AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jupiter Transit In Gemini: ಮಿಥುನ ರಾಶಿಯಲ್ಲಿ ಗುರು ಗ್ರಹ ಸಂಚಾರ; ದ್ವಾದಶ ರಾಶಿಗಳ ಫಲಾಫಲ

ಗುರು ಗ್ರಹ ಮಿಥುನ ರಾಶಿಗೆ ಪ್ರವೇಶ ಮಾಡಿದೆ. ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಸಂಚರಿಸುವ ಬೃಹಸ್ಪತಿಯು ಈ ಬಾರಿ ಅಕ್ಟೋಬರ್ 18ನೇ ತಾರೀಕು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಿ, ಡಿಸೆಂಬರ್ 5ನೇ ತಾರೀಕಿನ ತನಕ ಅದೇ ರಾಶಿಯಲ್ಲಿದ್ದು, ಮತ್ತೆ ಮಿಥುನ ರಾಶಿಗೆ ಪ್ರವೇಶ ಮಾಡುತ್ತದೆ. ಅಲ್ಲಿಂದ 2026ನೇ ಇಸವಿ ಜೂನ್ 1ನೇ ತಾರೀಕಿನ ತನಕ ಮಿಥುನ ರಾಶಿಯಲ್ಲಿಯೇ ಇರುತ್ತದೆ. ಈ ಬೆಳವಣಿಗೆಯಿಂದ ಯಾವ್ಯಾವ ರಾಶಿಗಳಿಗೆ ಶುಭ ಫಲ ಹಾಗೂ ಯಾವ ರಾಶಿಯವರು ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

Jupiter Transit In Gemini: ಮಿಥುನ ರಾಶಿಯಲ್ಲಿ ಗುರು ಗ್ರಹ ಸಂಚಾರ; ದ್ವಾದಶ ರಾಶಿಗಳ ಫಲಾಫಲ
Jupiter Transit
ಸ್ವಾತಿ ಎನ್​ಕೆ
| Edited By: |

Updated on: May 16, 2025 | 12:54 PM

Share

ಗುರು ಗ್ರಹ ಮೇ 15ನೇ ತಾರೀಕಿನಂದು ವೃಷಭ (Taurus) ರಾಶಿಯಿಂದ ಮಿಥುನ (Gemini) ಕ್ಕೆ ಪ್ರವೇಶ ಮಾಡಿದೆ. ಧನುಸ್ಸು- ಮೀನ ರಾಶಿ ಗುರು ಗ್ರಹದ ಸ್ವಕ್ಷೇತ್ರವಾಗುತ್ತದೆ. ಕರ್ಕಾಟಕ (Cancer) ರಾಶಿಯು ಉಚ್ಚ ಕ್ಷೇತ್ರವಾದರೆ ಮಕರ ರಾಶಿಯಲ್ಲಿ ಗುರು ಗ್ರಹ ನೀಚ ಸ್ಥಿತಿಯನ್ನು ತಲುಪುತ್ತದೆ. ಒಂದು ರಾಶಿಯಲ್ಲಿ ಬಹುತೇಕ ಒಂದು ವರ್ಷ ಸಂಚಾರ ಮಾಡುವ ಈ ಗ್ರಹವು ಈ ಬಾರಿಯ ಮಿಥುನ ರಾಶಿಯ ಸಂಚಾರದಲ್ಲಿ ವೃಷಭ, ಸಿಂಹ, ತುಲಾ, ಧನುಸ್ಸು, ಕುಂಭ ರಾಶಿಗೆ “ಗುರು ಬಲ”ವನ್ನು ತರುತ್ತದೆ. ಅಕ್ಟೋಬರ್ 18ನೇ ತಾರೀಕು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುವ ಬೃಹಸ್ಪತಿಯು ಡಿಸೆಂಬರ್ 5ನೇ ತಾರೀಕು ಪುನಃ ಮಿಥುನ ರಾಶಿಗೆ ಬಂದು, 2026ನೇ ಇಸವಿ ಜೂನ್ 1ನೇ ತಾರೀಕಿನ ತನಕ ಅಲ್ಲಿಯೇ ಇರುತ್ತದೆ. ಈ 2025ರ ಮೇ 15ರಿಂದ 2026ರ ಜೂನ್ 1ರ ಅವಧಿಯಲ್ಲಿ ಮೇಷದಿಂದ ಮೀನ ರಾಶಿಯ ತನಕ ಹನ್ನೆರಡು ರಾಶಿಗಳಿಗೆ ಗುರು ಸಂಚಾರದ ಫಲಾಫಲ ಏನಿದೆ ಎಂಬುದರ ವಿವರ ಇಲ್ಲಿದೆ.

ಮೇಷ ರಾಶಿ ಫಲಾಫಲ

ನಿಮಗೆ ಸಂಬಂಧವೇ ಪಡದಿದ್ದರೂ ಕೆಲವು ವಿಚಾರಗಳನ್ನು ಮೈ ಮೇಲೆ ಹಾಕಿಕೊಂಡು ಅವಮಾನಕ್ಕೆ ಗುರಿ ಆಗುತ್ತೀರಿ. ಹೇಗಾದರೂ ನೀವು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಹಠಕ್ಕೆ ಬೀಳಬೇಡಿ. ಪಿತ್ರಾರ್ಜಿತ ಆಸ್ತಿ ಅಥವಾ ಹಣಕಾಸು ವಿಚಾರಕ್ಕೆ ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರ ಜತೆಗಿನ ಆಸ್ತಿ- ಹಣಕಾಸು ವಿಚಾರಗಳಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪಗಳು ತಲೆದೋರಲಿವೆ. ಈ ಅವಧಿಯಲ್ಲಿ ಮನೆ ಅಥವಾ ಕಚೇರಿ ದುರಸ್ತಿ ಅಥವಾ ಸುಣ್ಣ- ಬಣ್ಣ ಅಂತೇನಾದರೂ ಕೈಗೆತ್ತಿಕೊಂಡಲ್ಲಿ ನೀವು ಹಾಕಿಕೊಂಡ ಬಜೆಟ್ ಒಳಗೆ ಕೆಲಸ ಮುಗಿಯದೆ ವಿಪರೀತ ಖರ್ಚಾಗಲಿದೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಆಲೋಚನೆ ಇದ್ದರಂತೂ ಅದನ್ನು ತಲೆಯಿಂದ ತೆಗೆಯಿರಿ. ನಿಮ್ಮಲ್ಲಿ ಕೆಲವರು ಸಾಲ ಮಾಡಿಯಾದರೂ ಫ್ಲ್ಯಾಟ್, ಮನೆ ಖರೀದಿ ಮಾಡುವಂಥ ಯೋಗ ಇದೆ. ಸ್ನೇಹಿತರ ಜೊತೆಗೆ ಜಗಳವಾಡಿ ಅವರಿಂದ ದೂರ ಆಗುವಂಥ ಸಾಧ್ಯತೆಗಳಿವೆ. ನಿಮ್ಮ ಅಗತ್ಯ- ಅನಿವಾರ್ಯಕ್ಕೆ ಯಾರ ಸಹಾಯವೂ ದೊರೆಯದಂತಾಗಬಹುದು. ಇನ್ನು ಉದ್ಯೋಗಕ್ಕಾಗಿ, ಅದರಲ್ಲೂ ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡಲಿದ್ದಾರೆ ಎಂಬ ಆಸೆಯಿಂದ ಹಣ ಏನಾದರೂ ನೀಡಿದಲ್ಲಿ ಬರಿಗೈಯಲ್ಲಿ ನಿಲ್ಲುವಂಥ ಸನ್ನಿವೇಶ ಎದುರಾಗಲಿದೆ.

ವೃಷಭ ರಾಶಿ ಫಲಾಫಲ

ಇಷ್ಟು ಸಮಯ ನಿಮ್ಮದೇ ಜನ್ಮ ರಾಶಿಯಲ್ಲಿ ಗುರು ಸಂಚಾರ ಇದ್ದುದರಿಂದ ಅನುಭವಿಸಿದ ದುಃಖ- ಸಮಸ್ಯೆಗಳು ನಿವಾರಣೆ ಆಗಲಿವೆ. ಎರಡನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಹಣದ ಹರಿವು ಸಲೀಸಾಗಿ ಆಗಲಿದೆ. ದಂಪತಿ ಮಧ್ಯೆ ಅಭಿಪ್ರಾಯ ಭೇದಗಳು ಇದ್ದಲ್ಲಿ ನಿವಾರಣೆ ಆಗಲಿವೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆ ನಿಶ್ಚಯ ಆಗುವ ಅಥವಾ ಮದುವೆ ಆಗುವ ಯೋಗ ಇದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಆದಾಯ ಮತ್ತು ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಇಷ್ಟು ಸಮಯ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ದೊರೆಯಲಿದೆ. ಚಿಕಿತ್ಸೆಯಾಗಿ ಪಡೆದುಕೊಳ್ಳುವ- ತೆಗೆದುಕೊಳ್ಳುತ್ತಿರುವ ಔಷಧಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿವೆ. ಇನ್ನು ಸಂತಾನ ಅಪೇಕ್ಷಿತರು ಇದ್ದಲ್ಲಿ ಅವರಿಗೂ ಶುಭ ಸುದ್ದಿ ಕೇಳುವ ಯೋಗವಿದೆ. ನಿಮ್ಮ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಮಾತ್ರ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದ ವೇಳೆಯಲ್ಲಿ ನಿಮ್ಮ ಶ್ರಮ ಹಾಗೂ ಸಾಧನೆ, ಯಶಸ್ಸು ಬೇರೆಯವರ ಪಾಲಾಗುವ ಸಂಭವವಿರುತ್ತದೆ. ಆಗ ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ನಿಮ್ಮ ನಿರೀಕ್ಷೆ- ಅಪೇಕ್ಷೆ ಏನು ಎಂಬುದನ್ನು ನೇರಾನೇರವಾಗಿ ಹೇಳಿಬಿಡಿ.

