Azadi ka amrit mahotsav Part 5: 1984-ಇಂದಿರಾ ಬಳಿಕ ರಾಜೀವ್ ಪ್ರಧಾನಿ ಗದ್ದುಗೆ, ಬೋಪೋರ್ಸ್ ಹಗರಣದಿಂದ ರಾಜೀವ್ ಇಮೇಜ್ ಡ್ಯಾಮೇಜ್, ಶಾ ಬಾನು ತೀರ್ಪು
75 Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು–ಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
41. ಇಂದಿರಾ ಬಳಿಕ ರಾಜೀವ್ ಪ್ರಧಾನಿ ಹುದ್ದೆಗೆ
ದೆಹಲಿಯಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗ ರಾಜೀವ್ ಗಾಂಧಿ ಕೋಲ್ಕತ್ತಾದಲ್ಲಿದ್ದರು. ಈ ವೇಳೆ ರಾಜೀವ್ ಅವರಿಗೆ ತಾಯಿ ಇಂದಿರಾ ಮೇಲೆ ದಾಳಿಯಾಗಿದೆ, ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದಷ್ಟೇ ಹೇಳಿ ಕೋಲ್ಕತ್ತಾದಿಂದ ದೆಹಲಿಗೆ ತಕ್ಷಣವೇ ಬರುವಂತೆ ಸಂದೇಶ ನೀಡಲಾಗಿತ್ತು. ಕೋಲ್ಕತ್ತಾದಿಂದ ವಿಮಾನದಲ್ಲಿ ದೆಹಲಿಗೆ ಬಂದ ಬಳಿಕವಷ್ಟೇ ರಾಜೀವ್‌ಗೆ ತಮ್ಮ ತಾಯಿ ಇಂದಿರಾಗಾಂಧಿ ಹತ್ಯೆಯಾಗಿರುವ ವಿಷಯ ತಿಳಿಯಿತು. ಇಂದಿರಾಗಾಂಧಿ ಹತ್ಯೆಯಾದ ಬಳಿಕ ರಾಜೀವ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಬೇಕೆಂಬ ಕೂಗು ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಂದ ಕೇಳಿ ಬಂತು. ಪರಿಣಾಮವಾಗಿ ರಾಜೀವ್ ಗಾಂಧಿ ದೇಶದ ಪ್ರಧಾನಿ ಹುದ್ದೆಗೇರಿದ್ದರು. ಇಂದಿರಾಗಾಂಧಿ ಹತ್ಯೆ ನಂತರದ ಸಿಖ್ ಹತ್ಯಾಕಾಂಡಕ್ಕೆ ಪ್ರತಿಕ್ರಿಯಿಸಿದ್ದ ರಾಜೀವ್ ಗಾಂಧಿ, ದೊಡ್ಡ ಮರ ಬಿದ್ದಾಗ ಅದರ ಸುತ್ತಲಿನ ಭೂಮಿ ಕಂಪಿಸುವುದು ಸಹಜ ಎಂದು ಹೇಳಿದ್ದರು. ಈ ಮೂಲಕ ಸಿಖ್ ವಿರೋಧಿ ಹತ್ಯಾಕಾಂಡವನ್ನ ರಾಜೀವ್ ಗಾಂಧಿ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಸಂಜಯ್ ಗಾಂಧಿ ಪ್ರತಿನಿಧಿಸುತ್ತಿದ್ದ ಅಮೇಥಿ ಕ್ಷೇತ್ರದಿಂದ ಲೋಕಸಭೆಗೆ ರಾಜೀವ್ ಆಯ್ಕೆಯಾಗಿದ್ದರು. ಪ್ರಧಾನಿಯಾದ ಬಳಿಕ ಲೋಕಸಭೆ ವಿಸರ್ಜಿಸಿ ಹೊಸದಾಗಿ ಲೋಕಸಭಾ ಚುನಾವಣೆ ನಡೆಸಲು ರಾಜೀವ್ ಗಾಂಧಿ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿದ್ದರು. 1984ರ ಡಿಸೆಂಬರ್ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 404 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು.
