ತುಳುನಾಡಿನ ವಿಶಿಷ್ಟ ಸಂಪ್ರದಾಯ; ಆಷಾಢದಲ್ಲಿ ಊರಿನ ಮಾರಿ ಕಳೆಯಲು ಬರುವನು ಆಟಿ ಕಳಂಜ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು (ತುಳು ಭಾಷಿಗರು) ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಈತ ಊರಿಗೆ ಅಂಟಿದ ರೋಗ ರುಜಿನಗಳನ್ನು ನಿವಾರಿಸುವ ಮಾಂತ್ರಿಕ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆಷಾಢ ಮಾಸದಲ್ಲಿ ಮಾತ್ರ ಬರುವ ಈ ಆಟಿ ಕಳಂಜನ ಬಗ್ಗೆ, ತುಳುನಾಡಿನ ನಂಬಿಕೆ ಸಂಪ್ರದಾಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ತುಳುನಾಡಿನ ವಿಶಿಷ್ಟ ಸಂಪ್ರದಾಯ; ಆಷಾಢದಲ್ಲಿ ಊರಿನ ಮಾರಿ ಕಳೆಯಲು ಬರುವನು ಆಟಿ ಕಳಂಜ
ಆಟಿ ಕಳಂಜImage Credit source: Wiki
Follow us
|

Updated on: Jun 24, 2024 | 2:20 PM

ತುಳುನಾಡಿನಲ್ಲಿರುವ (Tulunadu) ವಿಶಿಷ್ಟ ಆಚರಣೆಗಳಲ್ಲೊಂದು ಆಟಿ ಕಳಂಜ (Aati Kalenja). ತುಳುವಿನಲ್ಲಿ ಆಟಿ ತಿಂಗಳು ಅಂದರೆ ಆಷಾಢ ಮಾಸ. ಜೋರು ಮಳೆ ಬರುವ ಈ ಹೊತ್ತಲ್ಲಿ ಕೃಷಿ ಕೆಲಸಗಳು, ಹಬ್ಬವಾಗಲೀ ಶುಭ ಕಾರ್ಯವಾಗಲೀ ನಡೆಯುವುದಿಲ್ಲ. ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲ. ಹೀಗೆ ಊರಿಗೇ ಊರೇ ತಾಪತ್ರಯ ಎದುರಿಸುವಾಗ ಊರಿನ ಮಾರಿ ಕಳೆಯಲು ಮನೆಗೆ ಮನೆಗೆ ಬರುತ್ತಾನೆ ಆಟಿ ಕಳಂಜ. ಆಟಿ ಅಂದರೆ ಆಷಾಢ, ಕಳಂಜ/ಕಳೆಂಜ ಅಂದ್ರೆ ಕಳೆಯುವವನು ಎಂದರ್ಥ. ಆಷಾಢ ಮಾಸದ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ ಈಗೀಗ ಅಪರೂಪ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು (ತುಳು ಭಾಷಿಗರು) ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಆಟಿ ಕಳಂಜೆ ಬತ್ತುಂಡ್ ( ಆಟಿ ಕಳಂಜ ಬಂದ) ಎಂದು ಆಟಿ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡುವುದನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣಬಹುದು. ಈ ಜಾನಪದ ಸಂಪ್ರದಾಯದ ಬಗ್ಗೆ  ಮತ್ತಷ್ಟು ತಿಳಿಯೋಣ…

ಆಟಿ ಕಳಂಜನೆಂಬ ನಂಬಿಕೆ

ಆಷಾಢ ತಿಂಗಳು ಅಂದರೆ ಜೋರು ಮಳೆಗಾಲ ಬೇರೆ ಹೀಗಾಗಿ ಊರಿನಲ್ಲಿ ಮನುಷ್ಯರಿಗೆ ಪ್ರಾಣಿಗಳಿಗೆ ಕಾಯಿಲೆ ಹರಡುವುದು ಸರ್ವೇ ಸಾಮಾನ್ಯ. ಇಂಥಾ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎಂದೇ ಭಾವಿಸುತ್ತಾರೆ. ಈ ಮಾರಿಯನ್ನು ಕಳೆಯಲು ಬರುವವನೇ ಆಟಿ ಕಳಂಜ. ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನಾಂಗದವರು ಈ ವೇಷ ತೊಡುತ್ತಾರೆ. ಕಾಸರಗೋಡು ಕಡೆ ಕೋಪಾಳರು ಕಳಂಜ ವೇಷಧಾರಿಗಳಾದರೆ , ಮಲಯ ಜನಾಂಗದವರು ಬೇಡ ಕುಣಿತವನ್ನೂ, ವಣ್ಣನ್ ಜನಾಂಗದವರು ಮರ್ದ ವೇಷಧಾರಿಗಳಾಗಿ ಇದೇ ರೀತಿ ಮನೆಮನೆಗೆ ಭೇಟಿ ನೀಡುತ್ತಾರೆ.

ಕಳಂಜೆ ಕಳೆಂಜನೋ ಕಳಂಜೆ ಏರ್ನ ಮಗೆನೂ ಕಳಂಜೆ ಎಂಬ ಪಾಡ್ಡನದೊಂದಿಗೆ ತೆಂಬೆರೆ (ಚರ್ಮದ ವಾದ್ಯ) ನುಡಿಸುವವರ ಜತೆಗೆ ಕುಣಿಯುತ್ತಾ ಬರುತ್ತಾನೆ ಆಟಿ ಕಳಂಜ. ಆಟಿದ ದೊಂಬು ಆನೆತ ಬೆರಿ ಪುಡಪು ಎಂದು ತುಳಿವಿನಲ್ಲಿ ಗಾದೆ ಇದೆ. ಇದರ ಅರ್ಥ ಅದೆಷ್ಟು ಬಿಸಿಲು ಅಂದರೆ ಆ ಬಿಸಿಲಿನ ಝಳಕ್ಕೆ ಆನೆಯ ಬೆನ್ನೂ ಒಡೆದು ಹೋಗುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಆಷಾಢ ಎಂದರೆ ಮಳೆಗಾಲ. ಈ ಹೊತ್ತಲ್ಲಿ ಸರಿಯಾದ ಮಳೆ ಬರದಿದ್ದರೆ ನೀರಿನ ಅಭಾವವೂ ಇರುತ್ತದೆ. ಇನ್ನು ಮಳೆ ಬಂದಾಗ ಶೀತ, ನೆಗಡಿ, ಇನ್ನಿತರ ರೋಗಗಳು ಬರುವುದು ಸಾಮಾನ್ಯ. ಈ ಹೊತ್ತಲ್ಲಿ ಆಟಿಕಳೆಂಜ ಬಂದು ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನರದ್ದು.

ವೇಷ ಭೂಷಣ

ಆಟಿ ಕಳಂಜ ವೇಷಧಾರಿ ಹದಿಹರೆಯದ ಹುಡುಗನೇ ಆಗಿರುತ್ತಾನೆ. ಕಾಲಿಗೆ ಗಗ್ಗರ(ಗೆಜ್ಜೆ), ಸೊಂಟಕ್ಕೆ ತೆಂಗಿನ ಗರಿ , ಕೆಂಪು ನಿಲುವಂಗಿ, ಮುಖಕ್ಕೆ ಕೆಂಪು ಬಳಿದು ಅದರಲ್ಲಿ ಕಪ್ಪು ಬಿಳಿ ಚುಕ್ಕಿ, ಮುಖದಲ್ಲಿ ಮೀಸೆ ಬರೆದು ಕೈಯಲ್ಲಿ ತಾಳೆಗರಿಯಿಂದ ಮಾಡಿದ ಕೊಡೆ, ಕೇಪುಳ ಹೂವಿನಿಂದ ಸಿಂಗರಿಸಿದ ಮುಟ್ಟಳೆ (ಹಾಳೆಯಿಂದ ಮಾಡಿದ ಟೋಪಿ)ಧರಿಸಿ ಕುಣಿಯುತ್ತಾ ಆಟಿ ಕಳಂಜ ಕುಣಿಯುತ್ತಾ ಬರುತ್ತಾನೆ. ಜತೆಗೆ ಇಬ್ಬರು ಸಹಾಯಕರು ಇರುತ್ತಾರೆ. ಇವರಲ್ಲಿ ಒಬ್ಬ ಸಹಾಯಕ ಕಳಂಜನ ಬಗ್ಗೆ ವಿವರಿಸುವ ಪಾಡ್ದನಗಳನ್ನು ಹೇಳುತ್ತಾ ತೆಂಬರೆ ಬಾರಿಸುತ್ತಾ ಬರುತ್ತಾನೆ. ಇನ್ನೊಬ್ಬ ಸಹಾಯಕ ಊರಿನವರು ಕಳಂಜನಿಗಾಗಿ ಕೊಟ್ಟ ವಸ್ತುಗಳನ್ನು ಚೀಲದಲ್ಲಿ ಹಾಕಿ ಹೊರಲು ಜತೆಯಾಗಿರುತ್ತಾನೆ.

ಆಟಿ ಕಳಂಜ ಬಂದಾ ಅಂದ್ರೆ…

ಆಟಿ ಕಳೆಂಜ ಊರಿನ ರೋಗ ರುಜಿನಗಳನ್ನು ಹೋಗಲಾಡಿಸುವ ಮಾಂತ್ರಿಕ. ಆತ ಮನೆಗೆ ಬಂದನೆಂದರೆ ಮನೆಯವರು ಆತನನ್ನು ಸತ್ಕರಿಸಬೇಕು. ಹಿಂದಿನ ಕಾಲದಲ್ಲಿ ಆಟಿ ಕಳಂಜ ಆಹಾರ ವಸ್ತುಗಳನಷ್ಟೇ ಸ್ವೀಕರಿಸುತ್ತಿದ್ದ, ಆದರೆ ಕಾಲ ಬದಲಾಗದಂತೆ ಜನರು ಹಣ ನೀಡಲು ಶುರು ಮಾಡಿದರು. ಸಂಪ್ರದಾಯಗಳನ್ನು ನೋಡುವುದಾದರೆ ಆಟಿ ಕಳಂಜ ಮನೆ ಬಾಗಿಲಿಗೆ ಬಂದನೆಂದರೆ ಮನೆಯೊಡತಿ ಮೊರದಲ್ಲಿ ಭತ್ತ, ಅಕ್ಕಿ, ಮೆಣಸು, ಉಪ್ಪು, ಹುಳಿ, ಇದ್ದಿಲು ಮುಂತಾದವುಗಳನ್ನು ಇಟ್ಟು ಕೊಡುತ್ತಾರೆ. ಆಷಾಢದಲ್ಲಿ ಬಡತನ ಇದ್ದೇ ಇರುತ್ತದೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮನೆ ಮಂದಿ ಅಕ್ಕಿಯೋ, ತೆಂಗಿನಕಾಯಿಯೋ ಕೊಟ್ಟು ಕಳೆಂಜನನ್ನು ಕಳುಹಿಸಿಕೊಡುತ್ತಾರೆ. ಇನ್ನು ಮನೆಯಲ್ಲಿ ಮಾಡುವ ಆಹಾರ ತಿನಿಸುಗಳಾದ ಉಪ್ಪಡ್‌ ಪಚ್ಚಿರ್, (ಹಲಸಿನ ಹಣ್ಣಿನ ತೊಳೆ ಉಪ್ಪು ನೀರಲ್ಲಿ ಹಾಕಿರುವುದು) ಸಾಂತಾಣಿ (ಹಲಸಿನ ಹಣ್ಣಿನ ಬೀಜ ಒಣಗಿಸಿರುವುದು) ಮೊದಲಾದವುಗಳನ್ನು ಕೊಟ್ಟು ಕಳಿಸುತ್ತಾರೆ. ಆಟಿ ಕಳಂಜ ಮನೆ ಅಂಗಳದಿಂದ ಇಳಿದು ಹೋಗುವಾಗ ಕುರ್ದಿ ನೀರು (ಅರಶಿನ ಹಾಗೂ ಸುಣ್ಣ ಬೆರೆಸಿದಾಗ ಆಗುವ ಕೆಂಪು ನೀರು)ನ್ನು ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ, ಮಾರಿ ಕಳೆದು ಹೋಗುತ್ತದೆ ಎಂಬುದು ತುಳುನಾಡಿನ ಜನಪದ ನಂಬಿಕೆ.

ಇನ್ನೊಂದು ವಿಶೇಷ ಎಂದರೆ ಈ ಕಳಂಜ ಯಾವುದೇ ತೋಟದಿಂದ ಬಾಳೆಗೊನೆ, ತೆಂಗಿನಕಾಯಿಯನ್ನು ಹೇಳದೆ ಕೇಳದೆ ಕಿತ್ತುಕೊಂಡು ಹೋಗಬಹುದು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ.  ಕಳಂಜ ಕದ್ದೊಯ್ದ ಅಂದರೆ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಮಕ್ಕಳು ಇಲ್ಲದೆ ಹೆಂಗಸರಿಗೆ ಹರಸಿದರೆ, ಕರು ಹಾಕದ ಹಸುಗಳ ತಲೆ ಸವರಿದರೆ ಎಲ್ಲವೂ ಮಂಗಳಕರವಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ. ಹಾಗಾಗಿ ಕಳೆಂಜನನ್ನು ಸಂತಾನ ದೇವತೆ ಎಂದೂ ಕರೆಯುವುದುಂಟು.

ಕಳಂಜನಿಗೆ ಇಲ್ಲ ಗುಡಿ

ಕರಾವಳಿಯಲ್ಲಿ ದೈವರಾಧನೆಗೆ ಮಹತ್ತರವಾದ ಸ್ಥಾನವಿದೆ. ಆಷಾಢ ಮಾಸದಲ್ಲಿ ಇಲ್ಲಿನ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ಇಲ್ಲಿ ದೈವ ಸ್ಥಾನಗಳು ಬಾಗಿಲು ಮುಚ್ಚಿರುತ್ತವೆ. ದೈವದ ಬಾಗಿಲು ಮುಚ್ಚಿದ ಹೊತ್ತಲ್ಲಿ ಬರುವವನೇ ಆಟಿ ಕಳಂಜ. ಆಟಿಡ್ ಬತ್ತೆನೋ ಕಳೆಂಜೆ ಮಾರಿ ಕಳೆಪ್ಪೇನೋ(ಆಷಾಢದಲ್ಲಿ‌ ಬಂದಾನೋ‌ ಕಳೆಂಜ ಮಾರಿ ಕಳೆತಾನೆ) ಎಂಬ ಪಾಡ್ದನದಲ್ಲಿ  ಇರುವಂತೆ ಆಟಿ ಕಳೆಂಜ ಆಚರಣೆಯ ಉದ್ದೇಶವೇ ಮಾರಿ ಕಳೆಯುವುದು ಆಗಿರುತ್ತದೆ. ಈ ಕಳಂಜ ಆಟಿ ತಿಂಗಳಲ್ಲಿ ಮಾತ್ರಬರುತ್ತಾನೆ.  ಆತನನ್ನು ಗುಡಿಕಟ್ಟಿ ಆರಾಧಿಸುವುದಿಲ್ಲ. ಆಷಾಢ ಮಾಸದಲ್ಲಿ ಯಾವುದೇ ಭೂತಕೋಲಗಳಾಗಲೀ, ದೈವಾರಾಧನೆ ಹಬ್ಬಗಳಾಗಲೀ ನಡೆಯುವುದಿಲ್ಲ. ಹೀಗಾಗಿ ಭೂತಕಟ್ಟುವ ಸಮುದಾಯ ಕಳಂಜನ ವೇಷಧಾರಿಗಳಾಗಿ ಊರೂರು ಸುತ್ತಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಉಳ್ಳವರು ಇಲ್ಲದವರಿಗೆ ದಾನವಾಗಿ ಕೊಟ್ಟು ಹಂಚಿ ಉಣ್ಣುವ ರೀತಿಯೇ ಇದರ ಹಿಂದಿನ ಮರ್ಮ ಎಂದು ಹೇಳಬಹುದು.

ಇದನ್ನೂ ಓದಿ: ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ

ತುಳುನಾಡಿನಲ್ಲಿ ಆಟಿ ತಿಂಗಳ ವಿಶೇಷತೆ

ಜುಲೈ- ಅಗಸ್ಟ್ ತಿಂಗಳು ಆಷಾಢ ಅಥವಾ ಆಟಿ. ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ಬರುತ್ತದೆ. ತುಳುವರಿಗೆ ಆಟಿ ಅಮವಾಸ್ಯೆ ವಿಶೇಷವಾಗಿರುತ್ತದೆ. ಆಟಿ ಅಮವಾಸ್ಯೆಯಂದು ಹಾಲೆ ಕಷಾಯ ಕುಡಿಯುವ ಪದ್ಧತಿ ಇಲ್ಲಿ ಹಲವು ವರ್ಷಗಳಿಂದ ನಡೆದು ಬಂದಿದೆ. ಹಾಲೆ ಮರ (ಸಂಸ್ಕೃತದಲ್ಲಿ ಸಪ್ತಪರ್ಣಿ ಮರ) ಎಂದು ಕರೆಯುವ ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂದು ಹೇಳಲಾಗುತ್ತದೆ. ಆಟಿ ತಿಂಗಳಿಗೆ ಈ ಮರದಲ್ಲಿ ಎಲ್ಲಾ ಬಗೆಯ ದಿವ್ಯ ಔಷಧಗಳು ಸೇರಿಕೊಂಡಿರುತ್ತದೆ. ಹೀಗಾಗಿ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯವನ್ನು ಇಲ್ಲಿನ ಜನರು ಸೇವಿಸುತ್ತಾರೆ. ಹಾಲೆ ಮರದ ಕಷಾಯ ತೆಗೆದುಕೊಂಡು ಬರುವವರು ಮನೆಯ ಹಿರಿಯರೇ ಆಗಿರುತ್ತಾರೆ. ಯಾಕೆಂದರೆ ಕಾಡಿನಲ್ಲಿ ಇರುವ ಮರಗಳ ಗುರುತು ಇರುವುದು ಅವರಿಗೆ ತಾನೇ?.ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಹಾಲೆ ಮರದಿಂದ ಹಾಲು ಸಂಗ್ರಹಿಸಲು ತೊಗಟೆ ಕೆತ್ತಬೇಕು. ಹೀಗೆ ತೊಗಟೆಯನ್ನು ಬರೀ ಕಲ್ಲಿನಿಂದಲೇ ಕೆತ್ತ ಬೇಕು. ಹೀಗೆ ಕೆತ್ತಿ ತಂದ ತೊಗಟೆಯ ಮೇಲ್ಭಾಗದ ಕಪ್ಪು ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಕಲ್ಲಿನಿಂದಲೇ ಜಜ್ಜಿ ರಸ ತೆಗೆದುಕೊಳ್ಳಬೇಕು. ಇದಕ್ಕೆ ಕಾಳುಮೆಣಸು, ಓಮ ಕಾಳು ಮತ್ತು ಬೆಳ್ಳುಳ್ಳಿಯನ್ನು ಕೂಡಾ ಜಜ್ಜಿ ಹಾಕಿ ಎಲ್ಲವನ್ನೂ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಬಿಳಿ ಕಲ್ಲು(ತುಳುವಿನಲ್ಲಿ ಬೊಲ್ಲು ಕಲ್ಲ್)ನ್ನು ಕೆಂಡದಲ್ಲಿ ಕಾಯಿಸಿ ಹಾಕಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಕಷಾಯ ತುಂಬಾ ಕಹಿ ಇರುತ್ತದೆ. ಇದು ದೇಹಕ್ಕೆ ಉಷ್ಣ. ಹಾಗಾಗಿ ದೇಹ ಮತ್ತಷ್ಟು ಉಷ್ಣ ಆಗದಂತೆ ತಂಪು ಮಾಡಲು ಮೆಂತ್ಯ ಗಂಜಿ ಸೇವಿಸುತ್ತಾರೆ. ಆಟಿ ತಿಂಗಳಲ್ಲಿ ಕೆಸುವಿನ ಎಲೆಯಿಂದ ಮಾಡಿದ ಪತ್ರೋಡೆ, ಹಲಸಿನ ಹಣ್ಣಿನಿಂದ ಮಾಡಿದ ವಿವಿಧ ತಿಂಡಿ ತಿನಿಸುಗಳನ್ನು ಜನರು ಸೇವಿಸುತ್ತಿದ್ದು, ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