ಮಿಥುನ ರಾಶಿ ಫಲಾಫಲ

ನಿಮ್ಮದೇ ಜನ್ಮ ರಾಶಿಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾಗಿ ನಾನಾ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈಗಾಗಲೇ ಮಧುಮೇಹ ಇದೆ ಅಂತಾದಲ್ಲಿ ಸೂಕ್ತವಾದ ಮುಂಜಾಗ್ರತೆ ತೆಗೆದುಕೊಳ್ಳಿ, ಸರಿಯಾದ ಫಾಲೋಅಪ್ ಮಾಡಿ. ಮಕ್ಕಳ ಶಿಕ್ಷಣ, ಆರೋಗ್ಯ, ಭವಿಷ್ಯ, ಮದುವೆ, ಉದ್ಯೋಗ ಹೀಗೆ ಯಾವುದಾದರೂ ವಿಚಾರ ಅಥವಾ ಇವೆಲ್ಲವೂ ಚಿಂತೆಗೆ ಕಾರಣವಾಗಬಹುದು. ಸಂಸಾರದಲ್ಲಿನ ಜಗಳ- ಕಲಹ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು. ಕೂಡು ಕುಟುಂಬದಲ್ಲಿ ಇದ್ದೀರಿ ಅಂತಾದಲ್ಲಿ ಮಾತಿಗೆ ಮಾತು, ಸಮಜಾಯಿಷಿ ಅಂತ ಕೊಡುವುದಕ್ಕೆ ಹೋಗಬೇಡಿ. ಹಣಕಾಸಿಗೆ ಸಂಬಂಧಿಸಿದಂತೆ ನೀವೇ ನಿರ್ಣಯ ತೆಗೆದುಕೊಳ್ಳಬೇಕು ಎಂಬ ಒತ್ತಡ ಬಂದಲ್ಲಿ ಪರಿಣತರು, ತಜ್ಞರು ಸಲಹೆ- ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಉದ್ಯೋಗ ಬದಲಾವಣೆಗೆ ಅವಕಾಶಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಗಂಡ- ಹೆಂಡತಿ ಮಧ್ಯೆ ತೀವ್ರ ಮನಸ್ತಾಪ, ಭಿನ್ನಾಭಿಪ್ರಾಯ ಇದ್ದಲ್ಲಿ ಬಗೆಹರಿಸಿಕೊಳ್ಳುವ ಅವಕಾಶ ಇರುತ್ತದೆ. ನೀವು ಗುರುಗಳಾಗಿ ಗೌರವಿಸುವವರ ಸೇವೆಯನ್ನು ಮಾಡಿದಲ್ಲಿ ಉತ್ತಮ.

ಇದನ್ನೂ ಓದಿ: ಗುರುಗ್ರಹದ ಸ್ಥಾನ ಬದಲಾವಣೆಯಿಂದ, ಯಾರ ಗ್ರಹಚಾರ ಬದಲಾಗಲಿದೆ

ಕಟಕ ರಾಶಿ ಫಲಾಫಲ

ನಿಮ್ಮ ರಾಶಿಗೆ ವ್ಯಯ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗಲಿದೆ. ಖರ್ಚು, ನಷ್ಟ ಕಾಣಿಸಿಕೊಳ್ಳುತ್ತದೆ. ಅದೃಷ್ಟ ಪರೀಕ್ಷೆಗೆ ಇಳಿಯಬೇಡಿ. ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ, ಅವರಿಗೆ ತುಂಬ ಒಳ್ಳೆ ಹೆಸರಿದೆ. ಹೊಸ ವ್ಯವಹಾರಕ್ಕೆ ಹಣ ಹಾಕುತ್ತೇನೆ ಎಂದೆಲ್ಲ ಹೊರಡಬೇಡಿ. ನಿಮ್ಮ ಶತ್ರುಗಳು ಖೆಡ್ಡಾಕ್ಕೆ ಕೆಡುವುವ ಸಾಧ್ಯತೆಗಳು ಹೆಚ್ಚಿವೆ. ವ್ಯಾಜ್ಯಗಳು ಕೋರ್ಟ್- ಕಚೇರಿ ಮೆಟ್ಟಿಲು ಹತ್ತಿಸಿ, ಅಲೆದಾಡುವಂತೆ ಮಾಡುತ್ತವೆ. ತಂದೆಯ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆಯಿಂದಾಗಿ ವೈದ್ಯಕೀಯ ಪರೀಕ್ಷೆ- ಚಿಕಿತ್ಸೆಗಳಿಗೆ ಹೆಚ್ಚಿನ ವೆಚ್ಚವಾಗುವ ಸನ್ನಿವೇಶಗಳು ಇರುತ್ತವೆ. ಒಂದು ವೇಳೆ ಮನೆ ಕಟ್ಟುವುದಕ್ಕೆ ಆರಂಭಿಸಿದ್ದರೆ ಅಥವಾ ಸರ್ಕಾರದ ಅನುಮತಿ- ಪರವಾನಗಿ ಅಗತ್ಯ ಇರುವಂಥ ಬೇರೆ ಯಾವುದೇ ಕೆಲಸವನ್ನು ಶುರು ಮಾಡಿದ್ದೀರಿ ಅಥವಾ ಮಾಡುತ್ತೀರಿ ಎಂದಾದಲ್ಲಿ ಕಡ್ಡಾಯವಾಗಿ ನಿಯಮಾವಳಿಗಳನ್ನು ಪಾಲಿಸಿ. ಇಲ್ಲದಿದ್ದಲ್ಲಿ ತುಂಬ ದೊಡ್ಡ ಮೊತ್ತದ ದಂಡವನ್ನು ತೆರುವಂತೆ ಆಗುತ್ತದೆ. ಅಕ್ಟೋಬರ್ ನಿಂದ ಡಿಸೆಂಬರ್ ಮೊದಲ ವಾರದ ಮಧ್ಯೆ ನಿಮ್ಮ ಆರೋಗ್ಯ, ಮನೆಯಲ್ಲಿನ ಮಕ್ಕಳ ಆರೋಗ್ಯ- ಶಿಕ್ಷಣದ ಬಗ್ಗೆ ಚಿಂತೆಗೆ ಕಾರಣ ಆಗಲಿದೆ. ದಂಪತಿ ಮಧ್ಯೆ ಕಲಹ ಏರ್ಪಡದಂತೆ ಎಚ್ಚರಿಕೆ ವಹಿಸಿ.

