸ್ವಚ್ಚತೆಯ ಅಗತ್ಯವಿದ್ದರೆ, ಅದನ್ನು ಸ್ವಚ್ಛಗೊಳಿಸಲು ವಿನೆಗರ್ ಅಥವಾ ಅಡಿಗೆ ಸೋಡಾವನ್ನು ಪ್ರಯತ್ನಿಸಿ. ಈ ಎರಡು ಉತ್ಪನ್ನಗಳು ಬಾಟಲಿಯ ವಾಸನೆಯನ್ನು ತೊಡೆದು ಹಾಕಲು ನಿಮಗೆ ಸಹಾಯ ಮಾಡಬಹುದು.
- ಬೆಚ್ಚಗಿನ ನೀರಿನೊಂದಿಗೆ ಎರಡು ಟೀ ಸ್ಪೂನ್ ಅಡಿಗೆ ಸೋಡಾವನ್ನು ಸೇರಿಸಿ ಮತ್ತು ಮಿಶ್ರಣವನ್ನು ರಾತ್ರಿಯಿಡೀ ಬಾಟಲಿಯಲ್ಲಿ ಬಿಡಿ. ಮರುದಿನ ಬೆಳಿಗ್ಗೆ ನೀರಿನ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸಿ.
- ನೀವು ನೀರಿನ ಬಾಟಲಿಯನ್ನು ವಿನೆಗರ್ ನಿಂದ ತುಂಬಿಸಿ, ಅದನ್ನು ಚೆನ್ನಾಗಿ ಅಲ್ಲಾಡಿಸಿ ರಾತ್ರಿಯಿಡೀ ಬಿಡಿ. ನೀವು ಮರುದಿನ ಬೆಳಿಗ್ಗೆ ಬಾಟಲಿ ತೊಳೆದು ಸ್ವಚ್ಛಮಾಡಿಕೊಳ್ಳಬಹುದು.
ನಿಮ್ಮ ದೇಹದಲ್ಲಿ ಯಾವುದೇ ರೀತಿಯಲ್ಲಿಯೂ ಬ್ಯಾಕ್ಟೀರಿಯಾದಿಂದ ಬರುವ ಸೋಂಕನ್ನು ತಪ್ಪಿಸಲು ನಿಮ್ಮ ನೀರಿನ ಬಾಟಲಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ತಪ್ಪಿಸಬೇಡಿ. ಅಲ್ಲದೆ, ಈ ಬಗ್ಗೆ ಸಂಶಯವಿದ್ದಲ್ಲಿ ವೈದ್ಯರೊಂದಿಗೆ ಮಾತನಾಡುವುದು ಒಳಿತು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: