Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 4ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕಿರು ಪ್ರವಾಸ, ಪ್ರಯಾಣ ಮಾಡುವಂಥ ಯೋಗ ಇದೆ. ಏನಾದರೂ ಆತುರ ಮಾಡಿಕೊಂಡು, ಅಥವಾ ಎಲ್ಲಿಯಾದರೂ ಒಂದು ಸ್ಥಳದಲ್ಲಿ ತಪ್ಪಿಹೋಗಿ ಅಥವಾ ಯಾವುದಾದರೂ ಕೆಲಸದಲ್ಲಿ ಬಿಡುವಿಲ್ಲದಂತಾಗಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಮಹಿಳೆಯರಿಗೆ ತವರು ಮನೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗೀ ಆಗಬೇಕೆಂದು ಆಹ್ವಾನ ಬರುವಂಥ ಸಾಧ್ಯತೆ ಇದೆ. ಬೆನ್ನು ಹುರಿ, ಕೈ ಮಣಿಕಟ್ಟಿನ ನೋವು ಕಾಡುವಂಥ ಸಾಧ್ಯತೆ ಇದೆ. ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ದಿನ ಹಲವು ಕೆಲಸ, ಜವಾಬ್ದಾರಿಗಳನ್ನು ಮೈ ಮೇಲೆ ಹಾಕಿಕೊಂಡು ಮಾಡಬೇಕಾಗುತ್ತದೆ. ಒಂದಿಷ್ಟು ತಾಳ್ಮೆಯನ್ನು ಸಹ ಕಳೆದುಕೊಳ್ಳುತ್ತೀರಿ. ನೆನಪಿಟ್ಟುಕೊಳ್ಳಿ, ನಿಮ್ಮ ಅಸಹಾಯಕತೆಯನ್ನು ಮನೆಯವರು, ಸ್ನೇಹಿತರು ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ಕೂಗಾಡುವುದರ ಮೂಲಕ ತೀರಿಸಿಕೊಳ್ಳುವುದು ಸರಿಯಲ್ಲ. ನಿಮ್ಮ ಪಾಲಿನ ಅತಿ ಮುಖ್ಯವಾದ ದಿನ ಇದು. ನೆನಪು, ತಾಳ್ಮೆ, ಸಂಯಮ ಇರಿಸಿಕೊಂಡು, ವರ್ತಿಸಿ. ವಾಹನ ಚಾಲನೆ ಮಾಡುವಾಗಲೂ ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಯಾವುದು ಸುಳ್ಳು ಹಾಗೂ ಯಾವುದರಲ್ಲಿ- ಯಾರಲ್ಲಿ ಎಷ್ಟಿದೆ ಸತ್ಯ ಎಂಬುದು ಈ ದಿನ ತುಂಬ ಸ್ಪಷ್ಟವಾಗಿ ನಿಮಗೆ ಗೊತ್ತಾಗುತ್ತದೆ. ಇನ್ನೊಬ್ಬರು ನಿಮ್ಮ ಎಲ್ಲ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟಾಗಲಿದ್ದೀರಿ. ಮೇಲ್ನೋಟಕ್ಕೆ ಕಂಡಿದ್ದನ್ನು ಸತ್ಯ ಎಂದು ನಂಬಬಾರದು ಎಂದು ಅನುಭವಕ್ಕೆ ಬರುತ್ತದೆ. ಮನೆಗೆ ಗೃಹೋಪಯೋಗಿ ವಸ್ತುಗಳೋ ಅಥವಾ ಪೀಠೋಪಕರಣಗಳನ್ನು ತರುವುದಕ್ಕೆ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಾಗ ವೆಚ್ಚದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ವ್ಯಕ್ತಿಗೆ ಯಾಕಾದರೂ ಸಲಹೆ- ಮಾರ್ಗದರ್ಶನ ನೀಡಿದೆ ಎಂದು ನಿಮ್ಮ ಬಗ್ಗೆ ನಿಮಗೇ ಬೇಸರ ಆಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಏಕೆಂದರೆ, ಎಲ್ಲಕ್ಕೂ ಆತ ಅಥವಾ ಆಕೆ ನಿಮ್ಮ ಮೇಲೆ ಅವಲಂಬನೆ ಆಗಲಿದ್ದಾರೆ ಹಾಗೂ ನಿಮ್ಮದೇ ಸ್ವಂತ ಕೆಲಸವನ್ನೂ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡದೆ ಬಿಟ್ಟೂ ಬಿಡದೆ ಕಾಡಲಿದ್ದಾರೆ. ಕುಟುಂಬದವರ ಸಲುವಾಗಿ ಹೆಚ್ಚಿನ ಸಮಯ, ಹಣ ಮೀಸಲಿಡಬೇಕು ಎಂದು ದಿನದ ಕೊನೆಗೆ ಅನಿಸಿದರೆ ಯಾವುದೇ ಪ್ರಯೋಜನ ಇಲ್ಲ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಪೋಷಕರು ಅಥವಾ ನಿಮಗೆ ತುಂಬ ಹತ್ತಿರದವರಿಗೆ ಹೆಚ್ಚಿನ ಪ್ರೀತಿ, ವಾತ್ಸಲ್ಯ, ಅಕ್ಕರೆಯ ಅಗತ್ಯ ಇದೆ ಎಂದೆನಿಸುತ್ತದೆ. ಭಾವನಾತ್ಮಕವಾಗಿ ಬಹಳ ವಿಷಯಗಳು ಈ ದಿನ ನಿಮ್ಮನ್ನು ಕಾಡಲಿವೆ. ವೈದ್ಯರು, ಶಿಕ್ಷಕರು, ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ, ವೇತನ ಹೆಚ್ಚಳದ ಸಾಧ್ಯತೆ ಇದೆ. ಮಹಿಳೆಯರಿಗೆ ರಕ್ತದ ಕೊರತೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಹೀಗಾದಲ್ಲಿ ಕಡ್ಡಾಯವಾಗಿ ಸೂಕ್ತ ವೈದ್ಯರನ್ನು ಭೇಟಿ ಮಾಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು, ಸಿನಿಮಾ ರಂಗದಲ್ಲಿ ಇರುವವರು, ರಾಜಕಾರಣದಲ್ಲಿ ಇರುವವರಿಗೆ ವಿವಿಧ ಅವಕಾಶಗಳು ದೊರೆಯಲಿವೆ, ಮುಖ್ಯವಾಗಿ ನಿಮ್ಮ ಪ್ರಭಾವಲಯ ವಿಸ್ತರಣೆ ಆಗಲಿದೆ. ಇತರರು ಸಾಮಾನ್ಯಕ್ಕೆ ಒಪ್ಪಿಕೊಳ್ಳಲು ಹಿಂಜರಿಯುವ ಕೆಲಸವನ್ನು ನೀವು ಪಡೆದುಕೊಂಡು, ತುಂಬ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ, ಅಡುಗೆ ಮನೆಯಲ್ಲಿ ಗಾಜಿನ ವಸ್ತುಗಳು, ತುಂಬ ಸೂಕ್ಷ್ಮವಾದ ಪಿಂಗಾಣಿ ಪದಾರ್ಥಗಳನ್ನು ಜೋಪಾನವಾಗಿ ಬಳಸಿ. ಈ ದಿನ ಇವುಗಳು ಒಡೆದು, ಮನಸ್ಸಿಗೂ ಬೇಸರ- ಜೇಬಿಗೂ ನಷ್ಟ ಎಂದಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಬಗ್ಗೆ ಇತರರಿಗೆ ನಿರೀಕ್ಷೆಗಳು ಜಾಸ್ತಿ ಆಗುತ್ತವೆ. ಇನ್ನೂ ಮುಂದೆಲ್ಲೋ ಡೆಡ್ ಲೈನ್ ಇದೆ ಎಂದುಕೊಂಡು ಆರಾಮವಾಗಿ ಮಾಡುತ್ತಿದ್ದ ಕೆಲಸವೊಂದನ್ನು ಈ ಕೂಡಲೇ ಈ ದಿನವೇ ಅಥವಾ ಆದಷ್ಟು ಬೇಗ ಮುಗಿಸಿಕೊಡುವಂತೆ ದುಂಬಾಲು ಬೀಳಲಿದ್ದಾರೆ. ಯಾವತ್ತೋ ನಿಮಗೆ ಕಂಡಿದ್ದ ವ್ಯಕ್ತಿ ದಿಢೀರ್ ಎಂದು ಹಣಕಾಸು ಸಾಲವನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಸೋದರಮಾವನ ಜತೆಗೆ ಮಾತನಾಡುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಿ. ನಿಮಗೆ ಗೊತ್ತಿಲ್ಲದ ವಿಚಾರ ಆಗಿದ್ದಲ್ಲಿ ಮೌನವೇ ಒಳ್ಳೆಯದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಪುಷ್ಕಳವಾದ, ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯುವ ಯೋಗ ನಿಮ್ಮ ಪಾಲಿಗಿದೆ. ಸ್ನೇಹಿತರು, ಸಂಬಂಧಿಕರು ತಮ್ಮ ಮನೆಗೆ ಬರುವಂತೆ ನಿಮಗೆ ಆಹ್ವಾನ ನೀಡಬಹುದು. ಕಫ- ಶೀತದಂಥ ಸಮಸ್ಯೆಗಳು ಒಂದಿಷ್ಟು ಕಾಡಲಿದೆ. ಯಾವುದಾದರೂ ಮುಖ್ಯ ವಸ್ತುಗಳನ್ನು ಎಲ್ಲಾದರೂ ಇಟ್ಟು, ಅದನ್ನು ಮರೆತುಹೋಗಿ ವಿಪರೀತ ಹುಡುಕಾಡುವಂತೆ ಆಗುತ್ತದೆ. ದುಬಾರಿ ಶೂ, ವಾಚ್, ಸುಗಂಧ ದ್ರವ್ಯ ಇಂಥವುಗಳ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವವರಿಗೆ ಪ್ರಭಾವಿಗಳ ಸ್ನೇಹ- ಸಂಬಂಧ ಸಿಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಬುದ್ಧಿಯು ಅದೆಷ್ಟು ಚುರುಕಾಗಿ ಕೆಲಸ ಮಾಡಲಿದೆ ಅಂದರೆ ನೀವೇ ಸ್ವತಃ ಅಚ್ಚರಿ ಆಗುವ ಸಾಧ್ಯತೆಗಳಿವೆ. ರೆಸಾರ್ಟ್, ಪಬ್, ರೆಸ್ಟೋರೆಂಟ್ ಇಂಥವುಗಳಿಗೆ ಉದ್ಯೋಗದ ವಿಚಾರವಾಗಿ ತೆರಳುವ ಯೋಗ ಇದೆ. ಇನ್ನು ಕೆಲವರು ಕುಟುಂಬದವರನ್ನು ಕರೆದೊಯ್ಯಲಿದ್ದೀರಿ. ದಾನ- ಧರ್ಮ, ಅಧ್ಯಾತ್ಮ ವಿಚಾರಗಳಿಗೆ ಪ್ರಾಮುಖ್ಯ ನೀಡಲಿದ್ದೀರಿ. ಈ ಹಿಂದೆ ನೆರವು ನೀಡಿದ ವ್ಯಕ್ತಿಯೊಬ್ಬರು ಈ ದಿನ ಭೇಟಿ ಆಗಿ, ಕೃತಜ್ಞತೆ ಹೇಳಬಹುದು. ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಮೂಡಲಿದೆ.
ಲೇಖನ- ಎನ್.ಕೆ.ಸ್ವಾತಿ