ಸಿಂಹ ರಾಶಿ ಫಲಾಫಲ

ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗಲಿದ್ದು, ಅಷ್ಟಮ ಶನಿಯ ಕ್ರೂರ ಪರಿಣಾಮದಿಂದ ಅಷ್ಟರ ಮಟ್ಟಿಗೆ ಒಂದು ಬಗೆಯ ತಡೆ ಆಗಲಿದೆ. ನಿಮ್ಮ ವಿವೇಚನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಇರಲಿದೆ. ದೇಹದ ತೂಕಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ಸೂಕ್ತ ಚಿಕಿತ್ಸೆ, ವೈದ್ಯೋಪಚಾರಗಳು ದೊರೆಯಲಿವೆ. ಒಂದು ವೇಳೆ ಕಾನೂನಿಗೆ ಸಂಬಂಧಿಸಿದ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅದನ್ನು ಮಾತುಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಮಕ್ಕಳ ಮದುವೆ, ಶಿಕ್ಷಣ, ಉದ್ಯೋಗ ಸೇರಿದಂತೆ ಯಾವುದೇ ವಿಚಾರ ಚಿಂತೆಯಾಗಿ ಕಾಡುತ್ತಿದ್ದಲ್ಲಿ ಅದರಿಂದ ಹೊರಬರುವ ಯೋಗ ಇರಲಿದೆ. ಕಾರು, ದ್ವಿಚಕ್ರ ವಾಹನ, ಗೃಹಾಲಂಕಾರ ವಸ್ತುಗಳು, ದೊಡ್ಡ ಅಳತೆಯ ಟೀವಿ ಇತ್ಯಾದಿಯನ್ನು ಖರೀದಿ ಮಾಡಲಿದ್ದೀರಿ. ವ್ಯಾಪಾರ- ವ್ಯವಹಾರವನ್ನು ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ಕಂಡುಬರುತ್ತವೆ. ಈ ಹಿಂದೆ ನೀವು ಪ್ರಯತ್ನ ಮಾಡಿ, ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ- ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತವೆ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಖರ್ಚಿನ ಮೇಲೆ ಹಿಡಿತ ಇರಲಿ. ವೈದ್ಯಕೀಯ ವೆಚ್ಚಗಳು ಬಹಳ ಆಗುವ ಸಾಧ್ಯತೆಗಳು ಇವೆ.

ಇದನ್ನೂ ಓದಿ: ಗುರುವಿನ ಅನುಗ್ರಹದಿಂದ ಉದ್ಯಮಕ್ಕೆ ಬಲ ಸಿಗಲಿದೆ

ಕನ್ಯಾ ರಾಶಿ ಫಲಾಫಲ

ಹತ್ತನೇ ಮನೆಯಲ್ಲಿ ಗುರು ಗ್ರಹ ಸಂಚಾರ ಆಗಲಿದ್ದು, ಭಾವನಾತ್ಮಕವಾಗಿ ನೀವು ಬಹಳ ಹಚ್ಚಿಕೊಂಡಂಥ ವ್ಯಕ್ತಿಗಳು ನಿಮ್ಮಿಂದ ದೂರ ಆಗಬಹುದು. ಅಥವಾ ಅಂಥವರ ಅನಾರೋಗ್ಯ ತೀವ್ರವಾದ ದುಃಖವನ್ನು ಉಂಟು ಮಾಡಲಿದೆ. ಆ ಮೇಲೆ ಮಾಡಿದರಾಯಿತು ಎಂದು ನೀವು ಅಂದುಕೊಂಡಿದ್ದ ಕೆಲಸಗಳು ಯಾವುದಾದರೂ ಒಂದು ಕಾರಣಕ್ಕೆ ಮುಂದಕ್ಕೆ ಹೋಗದೆ ಭಾರೀ ಚಿಂತೆಯನ್ನು ಉಂಟು ಮಾಡುತ್ತವೆ. ಉದ್ಯೋಗ ಸ್ಥಳದಲ್ಲಿ ಆಸಕ್ತಿಯಿಂದ ಕೆಲಸದಲ್ಲಿ ತೊಡಗಿಕೊಳ್ಳುವುದು ಅಸಾಧ್ಯ ಎಂಬ ಭಾವನೆ ಮೂಡಲಿದೆ. ಜವಾಬ್ದಾರಿಯಿಂದ ನೀವು ನಡೆದುಕೊಳ್ಳುತ್ತಿಲ್ಲ ಎಂಬ ಮಾತನ್ನು ಸಂಗಾತಿಯಿಂದ ಕೇಳಿಸಿಕೊಳ್ಳಬೇಕಾಗುತ್ತದೆ. ಮನೆ ನಿರ್ಮಾಣ ಮಾಡುತ್ತಿದ್ದಲ್ಲಿ ಒಂದಲ್ಲ ಒಂದು ಕಾರಣಕ್ಕೆ ವಿಳಂಬ ಆಗಲಿದೆ. ಫ್ಲ್ಯಾಟ್ ಗೆ ಈಗಾಗಲೇ ಹಣ ಪಾವತಿ ಮಾಡಿಯಾಗಿದೆ, ಪೊಸಿಷನ್ ಕೊಡುವುದು ಮಾತ್ರ ಬಾಕಿ ಎಂದೇನಾದರೂ ಕಾಯುತ್ತಾ ಇದ್ದಲ್ಲಿ ಅದು ಕೂಡ ಅಂದುಕೊಂಡ ಸಮಯಕ್ಕೆ ನಿಮಗೆ ಹಸ್ತಾಂತರ ಆಗುವುದಿಲ್ಲ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಹೊಸ ವಸ್ತುಗಳ ಖರೀದಿ ಮಾಡಲಿದ್ದೀರಿ. ಅದರಲ್ಲೂ ಸಂಗಾತಿಗಾಗಿಯೇ ಕೆಲವಷ್ಟು ಖರ್ಚುಗಳನ್ನು ಮಾಡುತ್ತೀರಿ. ಯಾವ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ವಿವೇಚನೆಯಿಂದ ವರ್ತಿಸಿ.

ತುಲಾ ರಾಶಿ ಫಲಾಫಲ

ನಿಮಗೆ ಅಷ್ಟಮ ಗುರುವಿನ ಪ್ರಭಾವದಿಂದ ಬಿಡುಗಡೆ ಸಿಗುತ್ತದೆ. ನಿಮ್ಮಲ್ಲಿ ಯಾರ್ಯಾರಿಗೆ ವರ್ಚಸ್ಸಿಗೆ ಹಾನಿ ಆಗುವಂಥ ಬೆಳವಣಿಗೆಗಳು ಆಗಿದ್ದವು ಅಂಥವರಿಗೆ ಮತ್ತೆ ಸ್ಥಾನ- ಮಾನ, ಗೌರವ, ಸಮ್ಮಾನಗಳು ದೊರೆಯಲಿವೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ಹಂಚಿಕೆ ನಿರೀಕ್ಷೆಯಲ್ಲಿದ್ದರೆ ಅದು ಸಾಧ್ಯವಾಗಲಿದೆ. ದೇಹಾಲಸ್ಯ, ಸುಸ್ತು, ಯಾವ ಕೆಲಸವನ್ನೂ ಆಸಕ್ತಿಯಿಂದ ಮಾಡಲು ಸಾಧ್ಯವಾಗದೆ ಒದ್ದಾಟ ಅನುಭವಿಸುತ್ತಿದ್ದಿರಿ ಅಂತಾದಲ್ಲಿ ಆ ಸಮಸ್ಯೆಗಳಿಂದ ಹೊರ ಬರಲಿದ್ದೀರಿ. ಸೋದರ ಅಥವಾ ಸೋದರಿಯರ ಜೊತೆಗೆ ಈಗಾಗಲೇ ಮನಸ್ತಾಪ ಇತ್ತು ಎಂದಾದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ದೇಹದ ತೂಕದ ಸಮಸ್ಯೆ, ಕೊಲೆಸ್ಟ್ರಾಲ್, ಮಧುಮೇಹದಂಥ ಸಮಸ್ಯೆಗಳು ತೀವ್ರವಾಗಿ ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ದೊರೆಯುವ ಯೋಗ ಇದೆ. ಒಂದು ವೇಳೆ ಇಲ್ಲಿಯ ತನಕ ಔಷಧವು ದೇಹಕ್ಕೆ ಕೆಲಸ ಮಾಡುತ್ತಿಲ್ಲ ಎಂದಾದಲ್ಲಿ ಈಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಆರಂಭವಾಗುತ್ತದೆ. ಈ ಹಿಂದೆ ನೀವು ಮಾಡಿದ ಕೆಲವು ತಪ್ಪುಗಳು ಮತ್ತೆ ಮಾಡುವಂತೆ ಆಕರ್ಷಣೆ ಆಗುತ್ತದೆ. ಇದರಿಂದ ದೂರ ಇರುವುದು ಬಹಳ ಮುಖ್ಯ. ಸಾಂಸಾರಿಕವಾಗಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ.