42. 1982ರಲ್ಲಿ ಸ್ಯಾಟಲೈಟ್ ಟಿವಿ ಆರಂಭ
ಭಾರತದಲ್ಲಿ ಸ್ಯಾಟಲೈಟ್ ಇನ್ಸ್ತ್ರುಕ್ಷನಲ್ ಟೆಲಿವಿಷನ್ ಎಕ್ಸ್ಪೀರಿಮೆಂಟ್ 1975ರಲ್ಲಿ ಪ್ರಾರಂಭವಾಯಿತು. 1982ರಲ್ಲಿ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಅನ್ನು ಲಾಂಚ್ ಮಾಡಲಾಯಿತು. ಇದಾದ ಬಳಿಕ ಭಾರತದಲ್ಲಿ ಟ್ರಾನ್ಸ್ಮಿಟರ್ ಸಂಖ್ಯೆ ಹೆಚ್ಚಾಯಿತು. ಜೊತೆಗೆ ಕಲರ್ ಟಿವಿ ಪ್ರಸಾರ ಆರಂಭವಾಯಿತು. ಏಷ್ಯಾನ್ ಗೇಮ್ಸ್ , ಕಾಮನ್ ವೆಲ್ತ್ ಗೇಮ್ಸ್ಗಳನ್ನು ಕಲರ್ ಟಿವಿಯಲ್ಲಿ ಪ್ರಸಾರ ಮಾಡಲಾಯಿತು. 1990ರ ಆರಂಭದಲ್ಲಿ ಕೇಬಲ್ ಮತ್ತು ಸ್ಯಾಟಲೈಟ್ ಟಿವಿಗಳ ಮೂಲಕ ಸ್ಯಾಟಲೈಟ್ ಟಿವಿಗಳ ಯುಗ ಭಾರತದಲ್ಲಿ ಪ್ರಾರಂಭವಾಯಿತು. 1991ರಲ್ಲಿ ಪ್ರಾರಂಭವಾದ ಗಲ್ಪ್ ಯುದ್ಧದ ವೇಳೆ ಸಿಎನ್‌ಎನ್ ಖಾಸಗಿ ನ್ಯೂಸ್ ಚಾನಲ್ ಆರಂಭವಾಯಿತು. ಅದೇ ವರ್ಷ ವಪವೋ ಹಚಿಸನ್ ಗ್ರೂಪ್‌ನ ಸ್ಟಾರ್ ಟಿವಿ ಪ್ರಸಾರ ಆರಂಭಿಸಿತು. ಇದರೊಂದಿಗೆ ಭಾರತದಲ್ಲಿ ಖಾಸಗಿ ಸ್ಯಾಟಲೈಟ್ ಚಾನಲ್ಗಳ ಪ್ರಸಾರ ಆರಂಭವಾಯಿತು. ಚೀನಾದ ಏಷ್ಯಾ ಸ್ಯಾಟ್-1 ಮೂಲಕ ಸ್ಟಾರ್ ಟಿವಿ ಪ್ರಸಾರವಾಗುತ್ತಿತ್ತು. ಏಷ್ಯಾದ 38 ದೇಶಗಳಲ್ಲಿ ಸ್ಟಾರ್ ಟಿವಿ ಪ್ರಸಾರವಾಗುತ್ತಿತ್ತು. 1992ರಲ್ಲಿ ಜೀ ಟಿವಿಯು ಮನರಂಜನಾ ಸ್ಯಾಟಲೈಟ್ ಚಾನಲ್ ಅನ್ನು ಪ್ರಾರಂಭಿಸಿ ಕೇಬಲ್ ಮೂಲಕ ಪ್ರಸಾರ ಮಾಡುತ್ತಿತ್ತು. 1995ರ ವೇಳೆಗೆ ದೇಶದಲ್ಲಿ 1.2 ಕೋಟಿ ಮನೆಗಳಲ್ಲಿ ಜನರು ಸ್ಯಾಟಲೈಟ್ ಮತ್ತು ಕೇಬಲ್ ಟಿವಿಗಳನ್ನು ನೋಡುತ್ತಿದ್ದರು. 2000ರ ವೇಳೆಗೆ 3.5 ಕೋಟಿ ಮನೆಗಳಲ್ಲಿ ಸ್ಯಾಟಲೈಟ್ ಮತ್ತು ಕೇಬಲ್ ಟಿವಿಗಳನ್ನು ಜನರು ನೋಡುತ್ತಿದ್ದರು. 2000ನೇ ಇಸವಿ ವೇಳೆಗೆ 40 ಕೇಬಲ್ ಮತ್ತು ಸ್ಯಾಟಲೈಟ್ ಟಿವಿಗಳು ಪ್ರಸಾರವಾಗುತ್ತಿದ್ದವು.
43. ಬೋಪೋರ್ಸ್ ಹಗರಣದಿಂದ ರಾಜೀವ್‌ಗೆ ಕಳಂಕ
ಬೋಪೋರ್ಸ್ ಹಗರಣ ಭಾರತದ ರಕ್ಷಣಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ ಹಗರಣ. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಗೆ ಇದ್ದ ದೊಡ್ಡ ಇಮೇಜ್ ಅನ್ನೇ ಈ ಹಗರಣ ಡ್ಯಾಮೇಜ್ ಮಾಡಿತ್ತು. 1986ರ ಮಾರ್ಚ್ 24 ರಂದು ಭಾರತ ಸರ್ಕಾರ ಹಾಗೂ ಸ್ವೀಡನ್ನ ಶಸ್ತ್ರಾಸ್ತ್ರ ತಯಾರಿಕ ಕಂಪನಿ ಎ.ಬಿ. ಬೋಪೋರ್ಸ್ ಜೊತೆಗೆ 155ಎಂಎಂ ಹೌಟಿಜರ್ ಗನ್ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದು 1,437 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ. ಆದರೆ ಒಪ್ಪಂದವಾದ ಒಂದು ವರ್ಷದ ಬಳಿಕ ಅಂದರೆ 1987ರ ಏಪ್ರಿಲ್ 16ರಂದು ಸ್ವೀಡನ್ ರೇಡಿಯೋ ಚಾನೆಲ್ವೊಂದು 400 ಹೌಟಿಜನ್ ಗನ್ ಪೂರೈಕೆಗೆ ಬೋಪೋರ್ಸ್ ಕಂಪನಿಯು ಭಾರತದ ಉನ್ನತ ರಾಜಕಾರಣಿಗಳಿಗೆ ಲಂಚ ನೀಡಿದೆ ಎಂದು ವರದಿ ಪ್ರಸಾರ ಮಾಡಿತ್ತು. ಇದು ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ದೊಡ್ಡ ಬಿರುಗಾಳಿ ಎಬ್ಬಿಸಿತು. 1987ರ ಏಪ್ರಿಲ್ 20ರಂದು ರಾಜೀವ್ ಗಾಂಧಿ ಅವರು ಲೋಕಸಭೆಯಲ್ಲಿ ಬೋಪೋರ್ಸ್ ಕಂಪನಿಯ ಹೌಟಿಜರ್ ಗನ್ ಖರೀದಿಯಲ್ಲಿ ಯಾವುದೇ ಲಂಚ ನೀಡಿಲ್ಲ. ಮಧ್ಯವರ್ತಿಗಳ ಪಾತ್ರ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ 64 ಕೋಟಿ ರೂಪಾಯಿಯನ್ನು ಲಂಚವಾಗಿ ರಾಜೀವ್ ಗಾಂಧಿ ಆಪ್ತರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂತು. ರಾಜೀವ್ ಗಾಂಧಿ ಸರ್ಕಾರದಲ್ಲಿ ಹಣಕಾಸು, ರಕ್ಷಣಾ ಮಂತ್ರಿಯಾಗಿದ್ದ ವಿ.ಪಿ.ಸಿಂಗ್ ರಾಜೀವ್ ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಕಾಂಗ್ರೆಸ್ ತ್ಯಜಿಸಿದ್ದರು. ಬೋಪೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಮಾತ್ರವಲ್ಲದೇ, ಆಪ್ತರಾಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರು ಕೂಡ ಕೇಳಿ ಬಂದಿತ್ತು. ಬಳಿಕ ಹಗರಣದಲ್ಲಿ ಅಮಿತಾಬ್ ಬಚ್ಚನ್ ಪಾತ್ರವಿಲ್ಲ ಎಂದು ಕೋರ್ಟ್ ಹೇಳಿತ್ತು. 1989ರ ಲೋಕಸಭಾ ಚುನಾವಣೆಯಲ್ಲಿ ಬೋಪೋರ್ಸ್ ಹಗರಣವೇ ಪ್ರತಿಪಕ್ಷಗಳಿಗೆ ದೊಡ್ಡ ಚುನಾವಣಾ ಅಸ್ತ್ರವಾಗಿತ್ತು. ಬೋಪೋರ್ಸ್ ಹಗರಣದ ಆರೋಪದಿಂದ 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿತ್ತು. ವಿ.ಪಿ.ಸಿಂಗ್ ದೇಶದ ಪ್ರಧಾನಿಯಾಗಿ ಆಯ್ಕೆಯಾದರು.
44. ಶಾ ಭಾನು ತೀರ್ಪು
ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕಿನ ರಕ್ಷಣೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಶಾ ಭಾನು ಪ್ರಕರಣದ ತೀರ್ಪು ದೊಡ್ಡ ಮೈಲಿಗಲ್ಲು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಧ್ಯಪ್ರದೇಶದ ಇಂದೋರ್‌ನ ಶಾ ಭಾನು ಎಂಬ ಮುಸ್ಲಿಂ ಮಹಿಳೆಗೆ ಗಂಡ ಮೊಹಮ್ಮದ್ ಅಹಮದ್ ಖಾನ್ ತಲಾಖ್ ನೀಡುವ ಮೂಲಕ ಡೈವೋರ್ಸ್ ನೀಡಿದ್ದರು. ಬಳಿಕ ಜೀವನ ಪೂರ್ತಿ ಪತಿಯೇ ತನಗೆ ಹಾಗೂ ಐವರು ಮಕ್ಕಳಿಗೆ ಜೀವನಾಂಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ನ ಸಿಜೆಐ ಆಗಿದ್ದ ವೈ.ವಿ.ಚಂದ್ರಚೂಢ ಅವರ ಪೀಠವು ಇದ್ಧತ್ ಅವಧಿಯಲ್ಲದೇ, ಜೀವನ ಪೂರ್ತಿ ವಿಚ್ಛೇದಿತ ಪತ್ನಿಗೆ ಪತಿಯೇ ಜೀವನಾಂಶ ನೀಡಬೇಕೆಂದು 1985ರಲ್ಲಿ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾದುದು, ತೀರ್ಪು ಸರಿಯಲ್ಲ ಎಂಬ ಆಕ್ಷೇಪ ದೇಶದ ಮುಸ್ಲಿಂ ಸಮುದಾಯದಿಂದ ವ್ಯಕ್ತವಾಯಿತು. ರಾಜಕೀಯ ವಿಷಯವಾಗಿಯೂ ಇದು ತಿರುವು ಪಡೆದುಕೊಂಡಿತ್ತು. ಮುಸ್ಲಿಂ ಸಮುದಾಯವು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ದವಾಗಿ ಹೊಸ ಕಾಯಿದೆ ತರಬೇಕೆಂದು ರಾಜೀವ್ ಗಾಂಧಿ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಈ ಒತ್ತಡಕ್ಕೆ ಮಣಿದ ರಾಜೀವ್ ಗಾಂಧಿ ಸರ್ಕಾರವು ಮುಸ್ಲಿಂ ಮಹಿಳಾ ವಿಚ್ಛೇದನ ಕಾಯಿದೆಯಿಂದ ರಕ್ಷಣಾ ಕಾಯಿದೆ-1986 ಅನ್ನು ಜಾರಿಗೆ ತಂದಿತ್ತು. ಈ ಕಾಯಿದೆಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಇದ್ದತ್ ಅವಧಿಯಲ್ಲಿ ಮಾತ್ರ ಜೀವನಾಂಶ ನೀಡಬೇಕೆಂದು ಹೇಳಿದ್ದರು.
45. ಅಯೋಧ್ಯೆಯಲ್ಲಿ ಮಂದಿರದ ಗೇಟ್ ತೆಗೆಸಿ ಪೂಜೆಗೆ ಅವಕಾಶ
ಶಾ ಭಾನು ಪ್ರಕರಣದಲ್ಲಿ ಸುಪ್ರೀಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಕೇಂದ್ರದ ರಾಜೀವ್ ಗಾಂಧಿ ಸರ್ಕಾರ ಹೊಸ ಕಾಯಿದೆ ಜಾರಿಗೆ ತಂದಿತ್ತು. ಇದರಿಂದ ರಾಜೀವ್ ಗಾಂಧಿ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ಭಾವನೆ ಹಿಂದೂಗಳಲ್ಲಿ ಬಂದಿತ್ತು. ಈ ಭಾವನೆಯನ್ನು ಹೋಗಲಾಡಿಸಲು ಬಹುಸಂಖ್ಯಾತ ಹಿಂದೂಗಳನ್ನ ಓಲೈಸುವ ತೀರ್ಮಾನವನ್ನು ರಾಜೀವ್ ಗಾಂಧಿ ತೆಗೆದುಕೊಂಡರು. ಇದರ ಭಾಗವಾಗಿಯೇ ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿಗೆ ಜಾಗಕ್ಕೆ ಹಾಕಿದ್ದ ಬೀಗವನ್ನು ತೆಗೆಸಿ ಅಲ್ಲಿ ಜನರಿಗೆ ರಾಮಲಲ್ಲಾ ದರ್ಶನ ಮಾಡಲು ಅವಕಾಶ ಕೊಡುವ ತೀರ್ಮಾನ ಕೈಗೊಂಡರು. ರಾಜೀವ್ ಗಾಂಧಿ ಆಪ್ತರಾಗಿದ್ದ ಅರುಣ್ ನೆಹರು ಈ ಸಲಹೆಯನ್ನು ರಾಜೀವ್ ಗಾಂಧಿಗೆ ನೀಡಿದ್ದರು. ಅಯೋಧ್ಯೆಯ ರಾಮಲಲ್ಲಾ ಜಾಗದ ಬೀಗ ತೆಗೆಸಿ ಪೂಜೆಗೆ ಅವಕಾಶ ನೀಡುವುದ ಬಗ್ಗೆ ಯುಪಿ ಸಿಎಂ ಆಗಿದ್ದ ಬೀರ್ ಬಹಾದ್ದೂರ್ ಸಿಂಗ್ರನ್ನು ರಾಜೀವ್ ಗಾಂಧಿ ಮನವೊಲಿಸಿದ್ದರು. ಅಯೋಧ್ಯೆಯ ವಿವಾದಿತ ರಾಮಲಲ್ಲಾ ಜಾಗದ ಗೇಟ್ ಬೀಗ ತೆಗೆಯುವುದನ್ನು ದೂರದರ್ಶನದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲು ರಾಜೀವ್ ಗಾಂಧಿ ಸರ್ಕಾರ ನಿರ್ದೇಶನ ನೀಡಿತ್ತು. ಈ ಮೂಲಕ ಹಿಂದೂಗಳನ್ನು ತಮ್ಮತ್ತ ಸೆಳೆಯಲು ರಾಜೀವ್ ಗಾಂಧಿ ಪ್ಲ್ಯಾನ್ ಮಾಡಿದ್ದರು. ಆದರೆ ಇದಾದ ಬಳಿಕ ವಿಶ್ವ ಹಿಂದೂ ಪರಿಷತ್ ಮಂದಿರ ನಿರ್ಮಾಣದ ಹೋರಾಟವನ್ನು ಚುರುಕುಗೊಳಿಸಿತು. ಜೊತೆಗೆ 1989ರ ಬಳಿಕ ಬಿಜೆಪಿ ಕೂಡ ಮಂದಿರ ನಿರ್ಮಾಣವನ್ನು ತನ್ನ ರಾಜಕೀಯ ಅಜೆಂಡಾದಲ್ಲಿ ಸೇರಿಸಿಕೊಂಡು ಹೋರಾಟ ನಡೆಸಿತು. ಜೊತೆಗೆ 1989ರ ನವಂಬರ್ 10ರಂದು ಅಯೋಧ್ಯೆಯ ವಿವಾದಿತ ಜಾಗದಲ್ಲೇ ಕೇಂದ್ರ ಹಾಗೂ ಯುಪಿ ಸರ್ಕಾರದ ನಿರ್ದೇಶನದಂತೆ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು.
46. ಮಂಡಲ್ ಆಯೋಗದ ವರದಿ ವಿವಾದ
ದೇಶದಲ್ಲಿ ಬಹುಸಂಖ್ಯಾತ ವರ್ಗವೇ ಹಿಂದುಳಿದ ವರ್ಗವಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸರಿಯಾದ ಮೀಸಲಾತಿ ಇರಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಇತ್ತು. ಅದೇ ರೀತಿ ಹಿಂದುಳಿದ ವರ್ಗಗಳಿಗೆ ಶೇ.27 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರದ ಉದ್ಯೋಗ ಹಾಗೂ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಉದ್ಯೋಗದಲ್ಲಿ ಮೀಸಲಾತಿ ನೀಡುವುದಾಗಿ 1990 ಆಗಸ್ಟ್ 7ರಂದು ಸಂಸತ್‌ನ ಉಭಯ ಸದನಗಳಲ್ಲಿ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಘೋಷಿಸಿದ್ದರು. ಈ ಮೂಲಕ ಜನತಾದಳ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಬೆಂಬಲ ಪಡೆಯುವ ರಾಜಕೀಯ ತಂತ್ರವೂ ಈ ಘೋಷಣೆಯ ಹಿಂದೆ ಇತ್ತು.
ಓಬಿಸಿ ಮೀಸಲಾತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು 1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರವು ಬಿ.ಪಿ.ಮಂಡಲ್ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತ್ತು. 1980ರ ಡಿಸೆಂಬರ್ 31ರಂದು ಬಿ.ಪಿ.ಮಂಡಲ್ ಆಯೋಗವು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಮೀಸಲಾತಿ ವರದಿ ಬಗ್ಗೆ ಕೇಂದ್ರ ಸರ್ಕಾರ ಹತ್ತು ವರ್ಷಗಳ ಕಾಲ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. 1990ರಲ್ಲಿ ವಿ.ಪಿ.ಸಿಂಗ್ ಹತ್ತು ವರ್ಷ ಹಳೆಯ ಮೀಸಲಾತಿ ವರದಿಯನ್ನು ಜಾರಿಗೊಳಿಸುವ ಘೋಷಣೆ ಮಾಡಿ ದೇಶದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರು. ವಿ.ಪಿ.ಸಿಂಗ್ ಸರ್ಕಾರದ ಶೇ.27 ರಷ್ಟು ಓಬಿಸಿ ಮೀಸಲಾತಿ ನೀಡಿಕೆ ವಿರೋಧಿಸಿ ದೇಶದಲ್ಲಿ ಮಂಡಲ್ ವರದಿ ವಿರೋಧಿ ಹೋರಾಟಗಳು ನಡೆದವು. 1990ರ ಸೆಪ್ಟೆಂಬರ್ನಲ್ಲಿ ದೆಹಲಿಯ ರಾಜೀವ್ ಗೋಸಾಮಿ ಎಂಬ ವಿದ್ಯಾರ್ಥಿ ಮಂಡಲ್ ವರದಿ ವಿರೋಧಿಸಿ ನಡುರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಇದೇ ರೀತಿ 60 ವಿದ್ಯಾರ್ಥಿಗಳು ಆತ್ಮಾಹುತಿ ಮಾಡಿಕೊಂಡರು. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಓಬಿಸಿ ಮೀಸಲಾತಿಯು ಅಂತಿಮವಾಗಿ 1992ರಲ್ಲಿ ಜಾರಿಗೆ ಬಂದಿತು. ಶಿಕ್ಷಣ ಕೋಟಾವು 2006ರಲ್ಲಿ ಜಾರಿಗೆ ಬಂದಿತು.
47. ಅಡ್ವಾಣಿ ರಥ ಯಾತ್ರೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸಲು ಹಾಗೂ ಅಯೋಧ್ಯೆಯ ರಾಮಮಂದಿರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯಾತ್ರೆ ನಡೆಸಲು ಬಿಜೆಪಿ ಆಗ್ರಗಣ್ಯ ನಾಯಕ ಲಾಲ್ ಕೃಷ್ಣ ಅಡ್ವಾಣಿ 1990ರ ಸೆಪ್ಟೆಂಬರ್ನಲ್ಲಿ ನಿರ್ಧರಿಸಿದ್ದರು. ಈ ವಿಷಯ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ಗೆ ಗೊತ್ತಾದಾಗ ಅಡ್ವಾಣಿ ದೇಶಾದ್ಯಂತ ಸಂಚರಿಸಿ ಜನರನ್ನು ತಲುಪಲು ಅನುಕೂಲವಾಗುವಂತೆ ಜೀಪ್ ಯಾತ್ರೆ ನಡೆಸಿದರೆ ಹೇಗೆಂದು ಅಡ್ವಾಣಿರನ್ನು ಕೇಳಿದ್ದರು. ಕೊನೆಗೆ ಮಿನಿಬಸ್ ಅನ್ನು ರಥವಾಗಿ ಪರಿವರ್ತಿಸಿ ಯಾತ್ರೆ ನಡೆಸಲು ನಿರ್ಧರಿಸಲಾಯಿತು. ಗುಜರಾತ್‌ನ ಸೋಮನಾಥ್ದಿಂದ ಅಯೋಧ್ಯೆಯವರೆಗೂ ಅಡ್ವಾಣಿ ರಥಯಾತ್ರೆ ಹೊರಟರು. ಅಲ್ಲಲ್ಲಿ ರಥದಲ್ಲಿ ನಿಂತು ಜನರನ್ನು ಉದ್ದೇಶಿಸಿ ರಾಮಮಂದಿರ ನಿರ್ಮಾಣದ ಬಗ್ಗೆ ಭಾಷಣ ಮಾಡುತ್ತಿದ್ದರು. ರಥಯಾತ್ರೆಯಿಂದ ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಗುಜರಾತ್ನಲ್ಲಿ ಕೋಮುಗಲಭೆಗಳ ನಡೆದವು. ಅಡ್ವಾಣಿ ರಥಯಾತ್ರೆಯು 1990ರ ಆಕ್ಟೋಬರ್ 23 ರಂದು ಬಿಹಾರದ ಸಮಸ್ಟಿಪುರ ಪ್ರವೇಶಿಸಿದಾಗ, ಬಿಹಾರ ಸರ್ಕಾರ ಅಡ್ವಾಣಿರನ್ನು ಬಂಧಿಸಿತ್ತು. ಆಗ ಸಮಸ್ಟಿಪುರ ಎಸ್ಪಿ ಆಗಿದ್ದ ಆರ್.ಕೆ.ಸಿಂಗ್ ಈಗ ಕೇಂದ್ರದಲ್ಲಿ ಇಂಧನ ಖಾತೆ ಸಚಿವರಾಗಿದ್ದಾರೆ. ಬಿಹಾರದಲ್ಲಿ ಆಗ ಲಾಲೂ ಪ್ರಸಾದ್ ಯಾದವ್ ಸರ್ಕಾರ ಇತ್ತು. ಸಿಎಂ ಲಾಲೂ ಪ್ರಸಾದ್ , ಬಿಜೆಪಿ ನಾಯಕ ಅಡ್ವಾಣಿರನ್ನು ಬಂಧಿಸುವ ತೀರ್ಮಾನ ಕೈಗೊಂಡು ಜಾರಿಗೊಳಿಸಿದ್ದರು. ಆದರೆ ಅಡ್ವಾಣಿ ರಥಯಾತ್ರೆಯಿಂದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗಿದ್ದು ಸತ್ಯ . 1989ರ ಲೋಕಸಭಾ ಚುನಾವಣೆಯಲ್ಲಿ 85 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, 1991ರ ಲೋಕಸಭಾ ಚುನಾವಣೆಯಲ್ಲಿ 120 ಕ್ಷೇತ್ರಗಳಲ್ಲಿ ಗೆದ್ದಿತ್ತು. 1991ರ ಲೋಕಸಭಾ ಚುನಾವಣೆ ಮಧ್ಯೆಯೇ ರಾಜೀವ್ ಗಾಂಧಿ ಹತ್ಯೆಯಾಗಿದ್ದು ಬಿಜೆಪಿಗೆ ಚುನಾವಣಾ ಹಿನ್ನಡೆಗೆ ಕಾರಣವಾಯಿತು. (ಮುಂದುವರಿಯುವುದು)
ವರದಿ: ಚಂದ್ರಮೋಹನ್
Published On - 9:10 am, Sun, 14 August 22