ವೃಶ್ಚಿಕ ರಾಶಿ ಫಲಾಫಲ

ಇಲ್ಲಿಯ ತನಕ ಏಳನೇ ಮನೆಯಲ್ಲಿರುವ ಗುರು ಗ್ರಹದ ಶುಭ ಫಲದ ಅನುಭವ ಪಡೆದಂಥ ನಿಮಗೆ ಅಷ್ಟಮ ಗುರು ಸಂಚಾರ ಇದಾಗಿರಲಿದೆ. ಹಣಕಾಸಿನ ಹರಿವಿನಲ್ಲಿ ಭಾರೀ ಏರಿಳಿತ, ಅಡೆತಡೆಗಳು ಇರುತ್ತದೆ. ವಿವಾಹಿತರು, ಪ್ರೇಮಿಗಳಿಗೆ ಕಲಹ- ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುತ್ತವೆ. ನಿಮ್ಮಲ್ಲಿ ಕೆಲವರಿಗೆ ಡಿವೋರ್ಸ್ ತನಕ ಹೋಗಬಹುದು ಅಥವಾ ಡಿವೋರ್ಸ್ ಆಗಿಯೇ ಬಿಡಬಹುದು. ಮಾತಿನ ಮೇಲೆ ಲಕ್ಷ್ಯ ಇಟ್ಟುಕೊಳ್ಳುವುದು ಮುಖ್ಯ. ಏಕಾಗ್ರತೆ ಸಾಧ್ಯವೇ ಆಗದಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ನೆನಪು ಕೈ ಕೊಡುತ್ತದೆ, ಮರೆವಿನ ಕಾರಣದಿಂದಾಗಿ ನಷ್ಟಗಳನ್ನು ಅನುಭವಿಸುತ್ತೀರಿ. ಈಗಾಗಲೇ ನಿಶ್ಚಿತಾರ್ಥ ಆಗಿದೆ, ಮದುವೆಗೆ ಕೆಲವೇ ದಿನ ಇದೆ ಅಂತ ಇದ್ದಲ್ಲಿ ತಮಾಷೆಗೆ ಆಡಿದಂಥ ಮಾತುಗಳು ಸಹ ದೊಡ್ಡ ಸಮಸ್ಯೆಯಾಗಿ ನಿಂತುಕೊಂಡು ಬಿಡುತ್ತವೆ. ಈ ಅವಧಿಯಲ್ಲಿ ಪೊಲೀಸ್ ಸ್ಟೇಷನ್, ಕೋರ್ಟ್- ಕಚೇರಿ ಅಲೆದಾಟ ಮಾಡಬೇಕಾಗಬಹುದು. ನೀವಾಗಿಯೇ ವ್ಯಾಜ್ಯಕ್ಕೆಂದು ದೂರು ಕೊಡುವುದೋ ಅಥವಾ ಕೋರ್ಟ್ ಗೆ ಹೋಗುವುದೋ ಮಾಡುವ ಮುಂಚಿತವಾಗಿ ಸಾಧಕ- ಬಾಧಕಗಳನ್ನು ಆಲೋಚಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಿದ್ದಲ್ಲಿ ಉತ್ತಮ. ಈ ಮಧ್ಯೆ ಆಸ್ತಿ ಖರೀದಿ, ಮಾರಾಟಕ್ಕೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆಗಳನ್ನು ನಿರೀಕ್ಷಿಸಬಹುದು.

ಧನಸ್ಸು ರಾಶಿ ಫಲಾಫಲ

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ವಿವಾಹಿತರಾಗಿದ್ದಲ್ಲಿ ದಂಪತಿ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿ ಆಗುತ್ತದೆ. ಪ್ರೇಮಿಗಳಾಗಿದ್ದಲ್ಲಿ ಸಂಬಂಧ ಮತ್ತೂ ಗಟ್ಟಿಯಾಗುತ್ತದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಯಶಸ್ಸು ದೊರೆಯಲಿದೆ. ವಿದೇಶ ಪ್ರಯಾಣ ಮಾಡಬೇಕು, ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಸಂಗ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ದೈಹಿಕ ದೃಢತೆಗೆ ಆದ್ಯತೆ ನೀಡಲಿದ್ದೀರಿ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ತನಕ ಒಂದು ವೇಳೆ ಏನಾದರೂ ಗೊಂದಲಗಳು ಕಾಡುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಈಗಾಗಲೇ ಸೈಟಿದೆ ಎಂದಾದಲ್ಲಿ ಅಲ್ಲಿ ಮನೆ ಕಟ್ಟಬೇಕು ಎಂದುಕೊಳ್ಳುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ಕೃಷಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕು ಎಂದೇನಾದರೂ ಅಂದುಕೊಳ್ಳುತ್ತಿದ್ದಲ್ಲಿ ಅದು ಕೂಡ ಸಾಧ್ಯವಾಗಲಿದೆ. ಬೋರ್ ವೆಲ್ ಕೊರೆಸಬೇಕು, ತಂತಿ- ಬೇಲಿ ಹಾಕಿಸಬೇಕು, ವಿದ್ಯುತ್ ಸಂಪರ್ಕ ಪಡೆಯಬೇಕು ಹೀಗೇನಾದರೂ ಆಲೋಚಿಸುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ಬೇಡ. ಖರ್ಚಿನ ಮೇಲೆ ಹಿಡಿತ ಇರುವುದು ತುಂಬ ಮುಖ್ಯ.

ಮಕರ ರಾಶಿ ಫಲಾಫಲ

ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಹೆಸರು ಕೆಡದಂತೆ ಇರುವ ಕಡೆಗೆ ಹೆಚ್ಚಿನ ಗಮನ ವಹಿಸಬೇಕು. ನಿಮಗೆ ಗೊತ್ತಿರುವ ವಿಚಾರ, ಮಾಹಿತಿ, ವಿಷಯ ಏನೇ ಇದ್ದರೂ ಅದನ್ನು ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಖಚಿತ ಪಡಿಸಿಕೊಂಡು, ಆ ನಂತರ ಮಾತನಾಡುವುದು ಒಳ್ಳೆಯದು. ನಿಮಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ನಾನು ಹೇಳಿದ್ದೇ ಸರಿ ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ನಿಮಗೆ ಬಹಳ ಹತ್ತಿರವಾದ ಗೆಳೆಯರನ್ನೂ ಶತ್ರುಗಳನ್ನಾಗಿ ಮಾಡಿಕೊಂಡು ಬಿಡ್ತೀರಿ. ಪ್ರತಿಷ್ಠೆಗಾಗಿ ಖರ್ಚು ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಇನ್ ಟ್ಯೂಷನ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುವುದು ಉತ್ತಮ. ಒಂದು ವೇಳೆ ನಿಮ್ಮಿಂದ ತಪ್ಪಾಗಿದೆ ಎಂಬುದು ಖಾತ್ರಿಯಾದಲ್ಲಿ ಯಾವುದೇ ಬಿಗುಮಾನ ಮಾಡದೆ ಕ್ಷಮೆ ಕೇಳಿ. ಆರೋಗ್ಯದಲ್ಲಿಯೂ ವ್ಯತ್ಯಾಸಗಳನ್ನು ಅನುಭವಿಸುತ್ತೀರಿ. ವೈದ್ಯಕೀಯ ಪರೀಕ್ಷೆ, ಚಿಕಿತ್ಸೆಗಳಿಗೆ ಬಹಳ ಖರ್ಚಾಗುತ್ತದೆ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಮದುವೆ ನಿಶ್ಚಯ ಆಗುವ ಅಥವಾ ಮದುವೆಯೇ ಆಗಿಬಿಡುವ ಯೋಗ ಇದೆ. ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರ ಜತೆಗೆ ಉತ್ತಮ ಬಾಂಧವ್ಯ ಮುಖ್ಯ.

ಕುಂಭ ರಾಶಿ ಫಲಾಫಲ

ನಿಮಗೆ ಇನ್ನು ಪಂಚಮದ ಗುರುವಿನ ಉತ್ತಮ ಪ್ರಭಾವ ಇರುತ್ತದೆ. ಇಂಥ ಸಮಯದಲ್ಲಿ ಸ್ವಂತ ಮನೆ ಆಗಬಹುದು, ಫ್ಲ್ಯಾಟ್ ಖರೀದಿ, ಕಾರು ಕೊಳ್ಳುವುದು ಇತ್ಯಾದಿ ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ, ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಇದೆ. ವ್ಯಾಪಾರ- ವ್ಯವಹಾರಗಳನ್ನು ಹೊಸದಾಗಿ ಪ್ರಾರಂಭಿಸುವುದಕ್ಕೆ ಸಹ ಇದು ಉತ್ತಮ ಸಮಯ ಆಗಲಿದೆ. ಇಷ್ಟು ಸಮಯ ಶ್ರಮ ಹಾಕಿದ ನಂತರವೂ ಫಲ ದೊರೆಯುತ್ತಿಲ್ಲ ಎಂದೇನಾದರೂ ಕೊರಗುತ್ತಾ ಇದ್ದಲ್ಲಿ ಅದರಿಂದ ಹೊರಬರಲಿದ್ದೀರಿ. ನಿಮಗೆ ಬರಬೇಕಾದ ಸಾಲ ಇದ್ದಲ್ಲಿ ಅದಕ್ಕಾಗಿ ಪ್ರಯತ್ನಿಸಿದರೆ ವಾಪಸ್ ಬರಲಿದೆ. ಮುಖ್ಯವಾಗಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರಬರುವುದಕ್ಕೆ ಸಾಧ್ಯವಾಗಲಿದೆ. ನಾಲ್ಕಾರು ಕಡೆ ಸಾಲ ತೆಗೆದುಕೊಂಡು ಬಿಟ್ಟಿದ್ದೀನಿ, ಆ ಎಲ್ಲವೂ ಸೇರಿ ಒಂದೇ ಕಡೆಗೆ ಹಣ ಕಟ್ಟಿಕೊಂಡು ಹೋಗುವಂತಾದಲ್ಲಿ ಅನುಕೂಲ ಎಂದೇನಾದರೂ ನೀವು ಆಲೋಚಿಸುತ್ತಾ ಇದ್ದಲ್ಲಿ ಅದು ಸಾಧ್ಯವಾಗಲಿದೆ. ಪ್ರಮೋಷನ್, ವೇತನ ಹೆಚ್ಚಳ ಇಂಥದ್ದರ ನಿರೀಕ್ಷೆಯಲ್ಲಿ ಇದ್ದೀರಿ ಅಂತಾದಲ್ಲಿ ಅದು ಈಡೇರಲಿದೆ. ಕೆಲಸ ಪೂರ್ತಿ ಆಗುವ ಮುಂಚೆಯೇ ಆತುರ ಪಡಬೇಡಿ, ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಹೀಗೆ ಮಾಡುವುದರಿಂದ ಶುಭವನ್ನು ನಿರೀಕ್ಷಿಸಬಹುದು.

ಮೀನ ರಾಶಿ ಫಲಾಫಲ

ನಿಮ್ಮ ರಾಶ್ಯಾಧಿಪತಿಯೇ ಆದಂಥ ಗುರು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ. ವಿಲಾಸಿಯಾದ ಕಾರನ್ನೋ ವಿಲಾಸಿಯಾದ ಬೈಕೋ ಅಥವಾ ದುಬಾರಿ ಬಾಡಿಗೆಯ ಮನೆಯನ್ನೋ ನೀವು ಆರಿಸಿಕೊಳ್ಳಬಹುದು. ನಿಮ್ಮ ಕೈಯಲ್ಲಿ ಹಣವೇ ಇರದೆ ಅಥವಾ ನಿಮ್ಮ ಬಜೆಟ್ ಮೀರಿದ ಮನೆ/ಫ್ಲ್ಯಾಟ್ ಖರೀದಿ ಮಾಡಿ ಒತ್ತಡಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಜತೆಗೆ ಸ್ನೇಹವನ್ನು ಕಳೆದುಕೊಳ್ಳಲಿದ್ದೀರಿ. ಬೊಜ್ಜು, ಕೊಲೆಸ್ಟ್ರಾಲ್, ಕಾಲು ನೋವಿನ ವಿಪರೀತವಾದ ಸಮಸ್ಯೆ ನಿಮ್ಮನ್ನು ಕಾಡಬಹುದು. ಅಗತ್ಯವೇ ಇಲ್ಲದಂಥ ಕೆಲವು ವಸ್ತುಗಳನ್ನು ಖರೀದಿಸಿ ತಂದು, ಆ ನಂತರ ಪರಿತಪಿಸುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಖರ್ಚಿನ ಮೇಲೆ ನಿಗಾ ಇರಿಸಿಕೊಳ್ಳಿ. ಯೋಗ, ಜಿಮ್ ಇಂಥ ಅಭ್ಯಾಸವನ್ನು ಇರಿಸಿಕೊಂಡಿದ್ದಲ್ಲಿ ನಾನಾ ಕಾರಣಗಳಿಂದ ಅಡೆತಡೆಗಳು ಎದುರಾಗಬಹುದು ಅಥವಾ ನಿಮಗೇ ಮನಸ್ಸು ಬಾರದೆ ಆಲಸ್ಯ ಮಾಡಬಹುದು. ಹೀಗೆ ಮಾಡುವುದರಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಇನ್ನು ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಉದ್ಯೋಗ ಬದಲಾವಣೆ ಸಾಧ್ಯತೆ, ಸೋಷಿಯಲ್ ಕಾಂಟ್ಯಾಕ್ಟ್ ಜಾಸ್ತಿಯಾಗುವುದರಿಂದ ಕೆಲವು ಅನುಕೂಲಗಳು ಆಗಲಿವೆ.

ಮಿಥುನ ರಾಶಿಯಲ್ಲಿ ಗುರು ಗ್ರಹ ಸಂಚಾರ; ದ್ವಾದಶ ರಾಶಿಗಳಿಗೆ ಪರಿಹಾರ

ಮಿಥುನ, ಕರ್ಕಾಟಕ, ವೃಶ್ಚಿಕ, ಮಕರ ಈ ನಾಲ್ಕು ರಾಶಿಯವರು ಗುರುವಿನ ಆರಾಧನೆ ಮಾಡಿಕೊಳ್ಳುವುದು ಮುಖ್ಯ. ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗುವುದು, ಸಾಯಿಬಾಬ ಮಂದಿರಕ್ಕೆ ಹೋಗುವುದು ಈ ರೀತಿಯಾಗಿ ನೀವು ನಂಬುವ- ಆರಾಧಿಸುವ ಗುರುಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ; ಗುರು ಗ್ರಹದ ನಕಾರಾತ್ಮಕ ಪ್ರಭಾವವು ಕಡಿಮೆ ಆಗುತ್ತದೆ. ಯಾವುದೇ ಬಾಧೆ- ಸಮಸ್ಯೆಗಳಿಂದ ಹೊರಬರಬಹುದು. ಕೆಲವರು ತಮ್ಮ ಜಾತಕದಲ್ಲಿನ ಗುರು ಗ್ರಹದ ಸ್ಥಿತಿಯನ್ನು ಗಮನಿಸಿ, ಕನಕ ಪುಷ್ಯರಾಗದ ಹರಳನ್ನು ಧರಿಸುತ್ತಾರೆ. ಇಲ್ಲದಿದ್ದರೆ ಗುರುವಾರದ ದಿನ ಗುರುಗಳಿಗೆ ವಸ್ತ್ರ ಸಮರ್ಪಣೆ ಮಾಡುತ್ತಾರೆ. ಇನ್ನು ಅದೇ ರೀತಿ ಗುರುವಾರದಂದು ಹಳದಿ ಬಟ್ಟೆಯಲ್ಲಿ ಹಸಿ ಕಡ್ಲೇಕಾಳು (ಮೂರು ಹಿಡಿಯಷ್ಟು) ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ- ದಕ್ಷಿಣೆ ಸಹಿತ ದಾನ ಮಾಡುತ್ತಾರೆ. ಜನ್ಮ ಜಾತಕವನ್ನು ಒಮ್ಮೆ ಪರಿಶೀಲನೆ ಮಾಡಿಸಿಕೊಂಡು, ಮುಂದುವರಿಯುವುದು ಉತ್ತಮ ಹಾಗೂ ಕ್ಷೇಮ.

– ಸ್ವಾತಿ ಎನ್.ಕೆ.

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